Karunadu Studio

ಕರ್ನಾಟಕ

ಕೆಂಪೇಗೌಡ ಲೇಔಟ್​ಗೆ ಮೂಲಭೂತ ಸೌಕರ್ಯ ವಿಳಂಬ….!


   ಇನ್ನು ಅರ್ಜಿ ಸಮಿತಿಯ ಸಭೆಯಿಂದ ಸಭಾತ್ಯಾಗ ಮಾಡಿರುವ ಕುರಿತಾಗಿ ಬಿಜೆಪಿ ಶಾಸಕ ಎಸ್​. ಸುರೇಶ್ ಕುಮಾರ್​, ತಮ್ಮ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ನಾಗರಿಕರಿಗೆ ಮೂಲಭೂತ ಸೌಲಭ್ಯ, ಸೌಕರ್ಯ (ರಸ್ತೆ, ಸೇತುವೆ, ಕುಡಿಯುವ ನೀರು, ವಿದ್ಯುತ್, ಒಳಚರಂಡಿ ಮುಂತಾದವು) ಗಳನ್ನು ಒದಗಿಸಲು ಸಂಬಂಧಪಟ್ಟ ಇಲಾಖೆಗಳು ವಿಫಲವಾದರೆ ನಾಗರಿಕರು ನಮ್ಮ ಈ ಅರ್ಜಿ ಸಮಿತಿಗೆ ತಮ್ಮ ಅಹವಾಲನ್ನು ಸಲ್ಲಿಸಬಹುದು. ಅರ್ಜಿ ಸಮಿತಿಯು ಈ ನಾಗರಿಕರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಅಗತ್ಯ ಶಿಫಾರಸ್ಸು ಮಾಡುತ್ತದೆ ಎಂದರು.

 

   ಇಂದು ವಿಧಾನಸಭೆಯ ಅರ್ಜಿ ಸಮಿತಿಯ ಸಭೆ ಮಾಡಲಾಗಿದ್ದು, ಇಂದಿನ ಸಭೆಯ ಕಾರ್ಯಸೂಚಿಯಲ್ಲಿ ಮೊದಲನೇ ವಿಷಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತಾಗಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು 3 ವರ್ಷಗಳಲ್ಲಿ ಒಟ್ಟಾರೆ 11 ಸಭೆಗಳು ನಡೆದಿವೆ ಎಂದಿದ್ದಾರೆ.

 

   ಈ ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗಿ 8-9 ವರ್ಷಗಳಾಗಿವೆ. ಇಷ್ಟು ವರ್ಷಗಳ ನಂತರವೂ ಸಹ ಈ ನಿವೇಶನದಾರರು ಮೂಲಭೂತ ಸೌಕರ್ಯ ಕೊರತೆಯಿಂದ ಮನೆ ನಿರ್ಮಿಸುವಂತಹ ಸ್ಥಿತಿಯಲ್ಲಿ ಇಲ್ಲ. ಇದುವರೆವಿಗೂ ಸುಮಾರು 05 ಜನ ಬಿಡಿಎ ಆಯುಕ್ತರು ಅರ್ಜಿ ಸಮಿತಿಯ ಮುಂದೆ ಬಂದು ಮೂಲಭೂತ ಸೌಕರ್ಯ ಒದಗಿಸುವ ಬಗ್ಗೆ ವಿವಿಧ ಭರವಸೆಗಳನ್ನು ನೀಡಿದ್ದಾರೆ. ದಿನಾಂಕ 2022 ಮೇ 05 ರ ಅರ್ಜಿ ಸಮಿತಿಯಲ್ಲಿ ಕೆಂಪೇಗೌಡ ಬಡಾವಣೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಡಿಸೆಂಬರ್-2023 ವರೆಗೆ ಅವಕಾಶ ನೀಡಲಾಗಿತ್ತು. ನಂತರ, 2023 ಸೆಪ್ಟೆಂಬರ್ 07 ರಂದು ಈ ಯೋಜನೆಗಳನ್ನು ಪೂರ್ಣಗೊಳಿಸಲು ಅಂತಿಮವಾಗಿ 1 ವರ್ಷದ ಸಮಯವನ್ನು ಪ್ರಾಧಿಕಾರವೇ ಕೋರಿತ್ತು. ಆಗ ನಮ್ಮ ಸಮಿತಿಯು ಇನ್ನಷ್ಟು ಉದಾರತೆ ತೋರಿಸಿ 12 ತಿಂಗಳ ಬದಲಿಗೆ 14 ತಿಂಗಳು ಅವಧಿಗೆ ವಿಸ್ತರಿಸಿತ್ತು. ಈ ವಿಸ್ತರಿಸಿದ ಅವಧಿಯು ನವೆಂಬರ್ 2024 ಕ್ಕೆ ಕೊನೆಗೊಂಡಿತು. ಆದರೆ ಇಂದಿನ ಸಭೆಯಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಆಖೈರಾಗಿ ಯಾವಾಗ, ಎಂದು ಒದಗಿಸಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟವಾದ ಉತ್ತರ ಸಿಗಲಿಲ್ಲ ಎಂದು ತಿಳಿಸಿದ್ದಾರೆ.

   ಅರ್ಜಿ ಸಮಿತಿಯು ಶಾಸಕಾಂಗದ ಒಂದು ಭಾಗ, ಸರ್ಕಾರಿ ಇಲಾಖೆಗಳು ಮತ್ತು ಬಿಡಿಎ ಅಂತಹ ಸಂಸ್ಥೆಗಳು ಈ ಸಮಿತಿಗೆ ಉತ್ತರ ಕೊಡುವಾಗ ಸಾಕಷ್ಟು ಎಚ್ಚರಿಕೆಯಿಂದ ಕೊಡಬೇಕು. ಮನೆ ಕಟ್ಟುವವರಿಗೆ ನಿವೇಶನ ಹಂಚಿಕೆಯಾದ ಎರಡು ವರ್ಷಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದಾಗಿ ನಿವೇಶನ ಹಂಚಿಕೆ ಮಾಡುವ ಸಮಯದಲ್ಲಿ ಬಿಡಿಎ ಭರವಸೆ ನೀಡಿದೆ. ಆದರೆ ಇಂದಿಗೂ ಸಹ ಮನೆ ಕಟ್ಟಲು ಗಟ್ಟಿ ಮನಸ್ಸು ಮಾಡುವ ನಿವೇಶನದಾರರು ಸ್ವಂತ ಹಣದ ಮೂಲಕ ಹಳ್ಳಿಗಳಿಂದ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿದ್ದಾರೆ. ಈ ತಾತ್ಕಾಲಿಕ ಸಂಪರ್ಕಕ್ಕಾಗಿ, ಬೆಸ್ಕಾಂ ನಿವಾಸಿಗಳಿಂದ ವಾಣಿಜ್ಯ ರೀತಿಯಲ್ಲಿ ಶುಲ್ಕವನ್ನು ಸಂಗ್ರಹಿಸುತ್ತಿದೆ. ಈ ನತದೃಷ್ಟ ನಿವಾಸಿಗಳು ತಮ್ಮ ಬಿಲ್ ಗಳನ್ನು ಮಾತ್ರವಲ್ಲದೆ, ತಮ್ಮ ರಸ್ತೆಗಳಲ್ಲಿನ ಬೀದಿ ದೀಪಗಳ ಬಿಲ್ ಗಳನ್ನು ಸಹ ಪಾವತಿಸುತ್ತಿದ್ದಾರೆ. ಕಾರಣ, ಬಿಡಿಎ ವಿದ್ಯುತ್ ಜಾಲವನ್ನು ಪೂರ್ಣಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

   ಇನ್ನು ಹಂಚಿಕೆದಾರರು ಮನೆಗಳನ್ನು ನಿರ್ಮಿಸುತ್ತಿಲ್ಲ ಎಂದು ಬಿಡಿಎ ದೂರುತ್ತಿದೆ. ಆದರೆ ಕುಡಿಯುವ ನೀರಿನ ಪೂರೈಕೆ ಎಲ್ಲಿದೆ? ನಾಡಪ್ರಭು ಕೆಂಪೇಗೌಡ ಬಡಾವಣೆ ಭೂಗತ ವಿದ್ಯುತ್, ನೀರು ಮತ್ತು ಒಳಚರಂಡಿ ಮಾರ್ಗಗಳೊಂದಿಗೆ ಅತ್ಯಾಧುನಿಕ ಬಡಾವಣೆ ಆಗಲಿದೆ ಎಂದು 7-8 ವರ್ಷಗಳ ಹಿಂದೆ ಬಿಡಿಎ ಪ್ರಕಟಿಸಿದ್ದರಿಂದ, ನಿವೇಶನ ಮಾಲೀಕರು ಅಂದು ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರವನ್ನು ಪಾವತಿಸಿ ನಿವೇಶನವನ್ನು ಪಡೆದಿದ್ದಾರೆ.

   ನಾಡಪ್ರಭು ಕೆಂಪೇಗೌಡ ಬಡಾವಣೆಯ ನಿವೇಶನಗಳಲ್ಲಿ ಮನೆಗಳನ್ನು ನಿರ್ಮಾಣ ಮಾಡದವರಿಗೆ ನಿವೇಶನದ ಈಗಿನ ಮಾರುಕಟ್ಟೆ ದರದ 10% ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದೆ. ಜೊತೆಗೆ ಮನೆ ನಿರ್ಮಿಸಲು ಈ ಹಿಂದೆ ನೀಡಿದ್ದ 5 ವರ್ಷಗಳ ಅವಧಿಯನ್ನು ಈಗ 3 ವರ್ಷಗಳಿಗೆ ಇಳಿಸಲಾಗಿದೆ. ಇದು ಯಾವ ಆಧಾರದ ಮೇಲೆ ಎಂದು ಪ್ರಶ್ನಿಸಿದ್ದಾರೆ.

   ಈ ಎಲ್ಲಾ ಪ್ರಶ್ನೆಗಳನ್ನು ನಾನು 20 ದಿನಗಳ ಹಿಂದೆ ಅರ್ಜಿ ಸಮಿತಿಯಲ್ಲಿ ಉಪಸ್ಥಿತರಿದ್ದ ಬಿಡಿಎ ಕಾರ್ಯದರ್ಶಿಗಳಿಗೆ ನೀಡಿದ್ದೆ. ಆದರೆ, ಇಂದು ನಡೆದ ಸಭೆಯಲ್ಲಿ ತನ್ನ ವೈಫಲ್ಯ ಮರೆಮಾಚಲು 20ಅಡಿX 30 ಅಡಿ ನಿವೇಶನ ಕೊಂಡವರು ಮಾಡುತ್ತಿರುವ ಅಪಪ್ರಚಾರವನ್ನು ನಂಬಿ ಸಮಿತಿಯ ಸದಸ್ಯರು ಇಲ್ಲಿ ವಿಷಯ ಪ್ರಸ್ತಾವನೆ ಮಾಡುತ್ತಿದ್ದಾರೆ ಎಂದು ಮಾತನಾಡಿದ ಬಿಡಿಎ ಅಧಿಕಾರಿಗಳ ವರ್ತನೆ ವಿರುದ್ದ ನಾನು ಸಹಜವಾಗಿ ಆಕ್ರೋಶಕ್ಕೆ ಒಳಗಾದೆ ಎಂದಿದ್ದಾರೆ.

   ಬಿಡಿಎ ಅಧಿಕಾರಿಗಳು ಸಮಿತಿಯ ಮುಂದೆ ತಾವೇ ನೀಡಿರುವ ಅಂತಿಮ ಗಡುವು ಮುಗಿದಿದ್ದರೂ, ಕೆಲಸ ಆಗದೇ ಇರುವುದನ್ನು ಪ್ರಶ್ನಿಸಿದಾಗ ನಿವೇಶನದಾರರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿ, ನನ್ನಂತಹ ಶಾಸಕರ ಕಾರ್ಯವೈಖರಿಯ ಬಗ್ಗೆ ಬೊಟ್ಟು ತೋರಿಸಿ ಮಾತನಾಡಿದಾಗ ನನಗೆ ಸಹಿಸಲಾಗಲಿಲ್ಲ. ಆಗ, ನಮ್ಮ ಸಮಿತಿಯ ಸಭಾಧ್ಯಕ್ಷರ ಅನುಪಸ್ಥಿತಿಯಲ್ಲಿ ಅಧ್ಯಕ್ಷ ಎಸ್.ಟಿ.ಸೋಮಶೇಖರ್ ರವರ ಸಮ್ಮುಖದಲ್ಲಿ ಈ ರೀತಿ ಶಾಸಕರು ನ್ಯಾಯಯುತವಾಗಿ ಮಾಡುತ್ತಿರುವ ಪ್ರಸ್ತಾವನೆಯನ್ನು ಪ್ರಶ್ನಿಸಿ ತನ್ನ ವೈಪಲ್ಯ ಮುಚ್ಚಿಕೊಳ್ಳಲು ಪ್ರಾಧಿಕಾರ ಮಾಡುತ್ತಿರುವ ಅಪಪ್ರಚಾರವನ್ನು ಪ್ರತಿಭಟಿಸಿ ಸಭಾತ್ಯಾಗ ಮಾಡಿದೆ ಎಂದು ತಿಳಿಸಿದ್ದಾರೆ.

  ನನ್ನ ಪ್ರಸ್ತಾವನೆಯ ಏಕೈಕ ಉದ್ದೇಶವೆಂದರೆ ದುಬಾರಿ ಹಣ ಪಾವತಿಸಿ ನಿವೇಶನ ಪಡೆದಿರುವ, ತಮ್ಮ ಜೀವನದ ಉಳಿತಾಯದ ಹಣವನ್ನು ನಿವೇಶನ ಕೊಳ್ಳುವುದಕ್ಕೆ ಹಣ ಪಾವತಿ ಮಾಡಿರುವ ಈ ನತದೃಷ್ಟ ನಿವೇಶನ ಮಾಲೀಕರುಗಳು, ತಮ್ಮ ನಿವೇಶನದಲ್ಲಿ ಮನೆ ನಿರ್ಮಿಸಲು ಅವಶ್ಯಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ದೇಶದಿಂದ ಮಾತ್ರ. ಇದನ್ನು ಬಿಟ್ಟು ಬೇರೆ ಯಾವುದೇ ದುರುದ್ದೇಶವಿರುವುದಿಲ್ಲ ಎಂದು ಹೇಳಿದ್ದಾರೆ.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »