ಕೋಲ್ಕತ್ತಾ: ಪ್ರವಾಸಿಗರ ಸ್ವರ್ಗ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಮ್ಮೆ ನೆತ್ತರು ಹರಿದೆ. ಏ. 22ರಂದು ಕಾಶ್ಮೀರದ ಪೆಹಲ್ಗಾಮ್‌ನ ಬೈಸರನ್ ವ್ಯಾಲಿಯ ಹುಲ್ಲುಗಾವಲಿನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 26ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಇಡೀ ದೇಶವೇ ಬೆಚ್ಚಿಬಿದ್ದಿದೆ (Pahalgam Attack). ಜತೆಗೆ ಜಗತ್ತಿನ ವಿವಿಧ ದೇಶಗಳು ಈ ಕೃತ್ಯವನ್ನು ಖಂಡಿಸಿವೆ. ಪ್ರವಾಸಿಗರ ಧರ್ಮವನ್ನು ಕೇಳಿ ತಿಳಿದು, ಮುಸ್ಲಿಮರು ಅಲ್ಲ ಎಂದು ಗೊತ್ತಾದ ಬಳಿಕ ಭಯೋತ್ಪಾದಕರು ಅವರ ಬಲಿ ತೆಗೆದುಕೊಂಡಿದ್ದಾರೆ. ಈ ಕೃತ್ಯದಿಂದ ಮನನೊಂದು ಪಶ್ಚಿಮ ಬಂಗಾಳದ ಮುಸ್ಲಿಮ್ ಶಿಕ್ಷಕರೊಬ್ಬರು ಇಸ್ಲಾಂ ಧರ್ಮ ತೊರೆಯುವುದಾಗಿ ಪ್ರಕಟಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿ ಪಶ್ಚಿಮ ಬಂಗಾಳದ ಬದುರಿಯಾದ ಶಾಲಾ ಶಿಕ್ಷಕ ಸಬೀರ್ ಹುಸೇನ್ (Sabir Hussain) ಇಸ್ಲಾಂ ಧರ್ಮವನ್ನು ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹುಸೇನ್ ತಮ್ಮ ಧರ್ಮದ ಗುರುತನ್ನು ತ್ಯಜಿಸಲು ನ್ಯಾಯಾಲಯವನ್ನು ಸಂಪರ್ಕಿಸಲು ಮುಂದಾಗಿದ್ದಾರೆ. ತಾವು ಯಾವುದೇ ಧರ್ಮದಿಂದ ಗುರುತಿಸಲು ಇಷ್ಟಪಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸಬೀರ್ ಹುಸೇನ್ ವಿಜ್ಞಾನ ಶಿಕ್ಷಕರಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಮಂದಿ ಇಸ್ಮಾಂ ಧರ್ಮ ತ್ಯಜಿಸಲಿದ್ದಾರೆ ಭವಿಷ್ಯ ನುಡಿದಿದ್ದಾರೆ.
ಬಿ.ಎನ್.ಅಧಿಕಾರಿ ಅವರ ಎಕ್ಸ್ ಪೋಸ್ಟ್ ಇಲ್ಲಿದೆ:
#PahalgamMassacre and Aftershocks
Citing deep anguish over the brutal #Pahalgam terror attack, a schoolteacher from Baduria in West Bengal, Sabir Hussain, has announced that he is renouncing Islam.
Hussain said he wishes to live free from any religious identity, describing his… pic.twitter.com/zhOhW4q7Qw
— BN Adhikari (@AdhikariBN) April 26, 2025
ಈ ಸುದ್ದಿಯನ್ನೂ ಓದಿ: Pahalgam Terror Attack: ಸಿಂಧೂ ನದಿ ನಮ್ಮದು, ನೀರು ಬಿಡದಿದ್ದರೆ ಭಾರತೀಯರ ರಕ್ತ ಹರಿಯುತ್ತದೆ; ನಾಲಗೆ ಹರಿಬಿಟ್ಟ ಪಾಕ್ ರಾಜಕಾರಣಿ ಬಿಲಾವಲ್ ಭುಟ್ಟೋ ಝರ್ದಾರಿ
ಸಬೀರ್ ಹುಸೇನ್ ಹೇಳಿದ್ದೇನು?
ನ್ಯೂಸ್18 ಸುದ್ದಿಸಂಸ್ಥೆ ಜತೆ ಮಾತನಾಡಿದ ಸಬೀರ್ ಹುಸೇನ್, ʼʼನಾನು ಯಾವುದೇ ಧರ್ಮಕ್ಕೆ ಅಗೌರವ ತೋರುವುದಿಲ್ಲ. ಇದು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ. ಕಾಶ್ಮೀರದಲ್ಲಿ ಧರ್ಮವನ್ನು ಹಿಂಸಾಚಾರದ ಮಾರ್ಗವನ್ನಾಗಿ ಪದೇ ಪದೆ ಬಳಸಲಾಗುತ್ತದೆ ಎಂಬುದನ್ನು ನಾನು ನೋಡಿದ್ದೇನೆ. ನನಗೆ ಇನ್ನು ಮುಂದೆ ಇದನ್ನು ಸಹಿಸಲು ಸಾಧ್ಯವಿಲ್ಲ. ನಾನು ಕೇವಲ ಮನುಷ್ಯನಾಗಿ ಗುರುತಿಸಲು ಬಯಸುತ್ತೇನೆ. ಅದುಬಿಟ್ಟು ಯಾವುದೇ ಧಾರ್ಮಿಕ ಹಣೆಪಟ್ಟಿಯಿಂದ ಅಲ್ಲ. ಅದಕ್ಕಾಗಿಯೇ ನಾನು ನ್ಯಾಯಾಲಯಕ್ಕೆ ಔಪಚಾರಿಕ ಅರ್ಜಿ ಸಲ್ಲಿಸಲು ಮುಂದಾಗಿದ್ದೇನೆʼʼ ಎಂದು ವಿವರಿಸಿದ್ದಾರೆ.
“ಧರ್ಮದ ಕಾರಣಕ್ಕಾಗಿ ಇತರರನ್ನು ಏಕೆ ಕೊಲ್ಲಬೇಕು? ಪೆಹಲ್ಗಾಮ್ ಘಟನೆ ನನ್ನನ್ನು ತೀವ್ರವಾಗಿ ಘಾಸಿಗೊಳಿಸಿದೆ” ಎಂದು ಅವರು ಹೇಳಿದ್ದಾರೆ.
ಹುಸೇನ್ ಆರಂಭದಲ್ಲಿ ತಮ್ಮ ನಿರ್ಧಾರವನ್ನು ಫೇಸ್‌ಬುಕ್‌ನಲಲಿ ಹಂಚಿಕೊಂಡಿದ್ದರು. ಇದೀಗ ಇಸ್ಲಾಂನಿಂದ ಕಾನೂನುಬದ್ಧವಾಗಿ ದೂರವಿರುವ ಯೋಜನೆಯನ್ನು ಪುನರುಚ್ಚರಿಸಿದ್ದಾರೆ. ಅದಾಗ್ಯೂ ಅವರು ತಮ್ಮ ನಂಬಿಕೆಗಳನ್ನು ಕುಟುಂಬದ ಮೇಲೆ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನನ್ನ ಪತ್ನಿ ಮತ್ತು ಮಕ್ಕಳು ಯಾವುದೇ ನಿರ್ಧಾರ ಕೈಗೊಂಡರೂ ಸ್ವಾಗತಿಸುತ್ತೇನೆ. ಅವರ ಮೇಲೆ ಒತ್ತಡ ಹೇರುವುದಿಲ್ಲ. ಇದು ನನ್ನ ವೈಯಕ್ತಿಕ ನಿರ್ಧಾರ ಮತ್ತು ನಾನು ಇನ್ನು ಮುಂದೆ ಇಸ್ಲಾಂನೊಂದಿಗೆ ಸಂಬಂಧ ಹೊಂದುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಈ ದಿನಗಳಲ್ಲಿ ಎಲ್ಲವೂ ಧರ್ಮದ ಸುತ್ತವೇ ಸುತ್ತುತ್ತಿದೆ. ನಾನು ಬದುಕಲು ಬಯಸುವ ಜಗತ್ತು ಅದಲ್ಲ” ಎಂದು ಹುಸೇನ್ ತಿಳಿಸಿದ್ದಾರೆ. “ಧರ್ಮವು ಜನರನ್ನು ಒಂದುಗೂಡಿಸಬೇಕೇ ಹೊರತು ಅವರನ್ನು ಕೊಲ್ಲಲು ನೆಪವಾಗಬಾರದು” ಎಂದು ಅವರು ಹೇಳಿದ್ದಾರೆ. ಅನೇಕರು ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ.