ಕಲಬುರಗಿ:
ಪಂಚಮಸಾಲಿಗರಿಗೆ ೨ಎ ಮೀಸಲಾತಿ ಮತ್ತು ಲಿಂಗಾಯತರಿಗೆ ಓಬಿಸಿ ಮೀಸಲಾತಿ ಹೋರಾಟ ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ರಾಜ್ಯ ಸರ್ಕಾರದ ದೌರ್ಜನ್ಯ ಖಂಡಿಸಿ ರಾಜ್ಯಾದ್ಯಂತ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದ್ದು, ಈ ಅಭಿಯಾನ ಕಲ್ಯಾಣ ನಾಡಿನ ಕ್ರಾಂತಿ ಭೂಮಿಯಾಗಿರುವ ಬಸವಕಲ್ಯಾಣದಿಂದ ಏ. 26ರಂದು ಚಾಲನೆ ನೀಡಲಾಗುವುದು ಎಂದು ಹೋರಾಟದ ರೂವಾರಿ, ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮಿ ಘೋಷಣೆ ಮಾಡಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು 8ನೇ ಹೋರಾಟವಾಗಿದ್ದು, ಈ ಹೋರಾಟವನ್ನು ಅಭಿಯಾನದ ಮೂಲಕ ನಡೆಸಲಾಗುತ್ತಿದ್ದು, 26ರಂದು ಬಸವಕಲ್ಯಾಣದಲ್ಲಿ ನಡೆಯುವ ಈ ಪ್ರತಿಜ್ಞಾ ಅಭಿಯಾನಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಚಾಲನೆ ನೀಡಲಿದ್ದಾರೆ ಎಂದರು.
ಏ. 26ರಂದು ಚಾಲನೆಗೊಂಡ ಈ ಅಭಿಯಾನ ರಾಜ್ಯದ ೨೨೪ ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಗೂ ತಲುಪಲಿದೆ. ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಂವಾದ ಮಾಡಿ, ಜಾಗೃತಿ ಮೂಡಿಸಲಾಗುವುದು. ತಾಲ್ಲೂಕು ಕೇಂದ್ರಗಳಲ್ಲೂ ಸಭೆ ನಡೆಸಿ ಜನರ ಸಲಹೆ ಸೂಚನೆಗಳನ್ನು ಕ್ರೋಡೀಕರಿಸಿ ಮುಂದಿನ ಹೋರಾಟ ನಿರ್ಧರಿಸಲಾಗುವುದು ಎಂದರು.
ಏ. ೨೬ಕ್ಕಿಂತ ಮುಂಚೆ ಅಂದರೆ ಏ. ೧೬ ರಿಂದ ೨೬ರವರೆಗೆ ಬಸವಕಲ್ಯಾಣ ತಾಲೂಕಿನ ಪ್ರತಿ ಹಳ್ಳಿಯಲ್ಲೂ ಈ ಅಭಿಯಾನ ನಡೆಯಲಿದೆ. ೨೬ಕ್ಕೆ ರಾಜ್ಯಾದ್ಯಂತ ಈ ಅಭಿಯಾನಕ್ಕೆ ಬಸವಕಲ್ಯಾಣದಿಂದ ಚಾಲನೆ ನೀಡಲಾಗುವುದು ಎಂದರು.ಕಳೆದ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ಪಂಚಮಸಾಲಿ ಪ್ರತಿಭಟನಾಕಾರರ ಮೇಲೆ ಪೊಲೀಸರ ದೌರ್ಜನ್ಯದ ತಮ್ಮ ದೀರ್ಘಕಾಲದ ಹೋರಾಟವನ್ನು ಅಭಿಯಾನದ ಮೂಲಕ ಮತ್ತಷ್ಟು ತೀವ್ರಗೊಳಿಸುವುದಾಗಿ ಹೇಳಿದ ಅವರು, ಲಾಠಿ ಪ್ರಹಾರವಾದ ಬಳಿಕ ನಾವು ಮೌನವಾಗಿಲ್ಲ, ಬೆಳಗಾವಿನಲ್ಲಿ ಗಾಯಗೊಂಡ ಸಮಾಜದ ಜನರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದೇವೆ.
ಪ್ರತಿಜ್ಞಾ ಕ್ರಾಂತಿ ಅಭಿಯಾನ ಮೂಲಕ ಸಮಾಜದ ಜನರ ಪರಿವರ್ತನೆ ಮಾಡುತ್ತೇವೆ. ನಮ್ಮ ಬೇಡಿಕೆ ಈಡೇರಿಸುವರೆಗೂ ನಮ್ಮ ಹೋರಾಟ ವಿಭಿನ್ನವಾಗಿರುತ್ತದೆ ಎಂದರು.ಪ್ರತಿ ವಿಧಾನಸಭೆ ಕ್ಷೇತ್ರದ ಪಂಚಮಸಾಲಿ ಸಮಾಜದವರ ಮನೆಗೆ ಭೇಟಿ ನೀಡುವುದು. ಸರ್ಕಾರಗಳಿಂದಾದ ದೌರ್ಜನ್ಯ, ಮಾರಣಾಂತಿಕ ಹಲ್ಲೆ ವಿಷಯ ಜನರಿಗೆ ತಿಳಿಸುವುದು. ಜನರ ಅಭಿಪ್ರಾಯ ಕ್ರೋಢೀಕರಣ ಮಾಡುವುದು. ನಮಗೆ ಮೀಸಲಾತಿ ನೀಡದವರಿಗೆ ಯಾವ ರೀತಿ ಅಸಹಕಾರ ಕೊಡಬೇಕು. ಗೆದ್ದು ನಮಗೆ ಮೀಸಲಾತಿ ಕೊಡುವವರಿಗೆ ಯಾವ ರೀತಿ ಸಹಕಾರ ಕೊಡಬೇಕು. ಪ್ರತಿ ಹಳ್ಳಿಯಲ್ಲೂ ಪ್ರತಿಜ್ಞಾ ಕ್ರಾಂತಿ ಅಭಿಯಾನ ಹೆಸರಲ್ಲಿ ಹೋರಾಟ ಮಾಡುತ್ತೇವೆ. ರಾಜ್ಯದ ೨೨೪ ವಿಧಾನಸಭೆ ಕ್ಷೇತ್ರಕ್ಕೂ ಭೇಟಿ ನೀಡಲಿದ್ದೇವೆ ಎಂದರು.
ನಮ್ಮ ಹೋರಾಟದ ಮೂಲಕವೇ ಹಲವಾರು ಜನ ಶಾಸಕರು, ಸಚಿವರಾಗಿದ್ದಾರೆ. ಅದರ ಋಣ ತೀರಿಸಲು ಅವರು ಮುಂದೆ ಬರುತ್ತಿಲ್ಲ. ವೀರಶೈವ ಸಮಾಜದಿಂದಲೇ ಶಾಸಕರಾದವರೂ ೫೪ ಜನ ಇದ್ದಾರೆ. ಅದರಲ್ಲಿ ಕೆಲವರನ್ನು ಬಿಟ್ಟರೆ ಉಳಿದೆಲ್ಲರೂ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಸೋಮಶೇಖರ ಮೂಲಗೆ, ಆನಂದಗೌಡ ಪಾಟೀಲ್, ಮಲ್ಲಣಗೌಡ ಪಾಟೀಲ್ ಇತರರಿದ್ದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸೇರಿ ಇತರ ಸಿಎಂಗಳು ನಮ್ಮೆ ಬೇಡಿಕೆ ಈಡೇರಿಸಿಲ್ಲ ನಿಜ ಆದರೆ, ಹೋರಾಟ ಮಾಡುತ್ತಿರುವ ಅಮಾಯಕರ ಮೇಲೆ ಹಲ್ಲೆ ನಡೆಸಿಲ್ಲ. ಆದರೆ, ಕಾಂಗ್ರೆಸ್‌ನ ಸಿಎಂ ಸಿದ್ದರಾಮಯ್ಯನವರು ಬೆಳಗಾವಿಯಲ್ಲಿ ಪಂಚಮಸಾಲಿ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿ ಕ್ರೌರ್ಯತೆ ಮೆರೆದಿದ್ದಾರೆ. ಜೊತೆಗೆ ಮೀಸಲಾತಿ ನೀಡಲು ಬರುವುದಿಲ್ಲವೆಂದು ಹೇಳಿದ್ದಾರೆ, ನಾವು ಸ್ವಾಭಿಮಾನಿಗಳಾಗಿರುವುದರಿಂದ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಇರುವರೆಗೂ ನಾವು ಅವರ ಬಳಿ ಹೋಗಿ ಬೇಡಿಕೆ ಈಡೇರಿಸಲು ಮನವಿ ಮಾಡುವುದಿಲ್ಲ. ಮುಂದಿನ ದಿನಗಳಲ್ಲಿ ಯಾರು ಸಿಎಂ ಆಗಿ ಬರುತ್ತಾರೆ ಅವರಿಗೆ ನಾವು ಭೇಟಿಯಾಗಿ ಮನವರಿಕೆ ಮಾಡಿಕೊಡುತ್ತೇವೆ ಎಂದು ಜಯಮೃತ್ಯುಂಜಯ ಸ್ವಾಮಿ ಹೇಳುವ ಮೂಲಕ ಸಿಎಂ ವಿರುದ್ಧ ಹರಿಹಾಯ್ದರು.