ಬೆಳಗಾವಿ
ನನ್ನ ವಿರುದ್ಧ ಷಡ್ಯಂತ್ರ ಆದಾಗ ನೂರು ಸಿಡಿ ಬಂದ್ರೂ ನಾನು ಅಂಜಲ್ಲ ಎಂದಿದ್ದೆ. ಜನರಿಗೆ ಮೋಸ ಮಾಡಿದ್ರೇ ನಾನು ಅಂಜುತ್ತಿದ್ದೆ ಸಿಡಿಗೆ ಅಂಜಲ್ಲ ಎಂದಿದ್ದೆ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ ಭಗೀರಥ ಮೂರ್ತಿ ಉದ್ಘಾಟನೆ ಬಳಿಕ ರಮೇಶ ಜಾರಕಿಹೊಳಿ ಮಾತನಾಡಿದರು.
ನನ್ನ ವಿರುದ್ಧ ವೈಯಕ್ತಿಕ ಷಡ್ಯಂತ್ರ ಆಗಿದೆ ನಾನು ಅಂಜಲ್ಲ ಎಂದು ಸ್ವಾಮೀಜಿಗಳ ಮುಂದೆ ಹೇಳಿದ್ದೆ. ಸಿಡಿ ಬಿಡುಗಡೆಯಾದಾಗ ಸ್ವಾಮೀಜಿಗಳು ಧೈರ್ಯ ಹೇಳಲು ಬಂದಾಗ ಈ ಮಾತು ಹೇಳಿದ್ದೆ ಎಂದು ಹೇಳಿದರು.
ನಮ್ಮ ಸಮಾಜದಲ್ಲಿ ಒಡೆದು ಆಳುವ ನೀತಿಯಿಂದ ಬಹಳ ಅನಾಹುತ ಆಗಿವೆ. ಕೊನೆ ಘಳಿಗೆಯಲ್ಲಿ ಹಿಂದುಳಿದ ಜನಾಂಗ ಒಂದಾಗಿದೆ. ವಾಲ್ಮೀಕಿ, ಕುರುಬರು, ಉಪ್ಪಾರ ಅಷ್ಟೇ ಅಲ್ಲ ಎಲ್ಲ ಸರ್ವ ಸಮಾಜ ಸೇರಿ ಶೇಕಡಾ 74ರಷ್ಟಿದ್ದೇವೆ. ಕೇವಲ 26 ಪರ್ಸಂಟ್ ಮಂದಿ ನಮ್ಮನ್ನ ಡಿವೈಡ್ ಮಾಡಿ ಆಳ್ತಿದ್ದಾರೆ ಎಂದು ಹೇಳಿದರು.
ನಾನು ರೆಬೆಲ್ ಆಗೋದು ಜನರ ಸಲುವಾಗಿ ಎಂದ ಸಾಹುಕಾರ. ನಾನು ವೈಯಕ್ತಿಕವಾಗಿ ಅರಾಮಾಗಿ ಇರಬಹುದು, ಖಾಯಂ ಮಂತ್ರಿಯಾಗಿಯೂ ಇರ್ತೇನಿ. ಜನರಿಗೆ ಅನ್ಯಾಯ ಆದ್ರೆ ನನಗೆ ತಡೆಯಲು ಆಗುವುದಿಲ್ಲ.
ಮಂತ್ರಿ ಪದವಿ ಹೋದ್ರೇ ಹೋಗಲಿ ಅಂತಾ ಬಿಟ್ಟು ಹೊರ ಬರ್ತೇನಿ ಎಂದು ಹೇಳಿದರು.
ನಾನು ಶಾಸಕನಾಗಿ 25 ವರ್ಷ ಆಯ್ತು, ನಲವತ್ತು ವರ್ಷದಿಂದ ರಾಜಕಾರಣ ಮಾಡ್ತಿದ್ದೇನೆ. ಬಹಳಷ್ಟು ರಾಜಕಾರಣವನ್ನ ನಾನು ನೋಡಿದ್ದೇನೆ. ವಿರೋಧ ಪಕ್ಷದಲ್ಲಿದ್ದಾಗ ಒಂದು ಮಾತಾಡ್ತಾರೆ ಅಧಿಕಾರದಲ್ಲಿದ್ದಾಗ ಬೇರೆ ಮಾತಾಡ್ತಾರೆ. ವಿರೋಧ ಪಕ್ಷದಲ್ಲಿದ್ದಾಗ ಪ್ರಚೋದನೆ ಮಾಡೋದು. ಮಾಡಿ ಅಧಿಕಾರಕ್ಕೆ ಬಂದು ಏಕಾಏಕಿ ಬದಲಾಗುವುದು.
ಬಹಿರಂಗವಾಗಿ ಯಾರ ಹೆಸರನ್ನು ಹೇಳಲು ಬರುವುದಿಲ್ಲ ಎಲ್ಲರೂ ಇದ್ರಲ್ಲಿದ್ದಾರೆ ಎಂದು ಎದುರಾಳಿಗಳನ್ನು ತಿವಿದರು.
ನಾನು ನೋಡಿದ ನೇರವಂತಿಕೆ ರಾಜಕಾರಣಿ ಬಂಗಾರಪ್ಪ ಒಬ್ಬರೇ. ಅವರ ನಂತರ ನನ್ನ ಬಿಟ್ಟು ಬೇರೆ ಯಾರನ್ನ ನಾನು ನೋಡಿಲ್ಲ ಎಂದು ರಮೇಶ ಜಾರಕಿಹೊಳಿ ಹೇಳಿದರು.
ನಾನು ತಪ್ಪು ಮಾಡ್ತಿದೀನಿ ಅಂತಾ ಯಾರಾದ್ರೂ ಹೇಳಿದ್ರೆ ಸ್ವಲ್ಪ ಹಿಂದೆ ಸರಿತೇನಿ. ಬಿಜೆಪಿ, ಕಾಂಗ್ರೆಸ್ ಅಥವಾ ದಳ ಪಕ್ಷ ಯಾವುದೇ ಇದ್ರೂ ಎಲ್ರೂ ಅವರೇ ಅಣ್ತಮ್ಮಂದಿರೇ. ಎಲ್ಲ ಪಕ್ಷದ ನಾಯಕರು ಒಂದೇ ಎಂದು ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
