ಬೆಂಗಳೂರು:
ರಾಜ್ಯ ಸರ್ಕಾರ ಈ ಬಾರಿ ಆಯೋಜಿಸಿದ್ದ ಇನ್ವೆಸ್ಟ್ ಕರ್ನಾಟಕ ಜಾಗತಿಕ ಸಮಾವೇಶ 2025ರಲ್ಲಿ ಒಟ್ಟು 98 ಕಂಪೆನಿಗಳೊಂದಿಗೆ ಒಡಂಬಡಿಕೆಗಳಾಗಿದ್ದು, ಈ ಕಂಪೆನಿಗಳಿಂದ 6.24 ಕೋಟಿ ಬಂಡವಾಳ ಹರಿದು ಬರಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಮಂಗಳವಾರ ಮಾಹಿತಿ ನೀಡಿದರು.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಎಸ್.ವಿ. ಸಂಕನೂರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ನಡೆದಿದ್ದ ಇನ್ವೆಸ್ಟ್ ಕರ್ನಾಟಕ-2022ರ ಸಮಾವೇಶದಲ್ಲಿ ಉದ್ಯಮ ಪ್ರಾರಂಭಿಸಲು 57 ಕಂಪೆನಿಗಳೊಂದಿಗೆ 5,41,369 ಕೋಟಿ ಹೂಡಿಕೆ ಮಾಡಲು ಒಪ್ಪಂದಗಳಿಗೆ ಸಹಿ ಮಾಡಲಾಗಿತ್ತು. ಈ 57 ಕಂಪೆನಿಗಳಲ್ಲಿ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ ಒಟ್ಟು 20 ಕಂಪೆನಿಗಳಿಗೆ ಅನುಮೋದನೆ ನೀಡಲಾಗಿದ್ದು, ಈ ಪ್ರಸಾವನೆಗಳಿಂದ 2,01,167 ಕೋಟಿ ರು. ಬಂಡವಾಳ ಹೂಡಿಕೆಯಾಗಲಿದೆ ಹಾಗೂ 70,740 ಉದ್ಯೋಗ ಸೃಜನೆಯಾಗಲಿದೆ. ಇವುಗಳಲ್ಲಿ 2 ಯೋಜನೆಗಳು ಅನುಷ್ಠಾನಗೊಂಡಿವೆ ಎಂದು ಹೇಳಿದರು.
ಈ ವರ್ಷ ನಡೆದ ಸಮಾವೇಶದಲ್ಲಿ ಹೂಡಿಕೆಯ ಪ್ರಮಾಣ ಹೆಚ್ಚಿದ್ದು, ಇದರಿಂದ ಕರ್ನಾಟಕವು ಇಡೀ ದೇಶದಲ್ಲೇ ಮಾದರಿ ರಾಜ್ಯವಾಗಿ ಶರವೇಗದಲ್ಲಿ ಅಭಿವೃದ್ಧಿ ಕಾಣಲಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನಲ್ಲಿ ನಡೆದ ಸಮಾವೇಶದಲ್ಲಿ ರಾಜ್ಯದಿಂದ 2,892, ವಿವಿಧ ರಾಜ್ಯಗಳಿಂದ 286 ಹಾಗೂ ವಿದೇಶಿಗಳಿಂದ 72 ಸೇರಿದಂತೆ ಒಟ್ಟು 3,250 ಉದ್ದಿಮೆದಾರರು ಭಾಗಿಯಾಗಿದ್ದರು. ಒಡಂಬಡಿಕೆಯಾದ 98 ಕಂಪನಿಗಳಿಂದ 6.24 ಕೋಟಿ ಬಂಡವಾಳ ಹರಿದು ಬರಲಿದೆ, ಹೆಚ್ಚುವರಿಯಾಗಿ, 1,101 ಕಂಪನಿಗಳಿಗೆ ನೀಡಲಾದ ಅನುಮತಿಗಳಿಂದ ರೂ. 4,03,533 ಕೋಟಿ ಮೌಲ್ಯದ ಹೂಡಿಕೆಗಳಾಗುವ ಸಾಧ್ಯತೆಗಳಿದ್ದು. ಒಟ್ಟಾರೆ ರೂ. 10.27 ಲಕ್ಷ ಕೋಟಿ ಮೌಲ್ಯದ ಹೂಡಿಕೆಯಾಗುವ ನಿರೀಕ್ಷೆಗಳಿವೆ ಎಂದು ಹೇಳಿದರು.
ಏರೋಸ್ಪೇಸ್, ಆಟೋ ಮತ್ತು ಇ.ವಿ, ಸಿಮೆಂಟ್ ಮತ್ತು ಉಕ್ಕು, ಇಎಸ್ಡಿಎಂ, ಆಹಾರ ಸಂಸ್ಕರಣೆ ಮತ್ತು ಕೃಷಿ, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್, ಆರ್ &ಡಿ ಮತ್ತು ಜಿಸಿಸಿ, ಮರುಬಳಕೆ ಇಂಧನ ಹಾಗೂ ಔಷಧ ತಯಾರಿಕೆ ವಲಯಗಳು ಒಪ್ಪಂದಕ್ಕೆ ಸಹಿ ಹಾಕಿವೆ.
ಈ ಹೂಡಿಕೆಗಳು ರಾಜ್ಯದ 21 ಜಿಲ್ಲೆಗಳಲ್ಲಿ ಆಗಲಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅತ್ಯಧಿಕ ಎಂದರೆ 30 ಕಂಪನಿಗಳು 26,331 ಕೋಟಿ ರೂ. ಹೂಡಿಕೆ ಮಾಡಲಿದ್ದರೆ, ಬೆಂಗಳೂರು ನಗರ ಜಿಲ್ಲೆಯಲ್ಲಿ 14 ಕಂಪನಿಗಳು 35,297 ಕೋಟಿ ರೂ. ಬಂಡವಾಳ ತೊಡಗಿಸಲಿವೆ. ಉಳಿದ ಜಿಲ್ಲೆಗಳಲ್ಲಿ 54 ಯೋಜನೆಗಳಿಗೆ ವಿವಿಧ ಕಂಪನಿಗಳು ಹಣ ಹಾಕಲಿವೆ. ವಲಯಗಳ ಪೈಕಿ ಸಾಮಾನ್ಯ ಉತ್ಪಾದನಾ ವಲಯದಲ್ಲಿ ಗರಿಷ್ಠ 23 ಒಡಂಬಡಿಕೆಗಳಾಗಿವೆ. ಈ ಬಾರಿ ಆಗಿರುವ ಒಪ್ಪಂದಗಳಲ್ಲಿ ಕನಿಷ್ಠ ಶೇ 75ರಷ್ಟು ಹೂಡಿಕೆ ಆಗುವ ವಿಶ್ವಾಸ ಇದೆ ಎಂದು ಹೇಳಿದರು. ‘ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಒಂದೊಂದು ದರ ನಿಗದಿಪಡಿಸಿದ್ದ ಕಾರಣ ಮನೆ ಮನೆಗೆ ಅನಿಲ ಸಂಪರ್ಕ ಒದಗಿಸುವುದು ವಿಳಂಬವಾಗಿದೆ. ಈ ಸಮಸ್ಯೆ ಸದ್ಯ ಬಗೆಹರಿದಿದ್ದು, 2030ರೊಳಗೆ ಉಳಿದ 60 ಲಕ್ಷ ಮನೆಗಳಿಗೆ ಕೊಳವೆ ಮಾರ್ಗದ ಮೂಲಕ ಅಡುಗೆ ಅನಿಲ ಪೂರೈಸಲಾಗುವುದು ಎಂದು ಸಚಿವರು ತಿಳಿಸಿದರು.
ಬಿಜೆಪಿಯ ಡಿ.ಎಸ್. ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಂಬಿ.ಪಾಟೀಲ್ ಅವರು, ‘ನಗರ ಅನಿಲ ಸರಬರಾಜು ನೀತಿ ಅನ್ವಯ (ಸಿಜಿಡಿ) ಅನಿಲ ಪೈಪ್ ಅಳವಡಿಕೆ ಮತ್ತು ಮೇಲ್ವಿಚಾರಣಾ ಶುಲ್ಕವನ್ನು ಮೀಟರ್‌ಗೆ ರೂ. 1 ನಿಗದಿಪಡಿಸಲಾಗಿದೆ. ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಬೇಕೆಂದು ಅನಿಲ ಪೂರೈಕೆ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ರಾಜ್ಯದಲ್ಲಿ 66.25 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸುವ ಮತ್ತು 1,022 ಸಿಎನ್‌ಜಿ ಮರುಪೂರಣ ಕೇಂದ್ರಗಳನ್ನು ತೆರೆಯುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.