ನವದೆಹಲಿ:
AAP ಪಂಜಾಬ್ ಘಟಕದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ಕಾಂಗ್ರೆಸ್ ಹೇಳಿಕೆಯನ್ನು ಮುಖ್ಯಮಂತ್ರಿ ಭಗವಂತ್ ಮಾನ್ ಮಂಗಳವಾರ ತಳ್ಳಿಹಾಕಿದ್ದು, ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬದ್ಧತೆಯಿಂದ ಇರುವುದಾಗಿ ಹೇಳಿದ್ದಾರೆ.ಪಂಜಾಬ್ ಘಟಕದಲ್ಲಿ ಭಿನ್ನಾಭಿಪ್ರಾಯ ವದಂತಿ ನಡುವೆ ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಂಗಳವಾರ ದೆಹಲಿಯ ಕಪುರ್ತಲಾ ಹೌಸ್‌ನಲ್ಲಿ ಸಿಎಂ ಮಾನ್, ಪಂಜಾಬ್ ಸಚಿವರು ಮತ್ತು ಶಾಸಕರೊಂದಿಗಿನ ಸಭೆ ನಂತರ ಈ ಹೇಳಿಕೆ ನೀಡಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ್ದ ಎಲ್ಲಾ ಪಂಜಾಬ್ ಸಚಿವರು ಮತ್ತು ಶಾಸಕರಿಗೆ ಕೇಜ್ರಿವಾಲ್ ಅವರು ಸಭೆಯಲ್ಲಿ ಧನ್ಯವಾದ ಹೇಳಿದರು ಎಂದು ಭಗವಂತ್ ಮಾನ್ ತಿಳಿಸಿದರು.ರಾಜ್ಯದ ಆಡಳಿತ ಪಕ್ಷದ 30 ಕ್ಕೂ ಹೆಚ್ಚು ಎಎಪಿ ಶಾಸಕರು ತಮ್ಮ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದು, ಪಕ್ಷ ಬದಲಾಯಿಸಬಹುದು ಎಂದು ಪಂಜಾಬ್ ಕಾಂಗ್ರೆಸ್ ನಾಯಕ ಪರತಾಪ್ ಸಿಂಗ್ ಬಾಜ್ವಾ ಇತ್ತೀಚೆಗೆ ಹೇಳಿದ್ದರು. ಎಎಪಿಯಲ್ಲಿಯೇ ಉಳಿಯುವುದರಿಂದ ದೀರ್ಘಾವಧಿಯಲ್ಲಿ ರಾಜಕೀಯವಾಗಿ ಪ್ರಯೋಜನಕಾರಿಯಾಗುವುದಿಲ್ಲ ಎಂಬುದನ್ನು ಈ ಶಾಸಕರು ಅರಿತುಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಬಾಜ್ವಾ ಹೇಳಿದ್ದರು.
ಈ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಮಾನ್,” ಬಾಜ್ವಾ ಅವರು ನಮ್ಮ ಶಾಸಕರನ್ನು ಲೆಕ್ಕಿಸಬಾರದು ಮತ್ತು ದೆಹಲಿಯಲ್ಲಿ ಕಾಂಗ್ರೆಸ್ ಎಷ್ಟು ಶಾಸಕರನ್ನು ಹೊಂದಿದೆ ಎಂಬುದನ್ನು ನೋಡಬೇಕು. ಎಎಪಿ ನಾಯಕರು “ದುರಾಸೆಯಿಲ್ಲದ ಸಮರ್ಪಿತ ಜನರು” ಎಂದು ಮನ್ ಪ್ರತಿಪಾದಿಸಿದರು.