ಬೆಂಗಳೂರು:
ಸಾಕಷ್ಟು ಮಂದಿ ಪ್ರಸಿದ್ಧ ಗಾಯಕರಿದ್ದಾರೆ. ಯಾರೊಬ್ಬರೂ ಪರಿಸ್ಥಿತಿಯ ಲಾಭ ಪಡೆಯಬಾರದು ಗೃಹ ಸಚಿವ ಪರಮೇಶ್ವರ್ ಅವರು ಸೋಮವಾರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿತ್ತು. ಆದರೆ, ಗಾಯಕ ಇದ್ದಕ್ಕಿದ್ದಂತೆ, ಚರ್ಚ್ ಸ್ಟ್ರೀಟ್‌ಗೆ ಬಂದು ಹಾಡಲು ಪ್ರಾರಂಭಿಸಿದ್ದಾರೆ. ಹೀಗಾಗಿ ಪೊಲೀಸರು ತಡೆಯೊಡ್ಡಿದ್ದಾರೆಂದು ಹೇಳಿದ್ದಾರೆ,
ಚರ್ಚ್ ಸ್ಟ್ರೀಟ್‌ನಲ್ಲಿ ಕಾರ್ಯಕ್ರಮ ನಡೆಸಲು ಪೊಲೀಸರು ಅನುಮತಿ ನೀಡಿರಲಿಲ್ಲ. ಯಾರೂ ಪರಿಸ್ಥಿತಿಯ ಲಾಭ ಪಡೆಯಬಾರದು. ಎಡ್ ಶೀರನ್ ಪ್ರಸಿದ್ಧ ಗಾಯಕರಾಗಿರುವುದರಿಂದ ಸ್ಥಳದಲ್ಲಿ ಬಹಳಷ್ಟು ಜನರು ಸೇರಿದ್ದರು ಎಂದು ತಿಳಿಸಿದ್ದಾರೆ.
ಇದೇ ವೇಳೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಕುರಿತು ಮಾತನಾಡಿದ ಅವರು, ಭೇಟಿ ವೇಳೆ ಯಾವುದೇ ರೀತಿಯ ರಾಜಕೀಯ ಚರ್ಚೆಗಳನ್ನು ಮಾಡಿಲ್ಲ ಎಂದು ಹೇಳಿದರು.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಮತ್ತು ನಮ್ಮ ಕುಟುಂಬ ಒಂದೇ. ರಾಜಕೀಯವನ್ನು ಹೊರತುಪಡಿಸಿ ನನಗೆ ಅವರು ಹಿರಿಯ ಅಣ್ಣ ಇದ್ದ ಹಾಗೇ. ನಾನು ಆಗಾಗ್ಗೆ ಅವರನ್ನು ಭೇಟಿ ಮಾಡುತ್ತಿರುತ್ತೇನೆ. ಈ ವೇಳೆ ಕುಟುಂಬದ ವಿಚಾರಗಳನ್ನು ಮಾತಾಡುತ್ತೇವೆ. ಭೇಟಿಯಾದಾಗಲೆಲ್ಲ ರಾಜಕೀಯ ವಿಚಾರಗಳನ್ನು ಮಾತನಾಡಲು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.