ಕೊಪ್ಪಳ
ಕೊಪ್ಪಳ ಜಿಲ್ಲೆಗೆ ಪ್ರತಿನಿತ್ಯ ದೇಶ-ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಪ್ರವಾಸಿಗರ ಜೀವದ ಜೊತೆ ಸ್ಥಳೀಯ ರೆಸಾರ್ಟ್ ಮತ್ತು ಹೋಮ್ ಸ್ಟೇ ಮಾಲೀಕರು ಚೆಲ್ಲಾಟವಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರೆಸಾರ್ಟ್ ಮತ್ತು ಹೋಂ ಸ್ಟೇ ಮಾಲೀಕರು ಹೆಚ್ಚಿನ ಹಣ ಪಡೆದು, ಪ್ರವಾಸಿಗರನ್ನು ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದು, ಅನೇಕರ ಜೀವವನ್ನು ಬಲಿ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಾರ್ಚ್ 6 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿಯಿರುವ ತುಂಗಭದ್ರಾ ಎಡದಂಡೆ ಕಾಲುವೆ ಬಳಿ ದೇಶವೆ ಬೆಚ್ಚಿಬೀಳಿಸುವ ಘಟನೆ ನಡೆದಿತ್ತು. ರಾತ್ರಿ 11 ಗಂಟೆ ಸಮಯದಲ್ಲಿ ಕಾಲುವೆ ಬಳಿ ಗಿಟಾರ್ ಬಾರಿಸುತ್ತಾ, ನಕ್ಷತ್ರಗಳನ್ನು ನೋಡಿ ಆನಂದದಿಂದ ಸಮಯ ಕಳೆಯುತ್ತಿದ್ದ ದೇಶ, ವಿದೇಶದ ಪ್ರವಾಸಿಗರು ಮತ್ತು ಹೋಮ್ ಸ್ಟೇ ಮಾಲೀಕೆ ಮೇಲೆ ದುಷ್ಕರ್ಮಿಗಳು ಅಟ್ಟಹಾಸ ಮೆರದಿದ್ದರು.
ಪುರುಷ ಪ್ರವಾಸಿಗರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ, ನಂತರ ತುಂಬಿ ಹರಿಯುತ್ತಿದ್ದ ಕಾಲುವೆಗೆ ದೂಡಿದ್ದರು, ಇಸ್ರೇಲ್ ಮಹಿಳಾ ಪ್ರವಾಸಿ ಮೇಲೆ ಮತ್ತು ಸ್ಥಳೀಯ ಹೋಮ್ ಸ್ಟೇ ಮಾಲೀಕಿ ಮೇಲೆ ದುಷ್ಕರ್ಮಿಗಳು ಗ್ಯಾಂಗ್ ರೇಪ್ ಮಾಡಿದ್ದರು. ರಾಜ್ಯವೇ ತಲೆ ತಗ್ಗಿಸುವಂತಹ ಈ ಘಟನೆ ದೇಶಾದ್ಯಂತ ಚರ್ಚೆಯಾಗುತ್ತಿದೆ. ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ಬಳಿಕ ಎಚ್ಚತ್ತ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆ ಸೋಮವಾರ (ಮಾ.10) ರೆಸಾರ್ಟ್ ಮತ್ತು ಹೋಮ್ ಸ್ಟೇ ಮಾಲೀಕರು ಸಭೆ ನಡೆಸಿದೆ. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಅರಸಿದ್ದಿ, “ಪ್ರವಾಸಿಗರ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನವಿರಲಿ. ಅನೈತಿಕ, ಅಕ್ರಮ ಚಟುವಟಿಕೆಗಳನ್ನು ನಡೆಯಬಾರದು. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಿ ಎಂದು ರೆಸಾರ್ಟ್ ಮತ್ತು ಹೋಮ್ ಸ್ಟೇ ಮಾಲೀಕರಿಗೆ ಖಡಕ್ ಸೂಚನೆ ನೀಡಿದರು.