ಜೈಪುರ: ಪ್ಲೇ ಆಫ್ ಹೊಸ್ತಿಲಲ್ಲಿರುವ ಪಂಜಾಬ್ ಕಿಂಗ್ಸ್(RR vs PBKS) ಮತ್ತು ಸತತ ಸೋಲಿನಿಂದ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ರಾಜಸ್ಥಾನ ರಾಯಲ್ಸ್ ತಂಡಗಳು ಐಪಿಎಲ್(IPL 2025) 18ನೇ ಆವೃತ್ತಿಯಲ್ಲಿ ಭಾನುವಾರ ಮುಖಾಮುಖಿ ಆಗಲಿವೆ. ತವರಿನ ಸವಾಯಿ ಮಾನ್ಸಿಂಗ್ ಸ್ಟೇಡಿಯಂ(Sawai Mansingh Stadium)ನಲ್ಲಿ ಹಗಲು ನಡೆಯುವ ಈ ಪಂದ್ಯದಲ್ಲಿ ಸೋಲಿನ ಸರಪಳಿ ಮುರಿಯುವ ಹಂಬಲ ರಾಜಸ್ಥಾನ ತಂಡದ್ದಾಗಿದೆ. ಆದರೆ ಭರ್ಜರಿ ಲಯದಲ್ಲಿರುವ ಪಂಜಾಬ್ ಎದುರು ಕಠಿಣ ಸತ್ವಪರೀಕ್ಷೆ ಎದುರಾಗುವ ನಿರೀಕ್ಷೆ ಇದೆ.
ರಾಜಸ್ಥಾನ್‌ಗೆ ಈ ಪಂದ್ಯ ಗೆದ್ದರೂ ಸೋತರೂ ಯಾವುದೇ ನಷ್ಟ ಸಂಭವಿಸುವುದಿಲ್ಲ. ಏಕೆಂದರೆ ತಂಡ ಈಗಾಗಲೇ 9 ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿ ತಂಡಕ್ಕೆ ಇದೊಂದು ಔಪಚಾರಿಕ ಪಂದ್ಯ ಎಂದರೂ ತಪ್ಪಾಗಲಾರದು. ಆದರೆ ಪಂಜಾಬ್‌ಗೆ ಪ್ಲೇ ಆಫ್ ಪ್ರವೇಶಿಸಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅಗತ್ಯ. ಪಂಜಾಬ್ ಇದುವರೆಗೆ ಆಡಿದ 11 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 15 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ. ರಾಜಸ್ಥಾನ್ ವಿರುದ್ಧ ಗೆದ್ದರೆ ತಂಡದ ಪ್ಲೇ-ಆಫ್ ಸ್ಥಾನ ಖಚಿತಗೊಳ್ಳಲಿದೆ. ಹೀಗಾಗಿ ಶ್ರೇಯಸ್ ಅಯ್ಯರ್ ಪಡೆಗೆ ಇದು ಮಹತ್ವದ ಪಂದ್ಯವೆನಿಸಿದೆ.
ಮೇ 8ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ನಡುವೆ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಈ ಪಂದ್ಯದಲ್ಲಿ ಪಂಜಾಬ್ 10 ಓವರ್‌ಗೆ 122 ರನ್ ಬಾರಿಸಿತ್ತು. ಒಂದೊಮ್ಮೆ ಈ ಪಂದ್ಯ ಪೂರ್ಣಗೊಳ್ಳುತ್ತಿದ್ದರೆ ಪಂಜಾಬ್ ಗೆಲುವು ಸಾಧಿಸುವ ಸಾಧ್ಯತೆ ಇತ್ತು.
ಪಂಜಾಬ್ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಬಲಿಷ್ಠವಾಗಿದೆ. ಆರಂಭಿಕ ಯುವ ಬ್ಯಾಟರ್‌ಗಳಾದ ಪ್ರಿಯಾಂಶ್ ಆರ್ಯ ಮತ್ತು ಪ್ರಭ್‌ಸಿಮ್ರನ್ ಸಿಂಗ್ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲ ಪಂದ್ಯಗಳಲ್ಲಿಯೂ ತಂಡಕ್ಕೆ ಉತ್ತಮ ಆರಂಭ ನೀಡುತ್ತಲೇ ಬಂದಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ನಾಯಕ ಅಯ್ಯರ್ ಕೂಡ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದಾರೆ. ಬೌಲಿಂಗ್‌ನಲ್ಲಿ ಯಜುವೇಂದ್ರ ಚಹಲ್, ಅರ್ಶ್‌ದೀಪ್ ಸಿಂಗ್ ಉತ್ತಮ ಲಯದಲ್ಲಿದ್ದಾರೆ.
ರಾಜಸ್ಥಾನ್ ತಂಡ ಎಷ್ಟೇ ಉತ್ತಮವಾಗಿ ಆಡಿದರೂ ಕೂಡ ಅದೃಷ್ಟ ಮಾತ್ರ ಕೈ ಹಿಡಿಯುತ್ತಿಲ್ಲ. ಕೊನೆಯ ತನಕ ಬಂದು ಗೆಲ್ಲುವ ಪಂದ್ಯದಲ್ಲಿ ಸೋಲು ಕಾಣುತ್ತಿದೆ. ಹಾಲಿ ಆವೃತ್ತಿಯಲ್ಲಿ ಎರಡು ಬಾರಿ ಒಂದು ರನ್ ಅಂತರದಿಂದ ತಂಡ ಸೋಲು ಕಂಡಿದೆ.
ಪಿಚ್ ರಿಪೋರ್ಟ್
ಸವಾಯಿ ಮಾನ್ಸಿಂಗ್ ಸ್ಟೇಡಿಯಂನ ಪಿಚ್ ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಉತ್ತಮ ಸಮತೋಲನವನ್ನು ನೀಡುತ್ತದೆ. ಇಲ್ಲಿ ಕಳೆದ 10 ಪಂದ್ಯಗಳಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 178 ರನ್‌ಗಳಷ್ಟಿದೆ. ಚೇಸಿಂಗ್ ನಡೆಸಿದ ತಂಡಗಳು ಸ್ವಲ್ಪ ಮುನ್ನಡೆ ಸಾಧಿಸಿವೆ.
ಮುಖಾಮುಖಿ: 29
ರಾಜಸ್ಥಾನ್ ಗೆಲುವು: 17
ಪಂಜಾಬ್ ಗೆಲುವು: 12
ಸಂಭಾವ್ಯ ತಂಡಗಳು
ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರಾನ್ ಸಿಂಗ್, ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋನಿಸ್, ಮಾರ್ಕೊ ಜಾನ್ಸೆನ್, ಅಜ್ಮತುಲ್ಲಾ ಒಮರ್ಜಾಯ್, ಯುಜ್ವೇಂದ್ರ ಚಾಹಲ್, ಅರ್ಶ್‌ದೀಪ್ ಸಿಂಗ್.
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ನಿತೀಶ್ ರಾಣಾ, ರಿಯಾನ್ ಪರಾಗ್ (ನಾಯಕ), ಧ್ರುವ್ ಜುರೆಲ್ (ವಿ.ಕೀ.), ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ಸಂದೀಪ್ ಶರ್ಮಾ, ಯುಧ್ವೀರ್ ಸಿಂಗ್ ರಕ್.