ಬೆಂಗಳೂರು:
ರಾಜಧಾನಿ ಬೆಂಗಳೂರಿನಲ್ಲಿ ಪರಿಣಾಮಕಾರಿ ಪೊಲೀಸ್ ವ್ಯವಸ್ಥೆಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 16ನೇ ಬಜೆಟ್‌ನಲ್ಲಿ ಪೊಲೀಸ್ ವಿಭಾಗಗಳ ಸಂಖ್ಯೆಯನ್ನು ಎಂಟರಿಂದ 11 ಕ್ಕೆ ಹೆಚ್ಚಿಸುವುದಾಗಿ ಶುಕ್ರವಾರ ಘೋಷಿಸಿದ್ದಾರೆ.ಪ್ರಸ್ತುತ ಬೆಂಗಳೂರು ಉತ್ತರ, ದಕ್ಷಿಣ, ಮಧ್ಯ, ಪೂರ್ವ, ಪಶ್ಚಿಮ, ಆಗ್ನೇಯ, ಈಶಾನ್ಯ ಮತ್ತು ವೈಟ್‌ಫೀಲ್ಡ್ ಸೇರಿ ಎಂಟು ಪೊಲೀಸ್ ವಿಭಾಗಗಳಿವೆ.
ಇಂದು ವಿಧಾನಸಭೆಯಲ್ಲಿ 2025-26ನೇ ಸಾಲಿನ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು, ಬೆಂಗಳೂರಿನಲ್ಲಿ ಇನ್ನೂ ಮೂರು ಪೊಲೀಸ್ ವಿಭಾಗಗಳೊಂದಿಗೆ, ಪೊಲೀಸ್ ಠಾಣೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ನಗರದಲ್ಲಿ ಇನ್ನೂ ಮೂವರು ಐಪಿಎಸ್ ಅಧಿಕಾರಿಗಳನ್ನು ಡಿಸಿಪಿಗಳಾಗಿ ನೇಮಿಸಲಾಗುವುದು. ಪ್ರತಿದಿನ ಹೆಚ್ಚಿನ ಸೈಬರ್ ಅಪರಾಧಗಳು ವರದಿಯಾಗುತ್ತಿರುವುದರಿಂದ ಐದು ಕೋಟಿ ರೂ. ಅನುದಾನದೊಂದಿಗೆ ಸೈಬರ್ ಅಪರಾಧ ವಿಭಾಗವನ್ನು ಸಹ ಬಲಪಡಿಸಲಾಗುವುದು ಎಂದರು.
ಶೀಘ್ರದಲ್ಲೇ ಏಳು ಪೊಲೀಸ್ ಠಾಣೆ ಕಟ್ಟಡಗಳು ಪೂರ್ಣಗೊಳ್ಳಲಿವೆ. ಇದಲ್ಲದೆ, 30 ಕೋಟಿ ರೂ. ವೆಚ್ಚದಲ್ಲಿ 12 ಪೊಲೀಸ್ ಠಾಣೆಗಳು, ಒಂದು ಉಪವಿಭಾಗ ಕಚೇರಿ, ಎರಡು ವೃತ್ತ ಕಚೇರಿಗಳು ಮತ್ತು ಒಂದು ಪೊಲೀಸ್ ಔಟ್ ಪೋಸ್ಟ್ ಕಟ್ಟಡದ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಈ ವರ್ಷ ಬಳ್ಳಾರಿ, ದಾವಣಗೆರೆ, ಮೈಸೂರು ಮತ್ತು ಬೆಂಗಳೂರು ಕೇಂದ್ರ ವಲಯಗಳಲ್ಲಿ ನಾಲ್ಕು ಬಾಂಬ್ ಪತ್ತೆ ಮತ್ತು ವಿಲೇವಾರಿ ದಳಗಳನ್ನು ಸ್ಥಾಪಿಸಲಾಗುವುದು ಎಂದು ಸಿಎಂ ತಿಳಿಸಿದರು.
ಪೊಲೀಸ್ ಸಿಬ್ಬಂದಿಯನ್ನು ಸದೃಢವಾಗಿ ಮತ್ತು ಆರೋಗ್ಯವಾಗಿಡಲು, ಪೊಲೀಸ್ ಸಿಬ್ಬಂದಿಗೆ ವಾರ್ಷಿಕ ವೈಯಕ್ತಿಕ ಆರೋಗ್ಯ ತಪಾಸಣೆಗಾಗಿ ನೀಡಲಾಗುವ ಮೊತ್ತವನ್ನು ಪ್ರಸ್ತುತ ರೂ. 1000 ರಿಂದ ರೂ. 1500 ಕ್ಕೆ ಹೆಚ್ಚಿಸಲಾಗುವುದು. ಬಂದೋಬಸ್ತ್ ಕರ್ತವ್ಯದಲ್ಲಿರುವ ಪೊಲೀಸರು ಮತ್ತು ಸಿಬ್ಬಂದಿಗೆ ನೀಡಲಾಗುವ ಆಹಾರ ಭತ್ಯೆಯನ್ನು ರೂ. 200 ರಿಂದ 300 ರೂ. ಗೆ ಹೆಚ್ಚಿಸಲಾಗುವುದು ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ 6 ಜನ ಭೂಗತ ನಕ್ಸಲರು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಸಮಿತಿಯ ಮುಂದೆ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ವಿಸರ್ಜನೆ ಮಾಡಲಾಗುತ್ತಿದೆ. ಶರಣಾಗಿರುವ ನಕ್ಸಲರನ್ನು ಮುಖ್ಯವಾಹಿನಿಗೆ ಸೇರ್ಪಡೆಗೊಳಿಸಲು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು 10 ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಲಾಗುವುದು ಎಂದು ಸಿಎಂ ತಿಳಿಸಿದರು.