ಬೆಂಗಳೂರು:
ಇತಿಹಾಸ ಪ್ರಸಿದ್ಧ ತುಮಕೂರು ತಾಲ್ಲೂಕು ಕೈದಾಳದಲ್ಲಿ ಅಮರಶಿಲ್ಪಿ ಜಕಣಾಚಾರಿ ಸ್ಮಾರಕ ಶಿಲ್ಪಕಲಾ ತರಬೇತಿ ಕೇಂದ್ರ ಹಾಗೂ ಹಿರಿಯ ಚಿತ್ರ ಕಲಾ ಶಿಕ್ಷಕ ಡಾ. ಎಚ್. ಎಂ. ಗಂಗಾಧರಯ್ಯ ಆರ್ಟ್ ಥೀಮ್ ಪಾರ್ಕ್ ಸ್ಥಾಪಿಸುವುದು ಸೇರಿದಂತೆ ಕೈದಾಳವನ್ನು ಸಮಗ್ರ ಪ್ರವಾಸಿ ತಾಣ ವಾಗಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವಂತೆ ವಿಶ್ವ ಕರ್ಮ ಸಮುದಾಯ ಸಂಘಟನೆ ಗಳ ಪ್ರತಿನಿಧಿಗಳು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದರು.
ವಿಶ್ವಕರ್ಮ ಸೇವಾ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಾ. ಬಿ. ಎಂ. ಉಮೇಶ್ ಕುಮಾರ್ ನೇತೃತ್ವದಲ್ಲಿ ಸಲ್ಲಿಸಿದ ಮನವಿಗೆ ಸಕಾರಾತ್ಮಕ ವಾಗಿ ಸ್ಪಂದಿಸಿದ ಗೃಹ ಸಚಿವರು, ತುಮಕೂರು ಜಿಲ್ಲೆಯ ಕೈದಾಳ ಐತಿಹಾಸಿಕ ವಾಗಿರುವ ಕ್ಷೇತ್ರ. ಅಮರಶಿಲ್ಪಿ ಜಕಣಾಚಾರಿ ಅವರ ಹುಟ್ಟೂರು ಹಾಗೂ ಅವರಿಗೆ ಕೈ ಬಂದ ಪ್ರತೀತಿಯ ಕೈದಾಳ ವನ್ನು ಪ್ರವಾಸಿ ತಾಣ ವಾಗಿ ಸಮಗ್ರ ಅಭಿವೃದ್ಧಿ ಪಡಿಸುವ ಜೊತೆಗೆ ಶಿಲ್ಪಕಲಾ ತರಬೇತಿ ಕೇಂದ್ರ ವನ್ನು ತೆರೆಯುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ಬಜೆಟ್ ನಲ್ಲಿ ಸೇರ್ಪಡೆ ಗೊಳಿಸಲು ಕ್ರಮವಹಿಸುವುದಾಗಿ ತಿಳಿಸಿದರು.
ಈ ವೇಳೆ ವಿಶ್ವ ಕರ್ಮ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ವಿಜಯಕುಮಾರ್ ಪತ್ತಾರ್, ಜಿಲ್ಲಾ ವಿಶ್ವ ಕರ್ಮ ಅಭಿವೃದ್ಧಿ ನಿಗಮದ ಜಿಲ್ಲಾ ನಿರ್ದೇಶಕ ಟಿ. ಸಿ. ಡಮರುಗೇಶ್, ಕಾಳಿಕಾಂಬ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೋವರ್ಧನ ಚಾರ್, ನಿರ್ದೇಶಕ ಎಸ್. ಹರೀಶ್ ಆಚಾರ್ಯ ಹಾಗೂ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಟಿ. ಎ. ರವಿಕುಮಾರ್ ಇತರರಿದ್ದರು.