ಬೆಂಗಳೂರು:
ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬನ್ ರಸ್ತೆ, ಮೈನ್‌ಗಾರ್ಡ್ ಕ್ರಾಸ್ ರಸ್ತೆಯಿಂದ ಡಿಸ್ಪೆನ್ಸರಿ ರಸ್ತೆಯವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಇದು ವ್ಯಾಪಾರಿಗಳು ಮತ್ತು ವಾಹನ ಸವಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಕಾಮಗಾರಿ ಕೆಲಸಗಳು ನಿಧಾನಗತಿಯಲ್ಲಿ ನಡೆಯುತ್ತಿದ್ದು, ಇದರಿಂದ ಅನಾನುಕೂಲವಾಗುತ್ತಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.
ಕಾಮಗಾರಿಯಿಂದಾಗಿ ಸ್ಥಳದಲ್ಲಿ ಸಾಕಷ್ಟು ಧೂಳು ತುಂಬುತ್ತಿದ್ದು, ಬಿಸಿಲು ಕೂಡ ಹೆಚ್ಚಾಗಿರುವ ಕಾರಣ ಗ್ರಾಹಕರು ಸ್ಥಳಕ್ಕೆ ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ.
ವೈಟ್ ಟಾಪಿಂಗ್ ಕಾಮಗಾರಿಯಿಂದಾಗಿ ಪಾರ್ಕಿಂಗ್‌ಗೆ ಅವಕಾಶವಿಲ್ಲದಂತಾಗಿದೆ. ಸಂಚಾರ ದಟ್ಟಣೆ ಕೂಡ ಹೆಚ್ಚಾಗಿದೆ. ಕಬ್ಬನ್ ರಸ್ತೆಗೆ ಹೋಗಬೇಕಿರುವ ವಾಹನಗಳು ವೀಲರ್ ರಸ್ತೆ, ಬಾಣಸವಾಡಿ ಮತ್ತು ಇತರ ಪ್ರದೇಶಗಳನ್ನು ತಲುಪಲು ಮೇನ್ ಗಾರ್ಡ್ ಕ್ರಾಸ್ ರಸ್ತೆಗೆ ಬರುತ್ತಿವೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಗ್ರಾಹಕರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ ಎಂದು ಎಂದು ಸಫಿನಾ ಪ್ಲಾಜಾದ ಅಂಗಡಿಯವರು ಹೇಳಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಅಸೋಸಿಯೇಷನ್‌ನ ಮಾಯಾಂಕ್ ರೋಹಟ್ಗಿ ಅವರು ಮಾತನಾಡಿ, ಸಾಮಾನ್ಯ ಸಂದರ್ಭಗಳಿಗೆ ಹೋಲಿಸಿದರೆ ವ್ಯಾಪಾರದಲ್ಲಿ ಶೇಕಡಾ 20 ರಷ್ಟು ಕುಸಿತ ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಸಂಚಾರ ದಟ್ಟಣೆ ಇರುವ ಕಾರಣ, ಟ್ರಾಫಿಕ್‌ನಲ್ಲಿ ಸಿಲುಕಿಕೊಳ್ಳುವ ಭಯ ಗ್ರಾಹಕರಿಗೆ ಶುರುವಾಗಿದೆ. ಹಲವರು ಕೊನೆಯ ಕ್ಷಣದಲ್ಲಿ ಕಮರ್ಷಿಯಲ್ ಸ್ಟ್ರೀಟ್‌ಗೆ ಬರುವ ಬದಲು ಬೇರೆಡೆ ಶಾಪಿಂಗ್ ಮಾಡಲು ನಿರ್ಧರಿಸುತ್ತಿದ್ದಾರೆಂದು ಹೇಳಿದ್ದಾರೆ.ಈ ನಡುವೆ ಜನಪ್ರಿಯ ಆಭರಣ ಮಳಿಗೆಯವರು ನಿಯಮಿತ ಗ್ರಾಹಕರು ಮತ್ತು ಸಿಬ್ಬಂದಿಗೆ ಅನಾನುಕೂಲವಾಗದಂತೆ ನೋಡಿಕೊಳ್ಳಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಿದ್ದಾರೆ.
ಗ್ರಾಹಕರ ಅನುಕೂಲಕ್ಕಾಗಿ, ಪರ್ಯಾಯ ಮಾರ್ಗ ನಕ್ಷೆಗಳನ್ನು ವಾಟ್ಸಾಪ್ ಮೂಲಕ ಹಂಚಿಕೊಳ್ಳಲಾಗಿದೆ. ಗ್ರಾಹಕರನ್ನು ನಾವೇ ಅಂಗಡಿಗೆ ಕರೆದುಕೊಂಡು ಬರುತ್ತೇವೆ. ನಂತರ ಅವರಿಗೆ ಉಪಹಾರಗಳನ್ನೂ ನೀಡುತ್ತಿದ್ದೇವೆ. ಅನಾನುಕೂಲವಾಗದಂತೆ ನೋಡಿಕೊಳ್ಳಲು ಈ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಆಭರಣ ಮಳಿಗೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.