ದೆಹಲಿ:
ದೆಹಲಿ ವಿಧಾನಸಭಾ ಚನಾವಣೆಯಲ್ಲಿ ಬಿಜೆಪಿ ಗೆಲುವಿನತ್ತ ದಾಪುಗಾಲಿಟ್ಟಿದ್ದು, 27 ವರ್ಷಗಳ ಬಳಿಕ ಅಧಿಕಾರದ ಗದ್ದುಗೆ ಹಿಡಿಯಲು ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಬಗ್ಗೆ ಚರ್ಚೆ ಜೋರಾಗಿದೆ.
ರಾಜಕೀಯದಲ್ಲಿ ಮಹತ್ವ ಪಡೆದಿರುವ ಲಿಂಗ ಮತ್ತು ಜಾತಿಯಂತಹ ವಿವಿಧ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಸಮತೋಲಿತ ಅಭ್ಯರ್ಥಿ ನೇಮಕಕ್ಕಾಗಿ ಪಕ್ಷವು ಪ್ರಯತ್ನಿಸುತ್ತಿದೆ. ಆಯ್ಕೆಯಾಗಿರುವ 48 ಶಾಸಕರ ಪೈಕಿ ಒಬ್ಬರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ನೇಮಿಸಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮಹಿಳೆ ಅಥವಾ ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಯು ಬಿಜೆಪಿ ಕೇಂದ್ರ ನಾಯಕತ್ವದ ಆಯ್ಕೆಯಾಗಲಿದೆ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ.
ವಿದ್ಯಾರ್ಥಿ ಜೀವನದಿಂದಲೇ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ರೇಖಾ ಗುಪ್ತಾ ಅವರು ಪ್ರಬಲ ಸ್ಪರ್ಧಿಯಾಗಿ ಕಾಣುತ್ತಾರೆ. ಅವರ ವೈಶ್ಯ ಸಮುದಾಯದ ಹಿನ್ನೆಲೆ ಮತ್ತು ಡಿಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಅನುಭವವು ಅವರಿಗೆ ಸಹಾಯ ಮಾಡಬಹುದು ಎಂದು ಹೇಳಲಾಗುತ್ತಿದೆ. ಜಾತಿವಾರು, ಮಹಿಳೆ, ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ಮುಖ್ಯಮಂತ್ರಿ ಜತೆಗೆ ಒಂದು ಅಥವಾ ಎರಡು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸುವ ಸಾಧ್ಯತೆಗಳಿವೆ.
ಬಿಜೆಪಿ ಹೈಕಮಾಂಡ್ ಹಿಂದೆ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಮುಖ್ಯಮಂತ್ರಿಯಾಗಿಸಿದ ನಿದರ್ಶನಗಳಿವೆ. ಹೀಗಾಗಿ ಈ ಬಾರಿ ದೆಹಲಿಯಲ್ಲಿಯೂ ಹೊಸ ಮುಖಕ್ಕೆ ಮಣೆಹಾಕಿದರೂ ಅಚ್ಚರಿಯಿಲ್ಲ. ಆದರೆ, ರಾಜ್ ಕುಮಾರ್ ಚೌಹಾಣ್ ಅವರಂತಹ ಎಸ್‌ಸಿ ಅಭ್ಯರ್ಥಿಗಳ ಉಲ್ಲೇಖವು ಮತ್ತೊಂದು ಸಮೀಕರಣವಾಗಿದೆ , ಏಕೆಂದರೆ ಬಿಜೆಪಿ ಪ್ರಬಲ ಸಮುದಾಯದ ಯಾರನ್ನಾದರೂ ಆಯ್ಕೆ ಮಾಡಬಹುದು.