ವಾಷಿಂಗ್ಟನ್:
ಮಹತ್ವದ ಅಮೆರಿಕಾ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ತೆರಳಿದ್ದಾರೆ. ತಮ್ಮ ಅಮೆರಿಕಾ ಭೇಟಿಯಲ್ಲಿ ಪ್ರಧಾನಿ ಮೋದಿ ಅವರು ವ್ಯಾಪಾರ ಮತ್ತು ತಂತ್ರಜ್ಞಾನ, ರಕ್ಷಣೆ ಮತ್ತು ಭದ್ರತೆ, ಇಂಧನ ಮತ್ತು ಜನರ ನಡುವಿನ ಸಂಬಂಧಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಮೋದಿಯವರು ಮೊನ್ನೆ ಬುಧವಾರ ಫ್ರಾನ್ಸ್‌ನಿಂದ ಅಮೆರಿಕಕ್ಕೆ ಆಗಮಿಸಿದರು. ಕಳೆದ ತಿಂಗಳು ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ಮೋದಿಯವರ ಮೊದಲ ಅಮೆರಿಕಾ ಭೇಟಿ ಮತ್ತು ಉಭಯ ನಾಯಕರು ನಡೆಸುತ್ತಿರುವ ಮೊದಲ ದ್ವಿಪಕ್ಷೀಯ ಮಾತುಕತೆ ಇದಾಗಿತ್ತು.
ಮಾತುಕತೆಯ ಸಮಯದಲ್ಲಿ, ಭಾರತ ಮತ್ತು ಅಮೆರಿಕ ರಕ್ಷಣೆ, ಇಂಧನ ಮತ್ತು ನಿರ್ಣಾಯಕ ತಂತ್ರಜ್ಞಾನ ಸೇರಿದಂತೆ ಹಲವಾರು ನಿರ್ಣಾಯಕ ಕ್ಷೇತ್ರಗಳಲ್ಲಿ ತಮ್ಮ ಕಾರ್ಯತಂತ್ರದ ಸಂಬಂಧಗಳನ್ನು ವಿಶಾಲ ಆಧಾರದಲ್ಲಿ ವಿಸ್ತರಿಸುವಲ್ಲಿ ದೊಡ್ಡ ಹೆಜ್ಜೆ ಇಡಲು ನಿರ್ಧರಿಸಿದವು. ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಬೆಳವಣಿಗೆಗಳ ಕುರಿತು ಎರಡೂ ಕಡೆಯವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಪ್ರಧಾನಿ ಮೋದಿ, ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತುಕತೆ ಫಲಪ್ರದವಾಗಿತ್ತು. “ಭಾರತ-ಯುಎಸ್ಎ ಸ್ನೇಹಕ್ಕೆ ಗಮನಾರ್ಹ ಆವೇಗವನ್ನು ನೀಡುತ್ತವೆ” ಎಂದು ಹೇಳಿದ್ದಾರೆ! “ಅಧ್ಯಕ್ಷ ಟ್ರಂಪ್ ಆಗಾಗ್ಗೆ MAGA ಬಗ್ಗೆ ಮಾತನಾಡುತ್ತಾರೆ. ಭಾರತದಲ್ಲಿ, ನಾವು ವಿಕಸಿತ ಭಾರತ ಪರ ಕೆಲಸ ಮಾಡುತ್ತಿದ್ದೇವೆ, ಇದು ಅಮೆರಿಕದ ಸಂದರ್ಭದಲ್ಲಿ MIGA ಆಗಿ ಬದಲಾಗುತ್ತದೆ. ಒಟ್ಟಾಗಿ, ಭಾರತ-ಯುಎಸ್ಎ ಸಮೃದ್ಧಿಗಾಗಿ MEGA ಪಾಲುದಾರಿಕೆಯನ್ನು ಹೊಂದಿವೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.