ಬೆಂಗಳೂರು:
11,000 ಕೋಟಿ ಮೌಲ್ಯದ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಹಾಗೂ ಮೇಕೆದಾಟು ಯೋಜನೆಯ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒತ್ತಾಯಿಸಿದೆ.ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಲೀಟ್ ಹಾಗೂ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ನವದೆಹಲಿಯಲ್ಲಿ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮಂಗಳವಾರ ಭೇಟಿ ಮಾಡಿದರು.
ಈ ಭೇಟಿ ಕುರಿತು ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯದ್ದೇಶಿಸಿ ಬುಧವಾರ ಮಾತನಾಡಿದ ಡಿಕೆ.ಶಿವಕುಮಾರ್ ಅವರು, ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮತಿ ಹಾಗೂ ಅಗತ್ಯವಿರುವ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ಇದಲ್ಲದೆ ಹೊಸ ಯೋಜನೆಗಳ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಲಾಗಿದೆ. ಪ್ರಮುಖವಾಗಿ ರಾಜ್ಯದ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಬದಲಾಯಿಸುವ ಸಂಬಂಧ ತಾಂತ್ರಿಕ ತಂಡ ಕೆಲಸ ಮಾಡುತ್ತಿದೆ. ನೀರಾವರಿ ಯೋಜನೆಗಳ ಕುರಿತು ಮತ್ತೊಂದು ಸುತ್ತಿನ ಚರ್ಚೆಗೆ ಮಾರ್ಚ್ 18ಕ್ಕೆ ಸಮಯ ಕೇಳಿದ್ದೇವೆ. ಈ ಉದ್ದೇಶಿತ ಯೋಜನೆಗಳಿಂದ ವಿಜಯಪುರ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ದಕ್ಷ ನೀರಾವರಿ ನಿರ್ವಹಣೆಗಾಗಿ ಸ್ವಯಂಚಾಲಿತ ಅಣೆಕಟ್ಟುಗಳು ಮತ್ತು ಕಾಲುವೆ ವ್ಯವಸ್ಥೆಗಳಿಗಾಗಿ ಶೀಘ್ರದಲ್ಲೇ ಮತ್ತೊಂದು ಪ್ರಸ್ತಾವನೆಯನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.
ರಾಜಸ್ಥಾನದ ಉದಯಪುರದಲ್ಲಿ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ನಡೆದ ಸಭೆಯಲ್ಲಿ 34 ರಾಜ್ಯಗಳ ಜಲಸಂಪನ್ಮೂಲ ಸಚಿವರು, 4-5 ಮುಖ್ಯಮಂತ್ರಿಗಳು, ಕೆಲವು ರಾಜ್ಯಗಳ ಉಪಮುಖ್ಯಮಂತ್ರಿಗಳು ಭಾಗವಹಿಸಿದ್ದರು. ನಮ್ಮ ರಾಜ್ಯದಿಂದ ನಾನು ಹಾಗೂ ನಮ್ಮ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಭಾಗವಹಿಸಿದ್ದೆವು. ನಮ್ಮ ರಾಜ್ಯದ ನೀರಾವರಿ ಯೋಜನೆಗಳ ವಿಚಾರವನ್ನು ನಾನು ಪ್ರಸ್ತಾಪ ಮಾಡಿದ್ದೆ. ನಂತರ ಕೇಂದ್ರ ಜಲಶಕ್ತಿ ಸಚಿವರು ನಿನ್ನೆ ಸಭೆ ಮಾಡಲು ಸಮಯ ನೀಡಿದ್ದರು. ಕೇಂದ್ರ ಜಲಶಕ್ತಿ ಸಚಿವಾಲಯ ಹಾಗೂ ರಾಜ್ಯದ ಎಲ್ಲಾ ಅಧಿಕಾರಿಗಳ ಸಭೆ ಮಾಡಿದೆವು ಎಂದು ತಿಳಿಸಿದರು.
ಈ ಯೋಜನೆ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವೇನು ಎಂದು ತಿಳಿಸುವಂತೆ ಕೇಳಿದ್ದೇವೆ. ಈ ವಿಚಾರದಲ್ಲಿ ಸಮಯವ್ಯರ್ಥ ಮಾಡುವುದು ಬೇಡ. ಈ ಯೋಜನೆ ಮಾಡಲು ನೀವು ಬದ್ಧರಾಗಿದ್ದೀರಾ ಅಥವಾ ಇಲ್ಲವೇ? ಕೇಂದ್ರ ಜಲಶಕ್ತಿ ಸಚಿವಾಲಯ ನ್ಯಾಯದ ಸ್ಥಾನದಲ್ಲಿ ಕೂತಿದ್ದು, ಈ ಯೋಜನೆ ಬಗ್ಗೆ ನಿಲುವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಳಿದ್ದೇವೆ. ಈ ಯೋಜನೆಯಿಂದ ಎರಡೂ ರಾಜ್ಯಗಳಿಗೆ ಉಪಯೋಗವಾಗಬೇಕು. ಇನ್ನು ಪೆನ್ನಾರ್ ನದಿ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡು ನಡುವೆ ತಿಕ್ಕಾಟವಿದ್ದು, ಸಂಧಾನದ ಮೂಲಕ ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದೇ ಎಂದು ಕೇಳಿದ್ದೇವೆ. ಕಳೆದ ವರ್ಷ 300 ಟಿಎಂಸಿ, ಅದಕ್ಕೂ ಹಿಂದಿನ ವರ್ಷ 400 ಟಿಎಂಸಿ ನೀರು ಸಮುದ್ರಕ್ಕೆ ಸೇರಿದೆ. ಇದನ್ನು ನಾವು ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಮಧ್ಯೆ ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಸುಮಾರು 30 ಟಿಎಂಸಿ ನೀರು ನಷ್ಟವಾಗುತ್ತಿದೆ. ಹೀಗಾಗಿ ನವಲಿ ಬಳಿ ಸಮಾನಾಂತರ ಅಣೆಕಟ್ಟು ನಿರ್ಮಾಣ ಮಾಡುವ ಯೋಜನೆ ಇದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಹಾಗೂ ತೆಲಂಗಾಣ ಸಚಿವರು ಹಾಗೂ ಅಧಿಕಾರಿಗಳ ಜೊತೆ ಪ್ರತ್ಯೇಕ ಸಭೆ ಮಾಡಲಾಯಿತು. ಅದನ್ನು ಕೇಂದ್ರ ಸಚಿವರ ಗಮನಕ್ಕೂ ತರಲಾಯಿತು. ಈ ಬಗ್ಗೆ ನೀವೆ ಕೂತು ಚರ್ಚೆ ಮಾಡಿ. ನೀವು ಒಮ್ಮತಕ್ಕೆ ಬಂದರೆ ನಮಗೂ ಒಪ್ಪಿಗೆ ಇದೆ ಎಂದು ಕೇಂದ್ರ ಸಚಿವರು ತಿಳಿಸಿದರು.