ಬೆಂಗಳೂರು:
ನಟಿ ರನ್ಯಾ ರಾವ್‌ಗೆ ಸೇರಿದ ಸಂಸ್ಥೆಗೆ ಭೂಮಿ ಹಂಚಿಕೆಯಲ್ಲಿ ಯಾವುದೇ ಲೋಪವಾಗಿಲ್ಲ. ಅದಕ್ಕಾಗಿಯೇ ಪ್ರತ್ಯೇಕ ಸಮಿತಿ ಇದ್ದು, ಆ ಸಮಿತಿಯಲ್ಲೇ ಆದ ನಿರ್ಧಾರದಂತೆ ಹಂಚಿಕೆಯಾಗಿದೆ ಎಂದು ಕೈಗಾರಿಕೆ ಇಲಾಖೆ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರಗೇಶ ನಿರಾಣಿ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುರುಗೇಶ್ ನಿರಾಣಿ, ರನ್ಯಾ ರಾವ್ ಎಂಬ ಉದ್ಯಮಿ 2022ರಲ್ಲಿ 12 ಎಕರೆ ಭೂಮಿ ಬೇಕೆಂದು ಅರ್ಜಿ ಕೊಟ್ಟಿದ್ದರು. 2023ರ ಜನವರಿಯಲ್ಲಿ ಅದು ಕ್ಲಿಯರ್ ಆಗಿದೆ. ಇದರಲ್ಲಿ ಕೈಗಾರಿಕಾ ಸಚಿವರದ್ದಾಗಲಿ, ನಮ್ಮ ಹಿರಿಯ ಅಧಿಕಾರಿಗಳದ್ದಾಗಲಿ ಯಾವುದೇ ರೀತಿಯ ಕಾನೂನು ಲೋಪದೋಷಗಳಾಗಿಲ್ಲ.
ಅವರ ಪರವಾಗಿ ಯಾವುದೇ ನಿರ್ಧಾರ ಮಾಡಿಲ್ಲ. ಈ ಬಗ್ಗೆ ಯಾವುದೇ ರೀತಿಯ ಅನುಮಾನಗಳಿದ್ದರೆ ನನ್ನನ್ನು ನೇರವಾಗಿ ಸಂಪರ್ಕ ಮಾಡಬಹುದು ಎಂದರು. ನಾನು ಕೈಗಾರಿಕಾ ಸಚಿವನಾಗಿದ್ದ ಅವಧಿಯಲ್ಲಿ ಕಾನೂನು ಪ್ರಕಾರ, ಜಮೀನು ಮಂಜೂರು ಮಾಡಲಾಗಿತ್ತು. 2022ರಲ್ಲಿ 12 ಎಕರೆ ಜಮೀನಿಗಾಗಿ ಮನವಿ ಸಲ್ಲಿಸಿದ್ದರು.
ತುಮಕೂರು ಜಿಲ್ಲೆ ಶಿರಾ ಕೈಗಾರಿಕಾ ಪ್ರದೇಶದಲ್ಲಿನ ಜಮೀನಿನಲ್ಲಿ 138 ಕೋಟಿ ರು. ವೆಚ್ಚದ ಕಬ್ಬಿಣದ ಟಿಎಂಟಿ ಬಾರ್ ಮತ್ತು ಕಬ್ಬಿಣ ಉತ್ಪನ್ನ ಉತ್ಪಾದಿಸುವ ಕಾರ್ಖಾನೆ ಆರಂಭಿಸಲಾಗುವುದು. 160 ಜನರಿಗೆ ಉದ್ಯೋಗ ಸಿಗಲಿದೆಯೆಂದು ತಿಳಿಸಿದ್ದರು. 30 ಅಧಿಕಾರಿಗಳ ತಂಡವು ಸಾಧಕ–ಬಾಧಕ ಅಂಶಗಳನ್ನು ಚರ್ಚಿಸಿ, ಜಮೀನು ಮಂಜೂರು ಮಾಡಿತ್ತು ಎಂದು ಅವರು ತಿಳಿಸಿದ್ದಾರೆ.
ಚಿತ್ರನಟಿ ರನ್ಯಾ ರಾವ್ ಅಕ್ರಮ ಚಿನ್ನ ಸಾಗಣೆ ಮಾಡಿರುವ ಜಾಲದಲ್ಲಿರುವವರ ಪತ್ತೆಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ. ಜತೆಗೆ ನಮ್ಮ ಅವಧಿಯಲ್ಲಿ ರನ್ಯಾರಾವ್ ನಿರ್ದೇಶಕಿಯಾದ ಕಂಪೆನಿಗೆ ಜಮೀನು ನೀಡಿರುವುದು ನನ್ನ ಹಂತದವರೆಗೂ ಬಂದಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಅವರಿಗೆ ಜಮೀನು ಹಂಚಿಕೆ ಮಾಡಿದ ಮೇಲೆ ಹಣ ಪಾವತಿಸುವಂತೆ ನೊಟೀಸ್ ನೀಡಲಾಗಿತ್ತು. ಅವರು ಹಣ ಪಾವತಿಸದ ಕಾರಣ ಭೂಮಿ ಹಂಚಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.