ಬೆಂಗಳೂರು:
ಬೆಂಗಳೂರಿನಲ್ಲಿ ಎಷ್ಟೇ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ ಕೆಲವೊಬ್ಬರು ತಪ್ಪುಗಳನ್ನು ಮುಂದುವರಿಸಿದ್ದು. ಇನ್ಮುಂದೆ ಈ ರೀತಿಯ ತಪ್ಪುಗಳನ್ನು ಮಾಡಿದರೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಅಲ್ಲದೆ ನಗರದ ಸೌಂದರ್ಯವನ್ನು ಹಾಳು ಮಾಡುವವರ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಸೂಚನೆ ನೀಡಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್, ಬ್ಯಾನರ್ಗಳನ್ನು ತೆರವುಗೊಳಿಸಿ ಎಫ್.ಐ.ಆರ್ ದಾಖಲಿಸುವಂತೆ ಬಿಬಿಎಂಪಿಯ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ವಿವಿಧ ವಿಷಯಗಳ ಕುರಿತು ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದ್ದಾರೆ. ನಗರದಲ್ಲಿ ಅನಧಿಕೃತವಾಗಿ ಅಳವಡಿಸುವ ಫ್ಲೆಕ್ಸ್, ಬ್ಯಾನರ್ಗಳ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ಕಡೆ ತೆರವುಗೊಳಿಸಬೇಕು. ಅಲ್ಲದೆ ಫ್ಲೆಕ್ಸ್, ಬ್ಯಾನರ್ ಅಳವಡಿಸಿರುವವರಿಗೆ ದುಪ್ಪಟ್ಟು ದಂಡ ವಿಧಿಸುವ ಜೊತೆಗೆ ಎಫ್.ಐ.ಆರ್ ದಾಖಲಿಸಲು ಸೂಚನೆ ನೀಡಲಾಗಿದೆ.
ನಗರದಲ್ಲಿ ಯಾವುದೇ ಅನಧಿಕೃತ ಜಾಹೀರಾತುಗಳನ್ನು ಅಳವಡಿಸದಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಈ ಸಂಬಂಧ ಎಲ್ಲಾ ಅಧಿಕಾರಿಗಳು ತಮ್ಮ ವಲಯಗಳಲ್ಲಿ ಪರಿಶೀಲನೆ ನಡೆಸಿ ಅನಧಿಕೃತ ಫ್ಲೆಕ್ಸ್ಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸಲು ಸೂಚಿಸಿದ್ದಾರೆ. ಬಳ್ಳಾರಿ ರಸ್ತೆಯುದ್ದಕ್ಕೂ ಫ್ಲೆಕ್ಸ್, ಬ್ಯಾನರ್ಗಳನ್ನು ಅಳವಡಿಸಲಾಗಿದೆ.
ಪಶ್ಚಿಮ, ಪೂರ್ವ ಹಾಗೂ ಯಲಹಂಕ ವಲಯ ವ್ಯಾಪ್ತಿಯಲ್ಲಿ ಅಧಿಕಾರಿಗಳು ಪರಿಶೀಲಿಸಿ ತೆರವು ಕಾರ್ಯಾಚರಣೆಯನ್ನು ನಡೆಸಬೇಕು. ಫ್ಲೆಕ್ಸ್ ತೆರವುಗೊಳಿಸಲು ಖರ್ಚಾಗುವ ಹಣವನ್ನು ಫ್ಲೆಕ್ಸ್ಗಳನ್ನು ಅಳವಡಿಸಿರುವವರಿಂದಲೇ ವಸೂಲಿ ಮಾಡಲು ಸೂಚನೆ ನೀಡಲಾಗಿದೆ. 12 ಎಫ್.ಐ.ಆರ್ ದಾಖಲು ಹಾಗೂ 12 ಲಕ್ಷ ರೂ. ದಂಡ ಸಂಗ್ರಹ: ನಗರದ ಪೂರ್ವ, ಪಶ್ಚಿಮ ಹಾಗೂ ಯಲಹಂಕ ಸೇರಿದಂತೆ ಮೂರೂ ವಲಯಗಳು ಸೇರಿದಂತೆ ಭಾನುವಾರದಿಂದ 1,350 ಕ್ಕೂ ಹೆಚ್ಚು ಫ್ಲೆಕ್ಸ್, ಬ್ಯಾನರ್ಗಳನ್ನು ತೆರವುಗೊಳಿಸಲಾಗಿದೆ. 600ಕ್ಕೂ ಹೆಚ್ಚು ಪಕ್ಷದ ಧ್ವಜಗಳನ್ನು ತೆರವುಗೊಳಿಸಲಾಗಿದೆ. ಇದುವೆರೆಗ 12 ಎಫ್.ಐ.ಆರ್ ಗಳನ್ನು ದಾಖಲಿಸಲಾಗಿದ್ದು, 12 ಲಕ್ಷ ರೂ. ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಮಸ್ಯೆ ಬಗೆಹರಿಸಿ: ನಗರದಲ್ಲಿ ಪ್ರಸ್ತುತ ಗುರುತಿಸಿರುವಂತಹ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಯಾವುದೇ ಸಮಸ್ಯೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕಾಮಗಾರಿ ನಡೆಯುತ್ತಿದ್ದರೆ ಮಳೆಗಾಲ ಪ್ರಾರಂಭವಾಗುವ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ರಾಜಕಾಲುವೆಗಳಲ್ಲಿ ಕಸ ಬಿಸಾಡದಂತೆ ಕ್ರಮ: ಬೆಂಗಳೂರಿನಲ್ಲಿ ರಾಜಕಾಲುವೆ ಪಕ್ಕದಲ್ಲಿ ಬರುವ ಮನೆಗಳು ಹಾಗೂ ಕೊಳಗೇರಿ ಪ್ರದೇಶಗಳಲ್ಲಿ ಕಸ ಸಂಗ್ರಹಿಸಬೇಕು. ರಾಜಕಾಲುವೆಗಳಲ್ಲಿ ತ್ಯಾಜ್ಯ ಬಿಸಾಡದಂತೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಅಲ್ಲದೆ ರಾಜಕಾಲುವೆಗಳಲ್ಲಿ ಕಸ ಬಿಸಾಡದಂತೆ ಕ್ರಮ ಕೈಗೊಳ್ಳಬೇಕು. ರಾಜಕಾಲುವೆಗಳಲ್ಲಿ ಕಸ ಬಿಸಾಡುವ ಸ್ಥಳಗಳನ್ನು ಗುರುತಿಸಿ ಮಾರ್ಷಲ್ಗಳನ್ನು ನಿಯೋಜನೆ ಮಾಡಲು ಸೂಚಿಸಿದರು. ಟ್ರ್ಯಾಶ್ ಬ್ಯಾರಿಯರ್ಸ್ ಅಳವಡಿಸಿ: ರಾಜಕಾಲವೆಗಳಲ್ಲಿ ಹೆಚ್ಚು ತ್ಯಾಜ್ಯ ಬರುವ ಸ್ಥಳಗಳನ್ನು ಗುರುತಿಸಿ, ಅಲ್ಲಿ ಟ್ರ್ಯಾಶ್ ಬ್ಯಾರಿಯರ್ಸ್ ಗಳನ್ನು ಅಳವಡಿಸಬೇಕು. ಆ ಬಳಿಕ ಕಾಲಕಾಲಕ್ಕೆ ತ್ಯಾಜ್ಯವನ್ನು ತೆರವುಗೊಳಿಸುತ್ತಿರಲು ಸೂಚನೆ ನೀಡಿದರು. ಇನ್ನು ರಾಜಕಾಲುವೆಗಳಲ್ಲಿ ಹೂಳೆತ್ತುವ ಕಾರ್ಯವನ್ನು ನಿರಂತರವಾಗಿ ಮಾಡಲು ನಿರ್ದೇಶನ ನೀಡಲಾಗಿದೆ.