ಬೆಂಗಳೂರು:
ದುಬೈಯಿಂದ ದೇಶದೊಳಕ್ಕೆ ಕೋಟ್ಯಂತರ ರೂ. ಮೊತ್ತದ ಚಿನ್ನ ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ ಎಂಟ್ರಿ ನೀಡಿದೆ. ಇಸಿಐಆರ್ ದಾಖಲಿಸಿಕೊಂಡಿರುವ ಇಡಿ ಅಧಿಕಾರಿಗಳು ಬೆಂಗಳೂರಿನ ಹಲವೆಡೆ ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆ ಪರಿಶೀಲಿಸಿದ್ದಾರೆ. ಇದರ ಜೊತೆಗೆ ಸಿಬಿಐ ಕೂಡ ಈ ಪ್ರಕರಣದಲ್ಲಿ ಆಸಕ್ತಿ ವಹಿಸಿದ್ದು, ನಟಿಯ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದೆ.
ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಾಣಿಕೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ಹಿಂದೆ ರನ್ಯಾ ರಾವ್ ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಲಾಗಿತ್ತು. ನಂತರ ಸಿಐಡಿಗೆ ನೀಡಿದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿದ್ದು, ಎಸಿಎಸ್ ಗೌರವ್ ಗುಪ್ತ ನೇತೃತ್ವದಲ್ಲಿ ಪ್ರತ್ಯೇಕ ತನಿಖೆಗೆ ಆದೇಶಿಸಿದೆ. ಈ ನಡುವೆ ಇಸಿಐಆರ್ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಬೆಂಗಳೂರಿನ ಹಲವೆಡೆ ದಾಳಿ ನಡೆಸಿ, ತನಿಖೆ ಮಾಡುತ್ತಿದ್ದಾರೆ.
ಡಿಆರ್‌ಐ ಅಧಿಕಾರಿಗಳ ದೂರು ಆಧರಿಸಿ ಸಿಬಿಐ ಪ್ರಧಾನ ಕಚೇರಿಯಲ್ಲಿ ಎಫ್‌ಐಆರ್ ದಾಖಲಿಸಿದೆ. ದೇಶದೊಳಕ್ಕೆ ಅಕ್ರಮವಾಗಿ ಚಿನ್ನ ಸಾಗಣೆ ಮಾಡಿದ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರು ಮತ್ತು ಮುಂಬೈಗೆ ಅಕ್ರಮವಾಗಿ ಚಿನ್ನ ಸಾಗಾಟ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ.
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯ ಆದೇಶವನ್ನು ಮಾರ್ಚ್ 14ಕ್ಕೆ ಪ್ರಕಟಿಸುವುದಾಗಿ ಆರ್ಥಿಕ ಅಪರಾಧಗಳ ಕುರಿತಾದ ವಿಶೇಷ ನ್ಯಾಯಾಲಯವು ಬುಧವಾರ ಆದೇಶಿಸಿದೆ. ನಟಿ ರನ್ಯಾ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಶೇಷ ನ್ಯಾಯಾಧೀಶರಾದ ವಿಶ್ವನಾಥ್ ಗೌಡರ್ ಅವರು ನಡೆಸಿದರು.
ರನ್ಯಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಕಿರಣ್ ಜವಳಿ ಅವರು, ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 102 ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಅನುಪಾಲಿಸಿಲ್ಲ. ಬಂಧನ ಮೆಮೊವನ್ನು ನೀಡಲಾಗಿಲ್ಲ. ಆಕೆ ನಿದ್ರಿಸುವುದಕ್ಕೆ ಅವಕಾಶ ನೀಡದೇ ಆಕೆಯ ಹೇಳಿಕೆ ದಾಖಲಿಸಿಕೊಂಡಿರುವುದು ಸ್ವಯಂ ಹೇಳಿಕೆಯಾಗುವುದಿಲ್ಲ. ರಿಮ್ಯಾಂಡ್ ಅರ್ಜಿಯಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ. ಆದರೆ, ಉಳಿದ ಇಬ್ಬರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆಕ್ಷೇಪಿಸಿದರು.