ನವದೆಹಲಿ:
ಭಾರತದಲ್ಲಿ 10 ಮಿಲಿಯನ್ ಡಾಲರ್ ಗೂ ಅಧಿಕ ಆಸ್ತಿ ಹೊಂದಿರುವವರ ಸಂಖ್ಯೆ 85,698ಕ್ಕೆ ಏರಿಕೆಯಾಗಿದೆ. ಜಾಗತಿಕ ರಿಯಲ್ ಎಸ್ಟೇಜ್ ಏಜೆನ್ಸಿ ನೈಟ್ ಫ್ರಾಂಕ್ ಬುಧವಾರ ‘ ‘ದಿ ವೆಲ್ತ್ ರಿಪೋರ್ಟ್ 2025’ ಬಿಡುಗಡೆ ಮಾಡಿದೆ.
ಈ ವರದಿ ಪ್ರಕಾರ ಹಿಂದಿನ ವರ್ಷದಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚಿನ ಆಸ್ತಿ ಹೊಂದಿರುವವರ ಸಂಖ್ಯೆ( HNWI) 80,686 ಇತ್ತು. ಆದರೆ ಈ ಬಾರಿ ಇದು 85,698ಕ್ಕೆ ಅಂದರೆ ಶೇ. 6 ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಾಗುತ್ತಿದ್ದು, 2028 ರ ವೇಳೆಗೆ ಈ ಸಂಖ್ಯೆ 93,753 ಕ್ಕೆ ಏರುವ ನಿರೀಕ್ಷೆಯಿದೆ ಎಂದು ಏಜೆನ್ಸಿ ಮಾಹಿತಿ ನೀಡಿದೆ.
ದೇಶದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಳ ಪ್ರವೃತ್ತಿಯು ದೇಶದ ಬಲವಾದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆ, ಹೆಚ್ಚುತ್ತಿರುವ ಹೂಡಿಕೆ ಅವಕಾಶಗಳು ಮತ್ತು ಐಷಾರಾಮಿ ಮಾರುಕಟ್ಟೆ ವಿಸ್ತರಣೆಯನ್ನು ತೋರಿಸಿದೆ. ಅಲ್ಲದೇ ಜಾಗತಿಕ ಸಂಪತ್ತು ಸೃಷ್ಟಿಯಲ್ಲಿ ಭಾರತವನ್ನು ಪ್ರಮುಖ ರಾಷ್ಟ್ರವನ್ನಾಗಿಸುತ್ತದೆ.
ಭಾರತದಲ್ಲಿ ಬಿಲಿಯನೇರ್ ಜನರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಬಂದಿದೆ. ಪ್ರಸ್ತುತ ಭಾರತದಲ್ಲಿ 191 ಶತಕೋಟ್ಯಾಧಿಪತಿಗಳಿದ್ದಾರೆ. ಅದರಲ್ಲಿ 26 ಮಂದಿ ಕಳೆದ ವರ್ಷವಷ್ಟೇ ಶ್ರೇಯಾಂಕದ ಪಟ್ಟಿ ಸೇರಿದ್ದಾರೆ. 2019ರಲ್ಲಿ ಕೇವಲ ಏಳು ಜನರು ಮಾತ್ರ ಈ ಪಟ್ಟಿಗೆ ಸೇರಿದ್ದರು.