ದುಬೈ:
ಮಾ.9 ರಂದು ದುಬೈನಲ್ಲಿ ನಡೆಯಲಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದ ಎಲ್ಲ ಟಿಕೆಟ್‌ಗಳು ಕೇವಲ 2 ಗಂಟೆಗಳಲ್ಲೇ ಮಾರಾಟವಾಗಿದೆ. ಟಿಕೆಟ್‌ಗಳಿಗೆ ಕನಿಷ್ಠ 250 ದಿಹರ್ಮ್(ಸುಮಾರು 5,925) ಹಾಗೂ ಗರಿಷ್ಠ 12,000 ದಿರ್ಹಮ್( ಸುಮಾರು 2 ಲಕ್ಷ 84 ಸಾವಿರ) ಬೆಲೆ ನಿಗದಿಪಡಿಸಿತ್ತು. ದುಬೈ ಕ್ರೀಡಾಂಗಣದಲ್ಲಿ 25 ಸಾವಿರ ಆಸನ ಸಾಮರ್ಥ್ಯ ಹೊಂದಿದೆ.
ಬರೋಬ್ಬರಿ 25 ವರ್ಷಗಳ ಬಳಿಕ ನ್ಯೂಜಿಲೆಂಡ್ ಮತ್ತು ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪ್ರಶಸ್ತಿ ಸುತ್ತಿನಲ್ಲಿ ಕಾದಾಟ ನಡೆಸುತ್ತಿದೆ. 2000ದಲ್ಲಿ ನಡೆದಿದ್ದ 2ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ಮತ್ತು ಕಿವೀಸ್ ಎದುರಾಗಿತ್ತು. ಅಂದು ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತ 4 ವಿಕೆಟ್‌ಗಳಿಂದ ಸೋತಿತ್ತು. ಇದೀಗ 25 ವರ್ಷಗಳ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಭಾರತಕ್ಕೆ ಉತ್ತಮ ಅವಕಾಶವಿದೆ. ಆದರೆ ಕಿವೀಸ್ ಸವಾಲು ಅಷ್ಟು ಸುಲಭವಲ್ಲ.
ಭಾರತದ ಪಾಲಿಗೆ ಐಸಿಸಿ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ಯಾವಾಗಲೂ ಕಂಟಕವಾಗಿಯೇ ಕಾಡಿದೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ಭಾರತ ಇದುವರೆಗೂ ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದಿಲ್ಲ. 2021ರಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲೂ ಭಾರತ ತಂಡ ನ್ಯೂಜಿಲೆಂಡ್ ಎದುರು ಸೋತಿತ್ತು. ಕಿವೀಸ್ ಗೆದ್ದಿರುವ 2 ಐಸಿಸಿ ಟ್ರೋಫಿ ಭಾರತ ವಿರುದ್ಧವೇ. ಹೀಗಾಗಿ ರೋಹಿತ್ ಶರ್ಮ ಪಡೆ ಈ ಬಾರಿ ಎಚ್ಚರಿಕೆಯಿಂದ ಫೈನಲ್ ಆಡಬೇಕಿದೆ. ಲೀಗ್‌ನಲ್ಲಿ ಕಿವೀಸ್ ತಂಡವನ್ನು ಮಣಿಸಿದ ವಿಶ್ವಾಸದಲ್ಲೇ ಭಾರತ ಫೈನಲ್ ಆಡಬೇಕಿದೆ.
ಬುಧವಾರ ಗಡಾಫಿ ಮೈದಾನದಲ್ಲಿ ನಡೆದಿದ್ದ ದ್ವಿತೀಯ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 50 ರನ್‌ಗಳ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತ್ತು.