ನವದೆಹಲಿ:
ಭಾರತೀಯ ರೈಲ್ವೆ ಅಳವಡಿಸಿಕೊಂಡಿರುವ ಸ್ವಯಂಚಾಲಿತ ರೈಲು ರಕ್ಷಣಾ ವ್ಯವಸ್ಥೆಯಾದ ಕವಚ್ ನ್ನು ಬೆಂಗಳೂರು ರೈಲ್ವೆ ಜಾಲದಾದ್ಯಂತ ಅಳವಡಿಸಲಾಗುವುದು ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಮಿತೇಶ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.
ಲಕ್ನೋ ಮೂಲದ ಭಾರತೀಯ ರೈಲ್ವೆಯ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆ ಅಭಿವೃದ್ಧಿಪಡಿಸಿದ ಕವಚ್, ಪ್ರತಿ ರೈಲಿನ ವೇಗವು ಸಿಗ್ನಲಿಂಗ್ ವ್ಯವಸ್ಥೆಯು ನಿಗದಿಪಡಿಸಿದ ಮಿತಿಯೊಳಗೆ ಉಳಿಯುವಂತೆ ನೋಡಿಕೊಳ್ಳುತ್ತದೆ. ರೈಲು ನಿಗದಿತ ವೇಗವನ್ನು ಮೀರಿದರೆ ಅಥವಾ ಪ್ರತಿಕ್ರಿಯಿಸಲು ವಿಫಲವಾದರೆ, ವ್ಯವಸ್ಥೆಯು ತುರ್ತು ಬ್ರೇಕ್‌ಗಳನ್ನು ತ್ವರಿತವಾಗಿ ಸಕ್ರಿಯಗೊಳಿಸುತ್ತದೆ ಮತ್ತು ರೈಲನ್ನು ನಿಲ್ಲಿಸುತ್ತದೆ, ಇದರಿಂದಾಗಿ ಯಾವುದೇ ರೀತಿಯ ಘರ್ಷಣೆ, ಅಪಘಾತಗಳನ್ನು ತಪ್ಪಿಸಬಹುದಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ADRM) ಅಶುತೋಷ್ ಮಾಥುರ್ ಸೋಮವಾರ TNIE ಗೆ ಬೆಂಗಳೂರು ವಿಭಾಗದ 1,144 ಕಿ.ಮೀ. ವ್ಯಾಪ್ತಿಯಲ್ಲಿ ಕವಚ್ ನ್ನು ಎರಡು ಹಂತಗಳಲ್ಲಿ ಅಳವಡಿಸಲಾಗುವುದು ಎಂದು ಹೇಳಿದರು. “ಮೊದಲ ಹಂತದಲ್ಲಿ ಒಟ್ಟು 684 ಕಿ.ಮೀ. ಮಾರ್ಗವನ್ನು 329 ಕೋಟಿ ರೂ.ಗಳಲ್ಲಿ ಮಂಜೂರು ಮಾಡಲಾಗಿದೆ. ಇದು ಬೈಯಪ್ಪನಹಳ್ಳಿಯಿಂದ ಪೆನುಕೊಂಡ, ಕೆಎಸ್ಆರ್ ಬೆಂಗಳೂರು ನಗರದಿಂದ ಜೋಲಾರಪೇಟೆ, ಕೆಎಸ್ಆರ್ ಬೆಂಗಳೂರು ನಿಂದ ಸಂಪಿಗೆ ರಸ್ತೆ ಮತ್ತು ಕೆಎಸ್ಆರ್ ಬೆಂಗಳೂರು ನಿಂದ ಯಲಿಯೂರು ಎಂಬ ನಾಲ್ಕು ಮಾರ್ಗಗಳನ್ನು ಒಳಗೊಂಡಿದೆ” ಎಂದು ಅವರು ಹೇಳಿದರು.