ನವದೆಹಲಿ: ಆಪರೇಷನ್ ಸಿಂದೂರ (Operation Sindoor) ಕುರಿತು ಮಾಹಿತಿ ನೀಡಲು ಸರ್ಕಾರ ಇಂದು (ಗುರುವಾರ) ಸರ್ವ ಪಕ್ಷ ಸಭೆ ಕರೆದಿದೆ. ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಪಕ್ಷದ ಮುಖಂಡರು ಭಾಗಿಯಾಗಿದ್ದರು. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿ ಹಲವು ನಾಯಕರು ಆಪರೇಷನ್ ಸಿಂದೂರ ಕುರಿತು ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ಪ್ರಧಾನಿ ಮೋದಿ, ಇಂಹತ ಉದ್ವಿಗ್ನ ಪರಿಸ್ಥಿಯಲ್ಲಿ ಸರ್ವಪಕ್ಷಗಳು ಒಗ್ಗಟ್ಟಿನಿಂದು ಇರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅನ್ನು ಪ್ರತಿನಿಧಿಸಿದರೆ, ತೃಣಮೂಲ ಕಾಂಗ್ರೆಸ್‌ನಿಂದ ಸಂದೀಪ್ ಬಂಡೋಪಾಧ್ಯಾಯ ಮತ್ತು ಡಿಎಂಕೆಯ ಟಿ.ಆರ್. ಬಾಲು ಸಭೆಯಲ್ಲಿ ಭಾಗವಹಿಸಿದ್ದರು. ಸಮಾಜವಾದಿ ಪಕ್ಷದ ರಾಮ್ ಗೋಪಾಲ್ ಯಾದವ್, ಎಎಪಿಯ ಸಂಜಯ್ ಸಿಂಗ್, ಶಿವಸೇನೆಯ (ಯುಬಿಟಿ) ಸಂಜಯ್ ರಾವುತ್, ಎನ್‌ಸಿಪಿ (ಎಸ್‌ಪಿ) ಸುಪ್ರಿಯಾ ಸುಳೆ, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಮತ್ತು ಬಿಜೆಡಿಯ ಸಸ್ಮಿತ್ ಪಾತ್ರ ಸೇರಿದಂತೆ ಇತರ ವಿರೋಧ ಪಕ್ಷದ ನಾಯಕರು ಉಪಸ್ಥಿತರಿದ್ದರು.
2019 ರ ಬಾಲಕೋಟ್ ವೈಮಾನಿಕ ದಾಳಿಯ ನಂತರ ಸಾಕ್ಷಿ ನೀಡಿ ಎಂದು ವಿಪಕ್ಷಗಳು ಕೇಳಿದ್ದವು. ಆ ಹೇಳಿಕೆಗೆ ದೇಶದೆಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ಬಾರಿ ವಿರೋಧ ಪಕ್ಷಗಳು ಸರ್ಕಾರ ಬೆಂಬಲ ಸೂಚಿಸುತ್ತೇವೆ ಎಂದು ಹೇಳಿಕೆ ನೀಡಿವೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮಗಳಲ್ಲಿ ರಾಷ್ಟ್ರವಿರೋಧಿ ಪ್ರಚಾರದ ಮೇಲೆ ಕಣ್ಗಾವಲು ತೀವ್ರಗೊಳಿಸುವಂತೆ ಮತ್ತು ತ್ವರಿತ ಕ್ರಮ ಕೈಗೊಳ್ಳುವಂತೆ ಕೇಂದ್ರವು ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಈ ಸುದ್ದಿಯನ್ನೂ ಓದಿ: Operation Sindoor: ಭಾರತ – ಪಾಕಿಸ್ತಾನ ಗಡಿ ರಾಜ್ಯಗಳಲ್ಲಿ ಕಟ್ಟೆಚ್ಚರ; ಪೊಲೀಸರ ರಜೆ ರದ್ದು, ಶಾಲಾ ಕಾಲೇಜಿಗೆ ರಜೆ
ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಎಲ್‌ಒಸಿಯಲ್ಲಿ ಪಾಕಿಸ್ತಾನ ಸೇನೆ ಮತ್ತೆ ಅಪ್ರಚೋದಿತ ದಾಳಿಯನ್ನು ಮುಂದುವರಿಸಿದೆ. ಶೆಲ್ ದಾಳಿಯಲ್ಲಿ ಪೂಂಚ್‌ನಲ್ಲಿ 4 ಮಕ್ಕಳು ಸೇರಿದಂತೆ 15 ನಾಗರಿಕರು ಬಲಿಯಾಗಿದ್ದಾರೆ. 50 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕ್ ಸೇನೆಯ ಗುಂಡಿನ ದಾಳಿಯಲ್ಲಿ ಭಾರತದ ಯೋಧ ಲಾನ್ಸ್ ನಾಯಕ್ ದಿನೇಶ್ ಕುಮಾರ್ ಹುತಾತ್ಮರಾಗಿದ್ದಾರೆ. ಪಂಜಾಬ್, ರಾಜಸ್ಥಾನ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಗಡಿ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.