ಬೆಳಗಾವಿ
ಎಂಎಲ್ಸಿ ಸಿ.ಟಿ. ರವಿ ಅವರ ಬಂಧನ ರಾತ್ರಿಯಿಡೀ ಸುತ್ತಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ ಅವರ ನೇತೃತ್ವದಲ್ಲಿ ಇಂದು ಮಹತ್ವದ ಸಭೆ ನಡೆಯಿತು.
ಬೆಳಗಾವಿಯ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಮಹತ್ವದ ಸಭೆ ನಡೆದಿದ್ದು, ಘಟನಾವಳಿಗಳ ಕುರಿತು ಗೃಹ ಸಚಿವ ಜಿ. ಪರಮೇಶ್ವರ ಅವರು ಸಂಪೂರ್ಣ ಮಾಹಿತಿ ಪಡೆದಿದ್ದಾರೆ.
ಪ್ರಕರಣದ ಕುರಿತು ಮಾಹಿತಿ ನೀಡದಿದ್ದಕ್ಕೆ ಗೃಹ ಸಚಿವರು ಗರಂ ಆಗಿದ್ದರು. ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಮತ್ತು ಎಸ್‌ಪಿ ಭೀಮಾಶಂಕರ ಗುಳೇದ ಅವರ ಮೇಲೆ ಅಸಮಾಧಾನ ಹೊರ ಹಾಕಿದ್ರು ಎನ್ನಲಾಗಿದೆ.
ಘಟನೆ ಸಂಪೂರ್ಣ ಮಾಹಿತಿ ನೀಡಿದ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್, ಸಿ.ಟಿ. ರವಿ ಅವರ ಸುರಕ್ಷತೆ ದೃಷ್ಟಿಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾಗಿ ಸಮಜಾಯಿಷಿ ನೀಡಿದ್ದಾರೆ.
ಇದೇ ವೇಳೆ ಇಂದು ಕಮೀಷನರ್ ಕಚೇರಿಗೆ ಬಿಜೆಪಿ ನಿಯೋಗ ಭೇಟಿ ಕುರಿತು ಯಡಾ ಮಾರ್ಟಿನ್ ಅವರು ಗೃಹ ಸಚಿವರ ಗಮನಕ್ಕೆ ತಂದಿದ್ದಾರೆ.
ಸಭೆಯಲ್ಲಿ ಎಡಿಜಿಪಿ ಹಿತೇಂದ್ರ, ಐಜಿಪಿ ವಿಕಾಸ ಕುಮಾರ, ಕಮಿಷನರ್ ಯಡಾ ಮಾರ್ಟಿನ್, ಎಸ್‌ಪಿ ಭೀಮಾಶಂಕರ ಗುಳೇದ, ಹುಬ್ಬಳ್ಳಿ ಧಾರವಾಡ ಕಮೀಷನರ್ ಶಶಿಕುಮಾರ ಭಾಗಿಯಾಗಿದ್ದರು.




