ಬ್ರಿಟನ್
ಬ್ರಿಟನ್ ಸಂಸತ್ತಿನಲ್ಲಿ ಸಿದ್ದರಾಮಯ್ಯ ಸರಕಾರದ ಪಂಚ ಗ್ಯಾರಂಟಿಗಳನ್ನು ಸಚಿವ ಸಂತೋಷ ಲಾಡ್ ಹಾಡಿಹೊಗಳಿದ್ದಾರೆ.
ಸಿದ್ದರಾಮಯ್ಯ ಸರಕಾರದ ಪಂಚ ಗ್ಯಾರಂಟಿಗಳಿಗೆ ಮೆಚ್ಚುಗೆಯ ಮಹಾಪೂರ ವ್ಯಕ್ತವಾಗಿದೆ.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಅಧಿಕಾರಕ್ಕೆ ಬಂದ ನಂತರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಬ್ರಿಟನ್‌ನಲ್ಲಿ ಹಾಡಿ ಹೊಗಳಿದ್ದು, ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಜೀವನಕ್ಕೆ ಹೇಗೆ ಆಧಾರಸ್ತಂಭವಾಗಿವೆ ಎಂಬುದನ್ನು ವಿವರಿಸಿದರು.
ಬ್ರಿಟನ್‌ನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ನಡೆದ ಇಂಡೋ -ಯುರೋಪಿಯನ್ ಹೂಡಿಕೆ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಸಚಿವ ಸಂತೋಷ ಲಾಡ್ ಅವರು ಮಾತನಾಡಿದರು.
ಲಾಡ್ ಅವರ ವಿವರಣೆಗೆ ಸಮ್ಮೇಳನದಲ್ಲಿ ಸೇರಿದ್ದ ವಿವಿಧ ದೇಶಗಳ ರಾಜಕೀಯ ಮುಖಂಡರು, ತಜ್ಞರು, ಉದ್ಯಮಿಗಳು, ವಿವಿಧ ವ್ಯವಹಾರಗಳಲ್ಲಿ ತೊಡಗಿಸಿಕೊಂಡ ಪರಿಣತರಿಂದ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ.
ಸಮ್ಮೇಳನದಲ್ಲಿ ಸೇರಿದ್ದವರು ಜೋರಾದ ಕರತಾಡನದ ಮೂಲಕ ಪ್ರಸಂಸೆ ವ್ಯಕ್ತಪಡಿಸಿದರು.
ರಾಜ್ಯದ ಗ್ಯಾರಂಟಿ ಯೋಜನೆಯ ಬಗ್ಗೆ ದೇಶದ ವಿವಿಧ ಸರಕಾರಗಳು ಗಂಭೀರವಾಗಿ ಪರಿಗಣಿಸಿವೆ. ಈ ಯೋಜನೆಗಳು ವಿಶ್ವದ ಗಮನ ಸೆಳೆದಿವೆ. ಇದೀಗ ದೂರದ ಬ್ರಿಟನ್‌ನಲ್ಲೂ ಸಚಿವ ಗ್ಯಾರಂಟಿಗಳು ಜನರ ಬದುಕಿಗೆ ಹೇಗೆ ನೆರವಾಗಿವೆ ಎಂಬುದರ ಕುರಿತಾಗಿ ವಿಶ್ವದ ವೇದಿಕೆಯಲ್ಲಿ ಚರ್ಚೆ ಮಾಡಿದ್ದಾರೆ.
ಪಂಚ ಗ್ಯಾರಂಟಿ ಯೋಜನೆಗೆ ರಾಜ್ಯ ಸರಕಾರ ಪ್ರತೀ ವರ್ಷಕ್ಕೆ 12 ಬಿಲಿಯನ್ ಡಾಲರ್ ಅನ್ನು ವ್ಯಯಿಸುತ್ತಿದೆ. ಈ ಮೊತ್ತದಲ್ಲಿ ಜನರಿಗೆ ಸಾಮಾಜಿಕ ಸೇವಾ ಭದ್ರತಾ ಯೋಜನೆಗಳನ್ನು ನೀಡುತ್ತಿದ್ದೇವೆ. ಇದರಿಂದ ನಮ್ಮ ಜಿಡಿಪಿ ವೃದ್ಧಿಸಿದೆ. ಇದೊಂದು ಅಭೂತಪೂರ್ವ ಯೋಜನೆಯಾಗಿದ್ದು ಇಡೀ ವಿಶ್ವವೇ ಇಂತಹುದರ ಬಗ್ಗೆ ಗಮನ ಹರಿಸಬಹುದು. 40 ಮಿಲಿಯನ್ ಕುಟುಂಬಗಳಿಗೆ ಪಂಚ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ವಿಶ್ವದ ವಿವಿಧ ದೇಶಗಳು ಈ ಯೋಜನೆಗಳ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿವೆ. ಇಂತಹ ದೂರದೃಷ್ಟಿಯ ಯೋಜನೆ ಜಾರಿಗೆ ತಂದು ಸಮಾಜದಲ್ಲಿ ಭಾರಿ ದೊಡ್ಡ ಬದಲಾವಣೆಗೆ ಕಾರಣರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದಗಳು ಎಂದು ಸಚಿವ ಸಂತೋಷ ಲಾಡ್ ಅವರು ವಿವರಿಸಿದರು.


