ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮೂರನೇ ಅವಧಿಯ ಸರಕಾರದ ಮೊದಲ ಬಜೆಟ್ (Union Budget) ಇಂದು (ಫೆ.01)ರಂದು ಮಂಡನೆಯಾಗಲಿದೆ. ಈ ಬಜೆಟ್ ಬಗ್ಗೆ ಈಗಾಗಲೇ ಜನರ ನಿರೀಕ್ಷೆಗಳು ಹೆಚ್ಚಾಗಿದ್ದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ತಮ್ಮ ಸತತ 8ನೇ ಬಜೆಟ್ ನಲ್ಲಿ ಏನೆಲ್ಲಾ ಹೊಸ ಘೊಷಣೆಗಳನ್ನು ಮಾಡಲಿದ್ದಾರೆಂದು ಜನ ಸಾಮಾನ್ಯರು ಹಾಗೂ ಉದ್ಯಮ ವಲಯ ಕಾತರದಿಂದಿದೆ.
ಮಧ್ಯಮ ವರ್ಗದವರು ತೆರಿಗೆ ವಿನಾಯಿತಿಯನ್ನು ಎದುರು ನೋಡುತ್ತಿದ್ದರೆ, ಉದ್ಯಮ ವಲಯ ಜಿ.ಎಸ್.ಟಿ. ಸ್ವರೂಪದಲ್ಲಿ ಸರಳತೆಯನ್ನು ನಿರೀಕ್ಷಿಸುತ್ತಿದೆ.
ಇದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜ.31ರ ಶುಕ್ರವಾರದಂದು ಸಂಪತ್ತಿನ ಅಧಿದೇವತೆಯಾಗಿರುವ ಲಕ್ಷ್ಮಿಯನ್ನು ಪ್ರಾರ್ಥಿಸಿದ್ದು, ದೇಶದ ಬಡ ಮತ್ತು ಮಧ್ಯಮ ವರ್ಗದ ಜನತೆಯನ್ನು ಹರಸುವಂತೆ ಅವರು ಪ್ರಾರ್ಥಿಸಿಕೊಂಡಿದ್ದಾರೆ. ‘ಈ ದೇಶದ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಹರಸುವಂತೆ ನಾನು ಆ ಲಕ್ಷ್ಮೀ ದೇವರನ್ನು ಪ್ರಾರ್ಥಿಸುತ್ತಿದ್ದೇನೆ’ ಎಂದು ಪ್ರಧಾನಿ ಮೋದಿ ಅವರು ಸಂಸತ್ತಿನ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಪ್ರಧಾನಿ ಅವರ ಈ ಮಾತುಗಳು ಈ ಬಾರಿಯ ಬಜೆಟ್ ನಲ್ಲಿ ಮಧ್ಯಮ ವರ್ಗಕ್ಕೆ ತೆರಿಗೆ ನೆಮ್ಮದಿ ಸಿಗಬಹುದೆಂಬ ಆಶಾವಾದ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್ಸ್ ಮತ್ತು ಜೋಕ್ಸ್ ಗಳು ಹರಿದಾಡುತ್ತಿವೆ. ಇಂತಹ ಮೀಮ್ಸ್ ಮತ್ತು ಜೋಕ್ಸ್ ಗಳಲ್ಲಿ ಬೆಸ್ಟ್ ಐದನ್ನು ನಿಮಗಾಗಿ ನಾವಿಲ್ಲಿ ನಿಡುತ್ತಿದ್ದೇವೆ.
ಈ ಬಾರಿಯ ಕೇಂದ್ರ ಬಜೆಟನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಫೆ.1ರ ಶನಿವಾರದಂದು ಮಂಡಿಸಲಿದ್ದಾರೆ.ಬ್ಲೂಮ್ ಬರ್ಗ್ ಪ್ರಕಾರ ನಿರ್ಮಲಾ ಅವರು ವೈಯಕ್ತಿಕ ಆದಾಯ ತೆರಿಗೆಯನ್ನು ಕಡಿತಗೊಳಿಸಿ, ಗ್ರಾಮೀಣ ಪ್ರದೇಶಗಳ ಕಲ್ಯಾಣ ಯೋಜನೆಗಳನ್ನು ಘೋಷಿಸುವ ಸಾಧ್ಯತೆಗಳಿವೆ. ಇದರಿಂದಾಗಿ ಕುಸಿಯತ್ತಿರುವ ವೇತನ ಮತ್ತು ಬೆಲೆ ಏರಿಕೆಯಿಂದ ಮಧ್ಯಮ ವರ್ಗಕ್ಕೆ ಕೊಂಚ ನಿರಾಳತೆ ಸಿಗುವ ಸಾಧ್ಯತೆಗಳಿವೆ.
ಗುರುವಾರದಂದು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಸಂಸತ್ತಿನ ಎರಡೂ ಸದನಗಳನ್ನುದ್ದೇಶಿಸಿ ಭಾಷಣ ಮಾಡಿದ್ದರು. ಈ ಮೂಲಕ ಈ ವರ್ಷದ ಬಜೆಟ್ ಅಧಿವೇಶನಕ್ಕೆ ಅಧಿಕೃತ ಚಾಲನೆ ದೊರಕಿತ್ತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ.