ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಯ( pahalgam attack) ಬಳಿಕ ಪಾಕಿಸ್ತಾನ ಮತ್ತು ಭಾರತದ ನಡುವೆ(India & Pakistan tensions ) ಬಿಗುವಿನ ವಾತಾವರಣ ಮನೆಮಾಡಿದೆ. ಪಾಕಿಸ್ಥಾನವು ಉಗ್ರಪೋಷಣೆಯನ್ನು ಕೈಬಿಡಬೇಕು ಎಂದು ಭಾರತವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹಾಕುತ್ತಿದ್ದರೆ, ಈ ದಾಳಿಗೆ ನಾವು ಹೊಣೆಗಾರರೇ ಅಲ್ಲ ಎಂದು ಪಾಕಿಸ್ತಾನ ತನ್ನ ಹಳೆಯ ರಾಗವನ್ನೇ ಹಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು(ಬಿಸಿಸಿಐ) ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಡೆಸುವ ಎಲ್ಲ ಟೂರ್ನಿಗಳಿಂದ ಸದ್ಯಕ್ಕೆ ದೂರವಿರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಹೀಗಾಗಿ ಈ ವರ್ಷ ನಡೆಯಲಿರುವ ಏಷ್ಯಾಕಪ್(Asia Cup 2025) ಟೂರ್ನಿಯಲ್ಲಿ ಟೀಮ್ ಇಂಡಿಯಾ ಕಣಕ್ಕಿಳಿಯುವುದಿಲ್ಲ ಎನ್ನಲಾಗಿದೆ.
ಭಾರತವು 2025 ರ ಏಷ್ಯಾ ಕಪ್ ಆಡುವುದಿಲ್ಲ ಅಥವಾ ಆಯೋಜಿಸುವುದಿಲ್ಲ ಎಂದು ಬಿಸಿಸಿಐ ನಿರ್ಧರಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ಟಿ20 ಸ್ವರೂಪದಲ್ಲಿ ನಡೆಯಬೇಕಿರುವ ಏಷ್ಯಾ ಕಪ್ ಟೂರ್ನಿಯನ್ನು ಈ ವರ್ಷ ಭಾರತ ಆಯೋಜಿಸಬೇಕಿತ್ತು. ಆದರೆ ಮೂಲಗಳ ಪ್ರಕಾರ ಭಾರತ ಟೂರ್ನಿಯಿಂದ ಹಿಂದೆ ಸರಿದಿರುವುದಾಗಿ ವರದಿಯಾಗಿದೆ. ಜತೆಗೆ ಮುಂದಿನ ತಿಂಗಳು ಶ್ರೀಲಂಕಾದಲ್ಲಿ ನಡೆಯಬೇಕಿದ್ದ ಮಹಿಳಾ ಉದಯೋನ್ಮುಖ ತಂಡಗಳ ಏಷ್ಯಾ ಕಪ್‌ನಲ್ಲಿಯೂ ಭಾರತ ತಂಡ ಪಾಲ್ಗೊಳ್ಳುವುದಿಲ್ಲ ಎನ್ನಲಾಗಿದೆ.
ಪಾಕ್‌ಗೆ ಕ್ರಿಕೆಟ್ ಮಂಡಳಿಗೆ ಬಿಸಿಸಿಐ ಸ್ಟ್ರೋಕ್
ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಪುರುಷರ ಏಷ್ಯಾ ಕಪ್‌ಗೆ ಸಂಬಂಧಿಸಿದಂತೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮೊಹ್ಸಿನ್ ನಖ್ವಿ ನೇತೃತ್ವದಲ್ಲಿ ನಡೆಯಲಿರುವ ಮುಂಬರುವ ಎಸಿಸಿ (ಏಷ್ಯನ್ ಕ್ರಿಕೆಟ್ ಕೌನ್ಸಿಲ್) ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಆದಾಗ್ಯೂ, ಭಾರತವು ಪಂದ್ಯಾವಳಿಯಲ್ಲಿ ಆಡುವುದಿಲ್ಲ ಅಥವಾ ಆತಿಥ್ಯ ವಹಿಸುವುದಿಲ್ಲ ಎಂದು ಈಗಾಗಲೇ ಎಸಿಸಿಗೆ ತಿಳಿಸಿದೆ ಎಂದು ಮೂಲಗಳು ತಿಳಿಸಿದೆ.
ಆತಿಥ್ಯದ ಹಕ್ಕನ್ನು ಹೊಂದಿರುವ ಭಾರತವೇ ಟೂರ್ನಿಯಿಂದ ಹಿಂದೆ ಸರಿದರೆ ಟೂರ್ನಿ ನಡೆಯುವ ಸಾಧ್ಯತೆಯಿಲ್ಲ. ಒಂದೊಮ್ಮೆ ಟೂರ್ನಿ ರದ್ದಾದರೆ ಮೊಹ್ಸಿನ್ ನಖ್ವಿ ಪ್ರಸ್ತುತ ಎಸಿಸಿ ಅಧ್ಯಕ್ಷರಾಗಿರುವುದರಿಂದ, ಎಲ್ಲಾ ಆರ್ಥಿಕ ನಷ್ಟಗಳನ್ನು ಅವರೇ ಭರಿಸಬೇಕಾಗುತ್ತದೆ. 2023 ರಲ್ಲಿ ಪ್ರಶಸ್ತಿಯನ್ನು ಗೆದ್ದಿರುವ ಭಾರತವು ಏಷ್ಯಾಕಪ್‌ನ ಹಾಲಿ ಚಾಂಪಿಯನ್ ಆಗಿದೆ.