ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನದೊಂದಿಗೆ ಆಸ್ಟ್ರೇಲಿಯಾ ಪ್ರವಾಸವನ್ನು ಅಂತ್ಯಗೊಳಿಸಿದ್ದಾರೆ. ಐದು ಟೆಸ್ಟ್‌ಗಳ ಬಾರ್ಡರ್ ಗವಾಸ್ಕರ್ ಟ್ರೋಫಿಯ ಭಾಗವಾಗಿ ಸಿಡ್ನಿಯಲ್ಲಿ ನಡೆದ ಅಂತಿಮ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಮತ್ತೊಮ್ಮೆ ವಿಫಲರಾದರು. ಅವರು 12 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ ಕೇವಲ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ದುರಂತವೆಂದರೆ ಇಂದಿನ ಪಂದ್ಯದಲ್ಲಿ ಮತ್ತೊಮ್ಮೆ ಅವರು ಔಟ್ಸೈಟ್ ಆಫ್ ಸ್ಟಂಪ್ ಎಸೆತಕ್ಕೆ ಕ್ಯಾಚ್ ನೀಡಿ ಔಟ್ ಆದರು. ಈ ಸರಣಿಯಲ್ಲಿ ಕೊಹ್ಲಿ ಒಟ್ಟು 9 ಇನ್ನಿಂಗ್ಸ್ ಆಡಿದ್ದು, 8 ಬಾರಿ ಇದೇ ರೀತಿ ಔಟಾಗಿದ್ದಾರೆ. ಒಂದು ಇನ್ನಿಂಗ್ಸ್‌ನಲ್ಲಿ ಅಜೇಯ ಶತಕ ಸಿಡಿಸಿದರೆ, ಮತ್ತೊಂದರಲ್ಲಿ ಬ್ಯಾಟಿಂಗ್ ಸಿಕ್ಕಿರಲಿಲ್ಲ.
14ನೇ ಓವರ್ ನಲ್ಲಿ ಸ್ಕಾಟ್ ಬೊಲ್ಯಾಂಡ್ ಓವರ್ನಲ್ಲಿ ಸ್ಟೀವ್ ಸ್ಮಿತ್ಗೆ ಕ್ಯಾಚ್ ನೀಡಿ ಪೆವಿಲಿಯನ್ ತಲುಪಿದರು. ಈ ಪಂದ್ಯದ ಮೊದಲ ಇನಿಂಗ್ಸ್ ನಲ್ಲೂ ಸ್ಕಾಟ್ ಬೊಲ್ಯಾಂಡ್ ಬೌಲಿಂಗ್ ನಲ್ಲಿ ಸ್ಲಿಪ್ನಲ್ಲಿದ್ದ ಫೀಲ್ಡರ್ಗೆ ಕ್ಯಾಚ್ ನೀಡಿ ಕೊಹ್ಲಿ ಔಟಾಗಿದ್ದರು. ಈ ರೀತಿ ಕೆಟ್ಟ ರೀತಿಯಲ್ಲಿ ವಿಕೆಟ್ ಒಪ್ಪಿಸಿದ್ದಕ್ಕೆ ಕೊಹ್ಲಿ ಸ್ವತಃ ಹತಾಶೆ ವ್ಯಕ್ತಪಡಿಸಿ ಕ್ರೀಸ್ ತೊರೆದರು.
ಪರ್ತ್‌ನಲ್ಲಿ ನಡೆದ ಈ ಸರಣಿಯ ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ್ದ ಕೊಹ್ಲಿ ಆಡಿದ ಎಲ್ಲಾ ಇನ್ನಿಂಗ್ಸ್ಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ. ಔಟ್‌ಸೈಡ್ ಆಫ್ ಸ್ಟಂಪ್ ಎಸೆತಗಳು ಅವರನ್ನು ಕೆಟ್ಟದಾಗಿ ಕಾಡುತ್ತಿವೆ. ಕೊಹ್ಲಿ ಈ ಸರಣಿಯಲ್ಲಿ 5, ಅಜೇಯ 100,7, 11, 3, 36, 5, 17, 6 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. 9 ಇನ್ನಿಂಗ್ಸ್ಗಳಲ್ಲಿ 23ರ ಸರಾಸರಿಯಲ್ಲಿ 190 ರನ್ಗಳಿಸಿದ್ದಾರೆ.