ಬೆಂಗಳೂರು:
ನಟಿ ರನ್ಯಾ ರಾವ್ ಭಾಗಿಯಾಗಿದ್ದಾರೆ ಎನ್ನಲಾದ ಚಿನ್ನ ಕಳ್ಳಸಾಗಣೆ ಪ್ರಕರಣದ ಎರಡನೇ ಆರೋಪಿಯಾಗಿರುವ ತರುಣ್ ರಾಜು ಅವರನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಶುಕ್ರವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ತರುಣ್ ರಾಜು ಅವರ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಕಸ್ಟಡಿ ಅಂತ್ಯಗೊಂಡ ನಂತರ ನ್ಯಾಯಾಧೀಶ ವಿಶ್ವನಾಥ್ ಸಿ. ಗೌಡರ್ ಈ ಆದೇಶ ಹೊರಡಿಸಿದ್ದಾರೆ. ಎರಡನೇ ಆರೋಪಿಯನ್ನು ಈಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬಹುದು ಎಂದು ಡಿಆರ್‌ಐ ನ್ಯಾಯಾಲಯಕ್ಕೆ ತಿಳಿಸಿದೆ.
ಗುರುವಾರ, ಜಾರಿ ನಿರ್ದೇಶನಾಲಯ (E.D) ಬೆಂಗಳೂರಿನ ಕುಮಾರ ಪಾರ್ಕ್ ಪೂರ್ವ ರಸ್ತೆಯಲ್ಲಿರುವ ರನ್ಯಾ ರಾವ್ ಅವರ ಆಪ್ತ ಸ್ನೇಹಿತ ಮತ್ತು ಸ್ಟಾರ್ ಹೋಟೆಲ್ ಮಾಲೀಕರ ಮೊಮ್ಮಗನಾದ ತರುಣ್ ರಾಜು ಅವರ ನಿವಾಸದ ಮೇಲೆ ದಾಳಿ ನಡೆಸಿತು.
ಚಿನ್ನ ಕಳ್ಳಸಾಗಣೆ ಪ್ರಕರಣದ ಮೊದಲ ಆರೋಪಿಯಾಗಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯ ಬಗ್ಗೆಯೂ ನ್ಯಾಯಾಲಯ ಶುಕ್ರವಾರ ತೀರ್ಪು ನೀಡುವ ನಿರೀಕ್ಷೆಯಿದೆ. ಸದ್ಯ ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ. ರನ್ಯಾ ರಾವ್‌ಗೆ ಜಾಮೀನು ದೊರೆತರೂ, ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಡಿಆರ್‌ಐ ಜೊತೆಗೆ ತನಿಖೆ ನಡೆಸುತ್ತಿರುವ ಇ.ಡಿ ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಹೆಚ್ಚಿನ ತನಿಖೆಗಾಗಿ ಅವರನ್ನು ಕಸ್ಟಡಿಗೆ ಕೋರುವ ಸಾಧ್ಯತೆಯಿದೆ ಎಂದು ಮೂಲಗಳು ಸೂಚಿಸಿವೆ.