ಇದೇ ವೇಳೆ ಕಳೆದ ಹತ್ತು ವರ್ಷಗಳಲ್ಲಿ ರೈಲ್ವೆ ಕ್ಷೇತ್ರದಲ್ಲಿ ಆಗಿರುವ ಗಮನಾರ್ಹ ಪ್ರಗತಿಯನ್ನು ದೇವೇಗೌಡ ಅವರು ಮುಕ್ತಕಂಠದಿಂದ ಶ್ಲಾಘಿಸಿದರು.
ತಮ್ಮ ಅನುಭವದಿಂದ ಹೇಳುತ್ತಿದ್ದೇನೆ, ಕಳೆದ 75 ವರ್ಷಗಳ ಅಭಿವೃದ್ಧಿಯನ್ನು ಪರಿಶೀಲನೆ ಮಾಡಿ ನೋಡಿದಾಗ 10 ವರ್ಷಗಳ ಅಭಿವೃದ್ಧಿ ಕಣ್ಣಿಗೆ ಕಟ್ಟುವಂತೆ ಕಾಣುತ್ತದೆ. ಈ ಹಿಂದೆ ಅನುಮೋದನೆ ಪಡೆಯಲು ವರ್ಷಗಳೇ ಹಿಡಿಯುತ್ತಿದ್ದ ರೈಲ್ವೆ ಯೋಜನೆಗಳು ಈಗ ಅಭೂತಪೂರ್ವ ವೇಗದಲ್ಲಿ ಕಾರ್ಯಗತಗೊಳ್ಳುತ್ತಿವೆ ಎಂದರು,
ಬಳಿಕ ತಮ್ಮ ಅಧಿಕಾರಾವಧಿಯಲ್ಲಿ ರೈಲ್ವೆ ಅನುದಾನ ಹಂಚಿಕೆ, ಯೋಜನೆಗಳ ಜಾರಿ ಇತ್ಯಾದಿ ಅಂಶಗಳನ್ನು ನೆನಪು ಮಾಡಿಕೊಂಡರು, ಅಲ್ಲದೆ, ಆಗ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಳಂಬ ಮತ್ತು ನಿಧಾನಗತಿಯ ಯೋಜನಾ ಅನುಷ್ಠಾನ ಪರಿಸ್ಥಿತಿಯನ್ನೂ ಸ್ಮರಿಸಿದರು.
ಇದಕ್ಕೆ ವ್ಯತಿರಿಕ್ತವಾಗಿ, ದೇಶಾದ್ಯಂತ ರೈಲ್ವೆ ಅಭಿವೃದ್ಧಿಯನ್ನು ಪರಿವರ್ತಿಸಿರುವ ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರ ಸ್ಪಷ್ಟ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ ಎಂದು ಹೇಳಿದರು.
ರೈಲ್ವೆ ವಿಸ್ತರಣೆ ಮತ್ತು ಸುರಕ್ಷತೆಯಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬಂದಿವೆ. ಈ ಹಿಂದೆ, ಆಧುನಿಕ ಮೂಲಸೌಕರ್ಯಗಳ ಕೊರತೆಯಿಂದಾಗಿ ರೈಲ್ವೆ ಅಪಘಾತಗಳು ಆಗಾಗ್ಗೆ ಸಂಭವಿಸುತ್ತಿದ್ದವು. ಆದರೆ, ಇಂದು ಸುರಕ್ಷತಾ ಮಾನದಂಡಗಳು ಗಮನಾರ್ಹವಾಗಿ ಸುಧಾರಿಸಿವೆ. ಇದಕ್ಕೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಯತ್ನಗಳು ಕಾರಣ. ಅಶ್ವಿನಿ ವೈಷ್ಣವ್ ಅವರು, ರಾಷ್ಟ್ರದ ಪ್ರಗತಿಗೆ ಬದ್ಧರಾಗಿರುವ ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮಿ ನಾಯಕ ಎಂದು ಬಣ್ಣಿಸಿದರು.