ನವದೆಹಲಿ:
ದೆಹಲಿ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಈ ಬಾರಿ ಎಎಪಿಗೆ ಬಿಜೆಪಿ ಭಾರಿ ಆಘಾತ ನೀಡಿದ್ದು, ಸಿಎಂ ಆತಿಶಿ ಸಹಿತ ಆಪ್ ಸರ್ಕಾರದ ಘಟಾನುಘಟಿ ನಾಯಕರೇ ಹಿನ್ನಡೆಯಲ್ಲಿದ್ದಾರೆ.
ದೇಶದ ಕುತೂಹಲ ಕೆರಳಿಸಿರುವ ದೆಹಲಿಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಭರದಿಂದ ಸಾಗಿದ್ದು, ಆರಂಭಿಕ ಹಂತಗಳಲ್ಲಿ ಬಿಜೆಪಿ ಭಾರಿ ಮುನ್ನಡೆ ಕಾಯ್ದುಕೊಂಡಿದ್ದು, ಆಡಳಿತಾರೂಢ ಎಎಪಿ ತೀವ್ರ ಹಿನ್ನಡೆಯಲ್ಲಿದೆ. 70 ಸದಸ್ಯ ಬಲದ ದೆಹಲಿ ವಿಧಾನ ಸಭೆಗೆ ಫೆ.5ರಂದು ನಡೆದ ಚುನಾವಣೆಯಲ್ಲಿ ಶೇ 60.54 ರಷ್ಟು ಮತದಾನವಾಗಿತ್ತು. ಇಂದು (ಶನಿವಾರ) ಬೆಳಿಗ್ಗೆ 8 ಗಂಟೆಯಿಂದ ರಾಷ್ಟ್ರ ರಾಜಧಾನಿಯಾದ್ಯಂತ 19 ಕೇಂದ್ರಗಳಲ್ಲಿ ಬಿಗಿ ಭದ್ರತೆಯ ನಡುವೆ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದೆ.
ಇನ್ನು ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ದೆಹಲಿ ಎಎಪಿ ಸರ್ಕಾರ ಘಟಾನುಘಟಿ ನಾಯಕರೇ ಹಿನ್ನಡೆ ಅನುಭವಿಸುತ್ತಿದ್ದಾರೆ. ದೆಹಲಿ ಸಿಎಂ ಆತಿಶಿ ಕಲ್ಕಾಜಿ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದು, ಇಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿ ಎಂದೇ ಹೇಳಲಾಗುತ್ತಿರುವ ರಮೇಶ್ ಬಿದೂರಿ ಮುನ್ನಡೆಯಲ್ಲಿದ್ದಾರೆ.
ಅಂತೆಯೇ ದೆಹಲಿ ಅಬಕಾರಿ ಹಗರಣ ಮತ್ತು ಹವಾಲಾ ಪ್ರಕರಣದಲ್ಲಿ ಜೈಲುಪಾಲಾಗಿದ್ದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಕೂಡ ತಮ್ಮ ಜಂಗ್ಪುರ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದು, ಇದೇ ಮನಿಲಾಂಡರಿಂಗ್ ಪ್ರಕರಣದಲ್ಲಿ ಸುದೀರ್ಘ ಜೈಲುವಾಸಿಯಾಗಿದ್ದ ದೆಹಲಿ ಮಾಜಿ ಸಚಿವ ಸತ್ಯೇಂದ್ರ ಜೈನ್ ಕೂಡ ತಮ್ಮ ಶಕುರ್ ಬಸ್ತಿ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದಾರೆ.
ಅಂತೆಯೇ ಪ್ರತಾಪ್ ಗಡ ಕ್ಷೇತ್ರದಿಂದ ಎಎಪಿ ಪರವಾಗಿ ಸ್ಪರ್ಧಿಸಿದ್ದ ಐಎಎಸ್ ಪರೀಕ್ಷಾ ಕೋಚ್ ಅವಧ್ ಓಜಾ ಅವರು ಕೂಡ ಹಿನ್ನಡೆಯಲ್ಲಿದ್ದಾರೆ. ಉಳಿದಂತೆ ದೆಹಲಿ ಮಾಜಿ ಸಿಎಂ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಲ್ಲಿ ಹಿನ್ನಡೆಯಲ್ಲಿದ್ದು ಅವರ ಪ್ರತಿಸ್ಪರ್ಧಿ ಬಿಜೆಪಿಯ ಪರ್ವೇಶ್ ವರ್ಮಾ ಮುನ್ನಡೆಯಲ್ಲಿದ್ದಾರೆ.