ಮುಂಬೈ: ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 1,200 ಅಂಕ ಏರಿಕೆಯಾಯಿತು. 82,530ಕ್ಕೆ ಸ್ಥಿರವಾಯಿತು. ನಿಫ್ಟಿ 395 ಅಂಕ ಏರಿಕೆಯಾಗಿ 25,062ಕ್ಕೆ ಸ್ಥಿರವಾಯಿತು (Stock Market). ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ 1.5%ಗೂ ಹೆಚ್ಚು ಏರಿಕೆ ದಾಖಲಿಸಿತು. ಅಮೆರಿಕದ ಜತೆಗೆ ಜೀರೊ-ಟಾರಿಫ್ ಟ್ರೇಡ್ ಡೀಲ್ ನಡೆಯುವ ಸಾಧ್ಯತೆ, ತೈಲ ಮತ್ತು ಬಂಗಾರದ ದರ ಇಳಿಕೆ, ವಿದೇಶಿ ಸಾಂಸ್ಥಿಕ ಹೂಡಿಕೆಯ ಹೆಚ್ಚಳ ಮೊದಲಾದ ಕಾರಣಗಳಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಏರಿಕೆ ದಾಖಲಿಸಿತು. ಹಣದುಬ್ಬರ ಇಳಿದಿರುವುದರಿಂದ ಆರ್ ಬಿಐ ಬಡ್ಡಿ ದರ ಕಡಿತ ಮಾಡಬಹುದು ಎಂಬ ವಿಶ್ವಾಸವೂ ಸೂಚ್ಯಂಕಗಳನ್ನು ಏರಿಸಿತು.
ಹಣಕಾಸು, ಆಟೊಮೊಬೈಲ್ ಮತ್ತು ಐಟಿ ಸ್ಟಾಕ್ಸ್ ಲಾಭ ಗಳಿಸಿತು. ಬಿಎಸ್‌ಇ ಲಿಸ್ಟೆಡ್ ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯದಲ್ಲಿ 5 ಲಕ್ಷ ಕೋಟಿ ಏರಿಕೆಯಾಗಿದ್ದು, 440 ಲಕ್ಷ ಕೋಟಿಗೆ ವೃದ್ಧಿಸಿದೆ. ಈಗ ಸೂಚ್ಯಂಕ ಏರಿಕೆಗೆ ಕಾರಣವನ್ನು ನೋಡೋಣ.
ಈ ಸುದ್ದಿಯನ್ನೂ ಓದಿ: Canara Bank: ಕೆನರಾ ಬ್ಯಾಂಕ್ ಷೇರಿನ ದರ ಏರುತ್ತಿರುವುದೇಕೆ?
ಅಮೆರಿಕದ ಜತೆಗೆ ಝೀರೊ-ಟಾರಿಫ್ ಡೀಲ್ ಸಂಭವ
ಭಾರತ ಮತ್ತು ಅಮೆರಿಕದ ನಡುವೆ ಶೂನ್ಯ ತೆರಿಗೆ ಒಪ್ಪಂದ ಕುರಿತು ಭಾರತವು ಪ್ರಸ್ತಾಪಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದರಿಂದ ಅಮೆರಿಕ ಮತ್ತು ಭಾರತದ ನಡುವೆ ಹಲವಾರು ವಸ್ತುಗಳು ಯಾವುದೇ ತೆರಿಗೆ ಇಲ್ಲದೆ ಆಮದು-ರಫ್ತಾಗಲಿದೆ.
ಕಚ್ಚಾ ತೈಲ ದರ ಇಳಿಕೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಗುರುವಾರ 2 ಡಾಲರ್ ಇಳಿಕೆಯಾಗಿದ್ದು, ಪ್ರತಿ ಬ್ಯಾರಲ್‌ಗೆ 64 ಡಾಲರ್‌ಗೆ ತಗ್ಗಿದೆ. ಇದು ಹಣದುಬ್ಬರ ಇಳಿಕೆಗೆ ಸಹಕರಿಸಲಿದೆ.
ಬಂಗಾರದ ದರ ಇಳಿಕೆ
ಬಂಗಾರದ ದರದದಲ್ಲಿ ಗುರುವಾರ ಇಳಿಕೆಯಾಗಿದ್ದು, 24 ಕ್ಯಾರಟ್ ಚಿನ್ನದ ದರವು 10 ಗ್ರಾಮ್‌ಗೆ 93,393 ರುಪಾಯಿಗೆ ತಗ್ಗಿದೆ. ಜಿಯೊಪೊಲಿಟಿಕಲ್ ಟೆನ್ಷನ್‌ಗಳು ಕಡಿಮೆ ಆಗುತ್ತಿರುವುದನ್ನು ಇದು ಬಿಂಬಿಸಿದೆ.
ವಿದೇಶಿ ಹೂಡಿಕೆ ಹೆಚ್ಚಳ
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಎಫ್‌ಐಐಗಳು ಏಪ್ರಿಲ್ 15ರಿಂದ 50,000 ಕೋಟಿ ರುಪಾಯಿಗಳ ಹೂಡಿಕೆಯನ್ನು ಮಾಡಿದ್ದಾರೆ. ಇದು ಷೇರು ಸೂಚ್ಯಂಕಗಳ ಏರಿಕೆಗೆ ಮತ್ತೊಂದು ಕಾರಣವಾಗಿದೆ.
ಈ ನಡುವೆ ಭಾರತದ ರಿಟೇಲ್ ಹಣದುಬ್ಬರ ಕಳೆದ ಏಪ್ರಿಲ್‌ನಲ್ಲಿ 3.16%ಕ್ಕೆ ಇಳಿಕೆಯಾಗಿದೆ. ಕಳೆದ ಆರು ವರ್ಷಗಳಲ್ಲಿಯೇ ಇದು ಕಡಿಮೆ ಮಟ್ಟವಾಗಿದೆ. ಹೀಗಾಗಿ ಆರ್‌ಬಿಐ ಬಡ್ಡಿ ದರ ಇಳಿಸುವ ವಿಶ್ವಾಸ ಉಂಟಾಗಿದೆ. ಅಮೆರಿಕದಲ್ಲೂ ಹಣದುಬ್ಬರ ಏಪ್ರಿಲ್‌ನಲ್ಲಿ 0.2%ಕ್ಕೆ ತಗ್ಗಿದೆ.
ಗುರುವಾರ ಹೆಚ್ಚು ಲಾಭ ಗಳಿಸಿದ ಷೇರುಗಳ ಪಟ್ಟಿ
ಕೆಇಸಿ ಇಂಟರ್ ನ್ಯಾಶನಲ್ : 9%
ವಿಐಪಿ ಇಂಡಸ್ಟ್ರೀಸ್ : 8%
ಹೀರೊಮೊಟೊ ಕಾರ್ಪ್ : 6%
ಕೊಚ್ಚಿನ್ ಶಿಪ್ ಯಾರ್ಡ್ : 6%
ಜೆಸ್‌ಡಬ್ಲ್ಯು ಸ್ಟೀಲ್ : 5%
ನಷ್ಟಕೀಡಾದ ಷೇರುಗಳ ಲಿಸ್ಟ್
ಮುತ್ತೂಟ್ ಫೈನಾನ್ಸ್ : 7%
ಗೋದ್ರೇಜ್ ಇಂಡಸ್ಟ್ರೀಸ್ : 4%