ಬೆಳಗಾವಿ
ತಹಶಿಲ್ದಾರ ಕಚೇರಿಯಲ್ಲಿನ ಎಸ್‌ಡಿಎ ರುದ್ರೇಶ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಮತ್ತೊಂದು ಅನಾಮಧೇಯ ಪತ್ರ ಬರೆಯಲಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅನಾಮಧೇಯ ವ್ಯಕ್ತಿ ಪತ್ರ ಬರೆದಿದ್ದಾರೆ.
ರುದ್ರೇಶ ಆತ್ಮಹತ್ಯೆಗೆ ಕಾರಣರಾದ ತಹಶಿಲ್ದಾರ ಹಾಗೂ ಸಿಬ್ಬಂದಿ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ಪ್ರಕರಣ ವಹಿಸಲು ಮನವಿ ಮಾಡಲಾಗಿದೆ.

ರುದ್ರೇಶ ಸಾವಿನ ಕುರಿತು ಸಾಕಷ್ಟು ಅನುಮಾನಗಳಿವೆ. ಪ್ರಕರಣದ ತನಿಖೆ ದಿಕ್ಕು ತಪ್ಪಿಸಲು ತಹಶಿಲ್ದಾರ ಕಚೇರಿ ಸಿಬ್ಬಂದಿ ತಹಶಿಲ್ದಾರ ಬಸವರಾಜ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಹೇಳಲಾಗಿದೆ.
ಕಚೇರಿ ಸಿಬ್ಬಂದಿಗೆ ಎನೂ ಗೊತ್ತಿಲ್ಲ ಎನ್ನುವಂತೆ ಹೇಳಿಕೆ ನೀಡುವಂತೆ ಕೆಲವರು ಒತ್ತಡ ಹಾಕಿದ್ದಾರೆ. ಗ್ರಾಮ ಆಡಳಿತ ಅಧಿಕಾರಿ ಎಸ್.ಪಿ ಶಿಂಧೆ, ಗ್ರಾಮ ಆಡಳಿತಾಧಿಕಾರಿ ಕಿರಣ ತೋರಗಲ, ದ್ವೀತಿಯ ದರ್ಜೆ ಸಹಾಯಕಿ ಸುರೇಖಾ ನೇರ್ಲಿ, ಗ್ರಾಮ ಆಡಳಿತಾಧಿಕಾರಿ ಬಸನಗೌಡ ಪಾಟೀಲ ಒತ್ತಡ ಹಾಕಿದವರು ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಹಿಂದೆ ತಹಶಿಲ್ದಾರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರದೀಪ ಪಾಟೀಲ ಆತ್ಮಹತ್ಯೆಗೆ ಸುರೇಖಾ ನೇರ್ಲಿ ಕಾರಣರಾಗಿದ್ದಾರೆ. ಎಸ್.ಪಿ ಶಿಂಧೆ ಮತ್ತು ತಹಶಿಲ್ದಾರ ಡ್ರೈವರ್ ಯಲ್ಲಪ್ಪ ಬಡಸದ ಕೇಸ್ ಮುಚ್ಚಿ ಹಾಕಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಜವಾನ ಪ್ರದೀಪ ಸಾವಿನ ಕುರಿತು ಕೂಡ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.
ತಹಶಿಲ್ದಾರಗೆ ಜಾಮೀನು ಸಿಕ್ಕ ದಿನ ಶಿಂಧೆ ಕಚೇರಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಶಿಂಧೆ ವಿರುದ್ಧ ಮಾತಾಡಿದ ಸಿಬ್ಬಂದಿಗೆ ತಹಶಿಲ್ದಾರ ಮೂಲಕ ಕಿರುಕುಳ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಕಿರಣ ತೋರಗಲ ಘಟನೆ ಆದ ದಿನದಿಂದ ಕಚೇರಿಗೆ ಬಂದಿರುವುದಿಲ್ಲ. ಬಸನಗೌಡ ಪಾಟೀಲ, ಶಿಂಧೆ ತಹಶಿಲ್ದಾರ ಬಲಗೈ ಬಂಟರಂತೆ ಇದ್ದಾರೆ. ಜಾಮೀನು ಕೊಡಿಸಲು ಇವರೇ ಹಣವನ್ನ ನೀಡಿದ್ದಾರೆ ಎಂದು ಬರೆಯಲಾಗಿದೆ.
ಕೆಲವು ದಿನಗಳ ಹಿಂದೆ ಅಷ್ಟೇ ಗ್ರಾಮದ ರಿ.ಸ.ನಂ 82/ಪಿ1 ಜಮೀನು ಮಾಲೀಕ ಮಹೇಶ ಚೌಗುಲೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಕಾರಣ ಬಸನಗೌಡ ಪಾಟೀಲ ಮತ್ತು ಶ್ರೀಕಾಂತ್ ಹೈಗರ್ ಕಾರಣ ಅಂತಾ ದೂರು ಬಂದಿರುತ್ತೆ. ಇದರ ವಿಚಾರಣೆ ಮಾಡಿರುವುದಿಲ್ಲ. ಈ ಕೇಸ್ ತನಿಖೆ ಕೂಡ ಆಗಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಪ್ರಕರಣಗಳಲ್ಲಿ ರಾಜಕೀಯ ಒತ್ತಡ ಇರುವುದರಿಂದ ಸಿಬಿಐಗೆ ಒಪ್ಪಿಸಬೇಕು. ನೊಂದ ಕುಟುಂಬಗಳಿಗೆ ನ್ಯಾಯವನ್ನ ಕೊಡಿಸುವಂತೆ ರಾಷ್ಟ್ರಪತಿಗೆ ಮನವಿ ಮಾಡಲಾಗಿದೆ.
ನೊಂದ ಸಿಬ್ಬಂದಿ ಹೆಸರಲ್ಲಿ ರಾಷ್ಟ್ರಪತಿಗೆ ಬರೆದಿರುವ ಪತ್ರದಲ್ಲಿ ಹಲವು ಸ್ಪೋಟಕ ಅಂಶಗಳು ಬೆಳಕಿಗೆ ಬಂದಿದೆ.
ನ.5ರಂದು ತಹಶಿಲ್ದಾರ ಕಚೇರಿಯಲ್ಲೇ ಎಸ್ ಡಿ ಎ ರುದ್ರೇಶ ಯಡವಣ್ಣವರ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಕುರಿತು ತಹಶಿಲ್ದಾರ ಬಸವರಾಜ ನಾಗರಾಳ, ಹೆಬ್ಬಾಳ್ಕರ ಪಿಎ ಸೋಮು, ಎಫ್‌ಡಿಎ ಅಶೋಕ ಕಬ್ಬಲಿಗೇರ ಮೇಲೆ ಕೇಸ್ ದಾಖಲಾಗಿತ್ತು.