ಮೈಸೂರು:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ 2025-26ನೇ ಸಾಲಿನ ಬಜೆಟ್ ರಾಜ್ಯ ಮತ್ತು ದೇಶದ ದೃಷ್ಟಿಯಿಂದ ಬಹಳ ನಿರಾಶಾದಾಯಕ ಬಜೆಟ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟೀಕಿಸಿದ್ದಾರೆ.ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ನರೇಂದ್ರ ಮೋದಿ ಸರ್ಕಾರ ಕರ್ನಾಟಕಕ್ಕೆ ಚೊಂಬು ಕೊಡುವುದನ್ನು ಮುಂದುವರೆಸಿದೆ. ಕರ್ನಾಟಕದ ದೃಷ್ಟಿಯಿಂದ ಇದೊಂದು ನಿರಾಶದಾಯಕ ಮತ್ತು ದೂರದೃಷ್ಟಿ ಇಲ್ಲದ ಬಜೆಟ್ ಎಂದು ಹೇಳಿದರು.
ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಅನೇಕ ಬೇಡಿಕೆಗಳನ್ನು ಇಟ್ಟಿತ್ತು. ನಮ್ಮ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಒಂದೇ ಒಂದು ಬೇಡಿಕೆಯೂ ಈಡೇರಿಲ್ಲ ಎಂದು ಸಿಎಂ ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್ ಗಾತ್ರವೂ ಕಡಿಮೆ ಆಗಿದೆ. ಕಳೆದ ಬಾರಿಗಿಂತ 1.04 ಲಕ್ಷ ಕೋಟಿ ಕಡಿಮೆ ಆಗಿದೆ. ತೆರಿಗೆ ಅವರು ಅಂದುಕೊಂಡಷ್ಟು ಸಂಗ್ರಹಿಸಿಲ್ಲ. ಕೇಂದ್ರ ಸರ್ಕಾರ 15,68,936 ಕೋಟಿ ಸಾಲ ಪಡೆಯುತ್ತಿದೆ. 12,70,000 ಕೋಟಿ ರೂ. ಬಡ್ಡಿ ಕಟ್ಟುತ್ತಿದೆ. ಈ ದೇಶದ ಸಾಲದ ಪ್ರಮಾಣ 202 ಲಕ್ಷ ಕೋಟಿಯಿಂದ 205 ಲಕ್ಷ ಕೋಟಿ ರೂ.ಗೆ ಏರುತ್ತಿದೆ. ಈ ಬಜೆಟ್ ನಿರಾಶದಾಯಕ ಬಜೆಟ್ ಎಂದು ವಾಗ್ದಾಳಿ ನಡೆಸಿದರು.