ಮುಂಬಯಿ: ಗುಜರಾತ್ ಟೈಟಾನ್ಸ್ ತಂಡದ ಆಟಗಾರ ಜಾಸ್ ಬಟ್ಲರ್ ಅವರು ಲೀಗ್ ಪಂದ್ಯಗಳ ಬಳಿಕ ರಾಷ್ಟ್ರೀಯ ತಂಡದ ಕರ್ತವ್ಯ ನಿಮಿತ್ತ ಪ್ಲೇ ಆಫ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಶ್ರೀಲಂಕಾದ ಕುಸಲ್ ಮೆಂಡಿಸ್ ಟೈಟಾನ್ಸ್ ತಂಡ ಸೇರಲಿದ್ದಾರೆ. ಆದರೆ ಅವರು ಮೇ 25ರ ನಂತರವಷ್ಟೇ ಆಯ್ಕೆಗೆ ಅರ್ಹರಾಗಿದ್ದಾರೆ ಎಂದು ಐಪಿಎಲ್ ಆಡಲಿತ ಮಂಡಳಿ ತಿಳಿಸಿದೆ. ಗುಜರಾತ್ ತಂಡ ಮೇ 25ಕ್ಕೆ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯ ಆಡಲಿದೆ.
ಬಟ್ಲರ್ ಜತೆಗೆ ಮೊಯಿನ್ ಅಲಿ, ಜೋಫ್ರ ಆರ್ಚರ್, ಸ್ಯಾಮ್ ಕರನ್, ಜೇಮಿ ಓವರ್ಟನ್ ಮತ್ತು ವಿಲ್ ಜಾಕ್ಸ್ ಕೂಡ ಲೀಗ್ ಪಂದ್ಯದ ಮುಕ್ತಾಯದ ಬಳಿಕ ತವರಿಗೆ ಮರಳಲಿದ್ದಾರೆ. ವಿಲ್ ಜಾಕ್ಸ್ ಬದಲಿಗೆ ಮುಂಬೈ ಇಂಡಿಯನ್ಸ್ ತಂಡ ಜಾನಿ ಬೇರ್‌ಸ್ಟೋ ಅವರನ್ನು ತಾತ್ಕಾಲಿಕ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಮುಂಬೈ ಪ್ಲೇ ಆಫ್ ಪ್ರವೇಶಿಸಿದರೆ ಅವರು ವಿಲ್ ಜಾಕ್ಸ್ ಸ್ಥಾನದಲ್ಲಿ ಆಡಲಿದ್ದಾರೆ.
ಗುಜರಾತ್ ಟೈಟಾನ್ಸ್ ಇದುವರೆಗೆ ಆಡಿದ 11 ಪಂದ್ಯಗಳಲ್ಲಿ 8 ಗೆಲುವು, 3 ಸೋಲಿನೊಂದಿಗೆ 16 ಅಂಕಹೊಂದಿದೆ. ಬಾಕಿ ಇರುವ 3 ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದರೂ ಸಾಕು ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತವಾಗಲಿದೆ. ಆದರೆ ಮೂರೂ ಪಂದ್ಯಗಳಲ್ಲಿ ಸೋತರೆ ತಂಡ ಹೊರಬೀಳುವ ಸಾಧ್ಯತೆಯೂ ಇರಲಿದೆ. ಏಕೆಂದರೆ, ಇನ್ನೂ 4 ತಂಡಗಳಿಗೆ ಗರಿಷ್ಠ 17 ಅಂಕ ಗಳಿಸಲು ಅವಕಾಶವಿದೆ. ಆಗ ಬೇರೆ ಫಲಿತಾಂಶಗಳ ಮೇಲೆ ಅವಲಂಬಿತಗೊಳ್ಳಬೇಕಿದೆ. ಟೈಟಾನ್ಸ್‌ಗೆ ಕೊನೆ 2 ಪಂದ್ಯ ಅಹಮದಾಬಾದ್‌ನಲ್ಲಿದ್ದು, ಈ ವರ್ಷ ತವರಿನಲ್ಲಿ 4-1 ಗೆಲುವು-ಸೋಲಿನ ದಾಖಲೆ ಹೊಂದಿದೆ.