ಮುಂಬಯಿ: ಹಾಲಿ ಆವೃತ್ತಿಯ ಐಪಿಎಲ್(IPL 2025) ಟೂರ್ನಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಕನ್ನಡಿಗ ಕೆ.ಎಲ್ ರಾಹುಲ್(KL Rahul) ಮತ್ತೆ ಭಾರತ ಟಿ20 ತಂಡಕ್ಕೆ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಮೂಲಗಳ ಪ್ರಕಾರ ಮುಂಬರುವ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ರಾಹುಲ್ ಆಯ್ಕೆಯಾಲಿದ್ದಾರೆ ಎಂದು ತಿಳಿದುಬಂದಿದೆ.
ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ರಾಹುಲ್ ಬ್ಯಾಟಿಂಗ್ ಮತ್ತು ಕೀಪಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ತೋರುತ್ತಿದ್ದಾರೆ. ಕಳೆದ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಶತಕ ಕೂಡ ಬಾರಿಸಿ ಮಿಂಚಿದ್ದರು. ಈ ಹಿಂದೆ ಟಿ20 ಯಲ್ಲಿ ಕೀಪಿಂಗ್ ಮಾಡುತ್ತಿದ್ದ ಪಂತ್ ಈ ಬಾರಿಯ ಐಪಿಎಲ್‌ನಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಎರಡಂಕಿ ಗಡಿ ದಾಟಿಲ್ಲ. ಹೀಗಾಗಿ ಅವರಿಗೆ ಸದ್ಯ ಭಾರತ ತಂಡದಲ್ಲಿ ಅವಕಾಶ ಸಿಗುವುದು ಅನುಮಾನ.
ಇನ್ನೊಂದೆಡೆ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಉಭಯ ಆಟಗಾರರ ದಿಢೀರ್ ನಿವೃತ್ತಿಯಿಂದ ಅನುಭವಿ ಆಟಗಾರರ ಕೊರತೆ ಕೂಡ ತಂಡದಲ್ಲಿದೆ. ಸದ್ಯ ಈ ಕೊರತೆಯನ್ನು ನೀಗಿಸುವ ಸಾಮರ್ಥ್ಯ ಇರುವುದೆಂದರೆ ಅದು ರಾಹುಲ್‌ಗೆ ಮಾತ್ರ. ಕೋಚ್ ಗಂಭೀರ್ ಒಲವು ಕೂಡ ರಾಹುಲ್ ಮೇಲಿದೆ.
ಇದನ್ನೂ ಓದಿ IPL 2025: ಪ್ಲೇ ಆಫ್ ಪಂದ್ಯಕ್ಕೆ ಆರ್‌ಸಿಬಿ ಸೇರಿದ ಜಿಂಬಾಬ್ವೆಯ ಘಾತಕ ವೇಗಿ
ಕಳೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಯ್ಕೆ ಸಮಿತಿ ಮತ್ತು ಬಿಸಿಸಿಐ ಬಳಿ ಪಟ್ಟು ಹಿಡಿದು ರಾಹುಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿ ಕೀಪಿಂಗ್ ಹೊಣೆ ನೀಡಿದ್ದರು. ಇದಕ್ಕೆ ರಾಹುಲ್ ಕೂಡ ನ್ಯಾಯ ಒದಗಿಸಿದ್ದರು. ಬ್ಯಾಟಿಂಗ್ ಜತೆಗೆ ಕೀಪಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಕೊಡುಗೆ ಸಲ್ಲಿದ್ದರು. ರಾಹುಲ್ ಭಾರತ ಪರ ಕೊನೆಯ ಬಾರಿಗೆ ಟಿ20 ಕ್ರಿಕೆಟ್ ಆಡಿದ್ದು 2022ರಲ್ಲಿ. ಒಟ್ಟು ಭಾರತ ಪರ 72 ಟಿ20 ಪಂದ್ಯ ಆಡಿ 2265 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 22 ಅರ್ಧಶತಕ ಒಳಗೊಂಡಿದೆ.