ಗೌರಿಬಿದನೂರು : ತಾಲ್ಲೂಕಿನ ಕಸಬಾ ಹೋಬಳಿ ದೊಡ್ಡ ಕುರುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್.ನಾಗಸಂದ್ರ ಗ್ರಾಮದ ನಿವಾಸಿ ಮಾಜಿ ಗ್ರಾ.ಪಂ ಸದಸ್ಯ ಎನ್.ಆರ್ ನರಸಿಂಹಯ್ಯ (58) ಮೈಕ್ರೋ ಫೈನಾನ್ಸ್ ಹಾವಳಿ ಸಹಿಸಲಾರದೆ ನೇಣಿಗೆ ಕೊರಳೊಡ್ಡಿರುವ ಘಟನೆ ಗೌರಿಬಿ ನೂರು ತಾಲೂಕಿನಲ್ಲಿ ನಡೆದಿದೆ.
ನತದೃಷ್ಟ ನರಸಿಂಹಯ್ಯ ಅಟೋ ಚಾಲಕನಾಗಿದ್ದು ಕೆಲವು ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ರೂಪವಾಗಿ ಹಣ ಪಡೆದು ಕಂತುಗಳ ರೂಪದಲ್ಲಿ ಹಣ ಕಟ್ಟುತ್ತಿದ್ದರು ಎನ್ನಲಾಗಿದ್ದು ಕಂತುಗಳ ಬಾಕಿಯಿದ್ದಲ್ಲಿ ಮನೆ ಬಾಗಿಲಿಗೆ ಬಂದು ಫೈನಾನ್ಸ್ನವರು ಕೂರುತ್ತಿದ್ದರಂತೆ. ಫೈನಾನ್ಸ್ ಕಿರುಕುಳಕ್ಕೆ ಆಟೋ ಸಹ ಎರಡು ಮೂರು ಬಾರಿ ಒತ್ತೆ ಇಟ್ಟು ಹಣ ಕಟ್ಟಿದ್ದಾರೆ.
ಇದನ್ನೂ ಓದಿ: Crime News: ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿಗೆ ಬೆಂಕಿ ಹಚ್ಚಿ ಕೊಲೆಗೈದ ಪಾಪಿ ಪತಿ; ವೈರಲ್ ವಿಡಿಯೊ ಇಲ್ಲಿದೆ
ಆದರೂ ಇವರ ಸಾಲ ತೀರಿಲ್ಲ. ಸೋಮವಾರ ಸಹ ಎಲ್‌ಎನ್‌ಟಿ ಮತ್ತು ನವಚೈತನ್ಯ ಫೈನಾನ್ಸ್ಗಳಿಗೆ ಕಂತು ಕಟ್ಟಲು ಹಣ ಇಲ್ಲದ ಕಾರಣ ಮನೆಯಲ್ಲಿ ಸಾಲ ಪಡೆದುಕೊಂಡು ಬರುತ್ತೇನೆ ಎಂದು ತಿಳಿಸಿ ಬೆಳಗ್ಗೆ ೬ ಗಂಟೆಗೆ ಮನೆಯಿಂದ ಹೊರ ಬಂದು ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ ಎಂದು ಪತ್ನಿ ಪ್ರಭಾವತಿ ತಿಳಿಸಿದ್ದಾರೆ.
ಎಷ್ಟೊತ್ತಾದರೂ ಬಾರದ ಪತಿಯನ್ನು ಊರೆಲ್ಲಾ ಹುಡುಕಿದ ಪತ್ನಿ, ನಾಗಸಂದ್ರ ದಿಂದ ಇಡುಗೂರು ಕಡೆಗೆ ಹೋಗುವ ರಸ್ತೆಯಲ್ಲಿ ಇವರ ಹೊಲವಿದ್ದು ಆಕಡೆ ಹುಡುಕುತ್ತಾ ಬಂದಿದ್ದಾರೆ. ಆಗ ಪತ್ನಿ ಪ್ರಭಾವತಿ ಕಣ್ಣಿಗೆ ಗಂಡ ಮರಕ್ಕೆ ನೇಣು ಹಾಕಿಕೊಂಡಿರುವುದು ಕಾಣಿಸುತ್ತದೆ, ಕೂಡಲೇ ಅಣ್ಣ ತಮ್ಮಂದಿರಿಗೆ ಮಾಹಿತಿ ನೀಡಿದ್ದಾರೆ. ಅವರು ಕೂಡ ಸ್ಥಳಕ್ಕೆ ಬಂದು ನೋಡಿದಾಗ ಅವರ ಅಣ್ಣ ನೇಣಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಇವರು ತಿಂಗಳಿಗೆ 15 ಸಾವಿರ ರೂಪಾಯಿಗಳನ್ನು ಸಾಲದ ಕಂತುಗಳಿಗೆ ಕಟ್ಟುತ್ತಿದ್ದರಂತೆ, ಹಗಲು ರಾತ್ರಿ ಎನ್ನದೆ ಫೈನಾನ್ಸ್ ಅವರು ಮನೆ ಬಳಿ ಬಂದು ಹಣ ಕಟ್ಟಲೇ ಬೇಕೆಂದು ಪೀಡಿಸುತ್ತಿದ್ದರಂತೆ. ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.
ಇವರು ೩.೫ ಲಕ್ಷ ರೂಪಾಯಿ ಸಾಲ ಮಾಡಿದ್ದು ಧರ್ಮಸ್ಥಳ ಸಂಘ, ಆಶೀರ್ವಾದ, ಗ್ರಾಮೀಣ ಕೂಟ, ಎಲ್‌ಎನ್‌ಟಿ, ಸ್ಪಂದನ, ಸಮಸ್ತ, ನವ ಚೈತನ್ಯ, ಫೈನಾನ್ಸ್ಗಳಲ್ಲಿ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.
ಘಟನಾ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿರುವ ಗೌರಿಬಿದನೂರು ಗ್ರಾಮಾಂತರ ಠಾಣೆಯ ಪಿಎಸ್ ಐ ರಮೇಶ್ ಗುಗ್ಗರಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.