Karunadu Studio

ಕರ್ನಾಟಕ

DK Shivakumar: ಮೆಟ್ರೋ 2ನೇ ಹಂತದ ಯೋಜನಾ ವೆಚ್ಚ 40,424 ಕೋಟಿಗೆ ಅನುಮೋದನೆ: ಡಿ.ಕೆ.ಶಿವಕುಮಾರ್ – Kannada News | DK Shivakumar Estimated cost of Rs 40424 crore approved for second phase of metro project says DCM DK Shivakumar


ಬೆಂಗಳೂರು: ಮೆಟ್ರೋ ಎರಡನೇ ಹಂತದ ಯೋಜನೆಗೆ ಅಂದಾಜು ವೆಚ್ಚ ₹40,424 ಕೋಟಿ ರೂ.ಗೆ ಅನುಮತಿ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಾರಂಭ ಮಾಡುತ್ತಿದ್ದೇವೆ. ಇನ್ನು ಟನಲ್ ವಿಚಾರವಾಗಿ ಟೆಂಡರ್ ಕರೆಯುವ ವಿಚಾರವಾಗಿ ಚರ್ಚೆ ಮಾಡಲಾಗಿದೆ. ಹೈಬ್ರಿಡ್ ಮಾದರಿಯಲ್ಲಿ ಮಾಡಬೇಕೇ ಅಥವಾ ಬೇಡವೇ ಎಂಬುದನ್ನು ಸಿಎಂ ಜತೆ ತಾಂತ್ರಿಕ ಅಂಶ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಈ ಟೆಂಡರ್ ಜಾಗತಿಕ ಟೆಂಡರ್ ಆಗಿರಲಿದೆ ಎಂದು ತಿಳಿಸಿದರು. ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಮಾತನಾಡಿದ್ದಾರೆ.

ಇನ್ನು ‌ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಇನ್ನುಮುಂದೆ ಈ ಜಿಲ್ಲೆಯು ಬೆಂಗಳೂರು ದಕ್ಷಿಣ ಎಂದು ಕರೆಯಲ್ಪಡುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar)‌ ತಿಳಿಸಿದರು. ರಾಮನಗರ ಜಿಲ್ಲಾ ಕೇಂದ್ರವಾಗಿಯೇ ಮುಂದುವರಿಯಲಿದೆ. ಕೇವಲ ಜಿಲ್ಲೆಯ ಹೆಸರನ್ನು ಮಾತ್ರ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲಾಗಿದೆ. ಈ ಹಿಂದೆ ಇದು ಬೆಂಗಳೂರು ಜಿಲ್ಲೆಯಾಗಿತ್ತು. ಆಡಳಿತಾತ್ಮಕ ದೃಷ್ಟಿಯಿಂದ ಈ ಹೆಸರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಈ ಮರುನಾಮಕರಣ ಮಾಡುತ್ತಿರುವ ವಿಚಾರವನ್ನು ತಿಳಿಸಲು ಸಂತೋಷವಾಗುತ್ತಿದೆ ಎಂದು ಹೇಳಿದರು.

ಕಾನೂನು ಚೌಕಟ್ಟಿನಲ್ಲಿ ಜಿಲ್ಲೆ ಮರುನಾಮಕರಣ

ರಾಮನಗರ ಜಿಲ್ಲೆ ಮರುನಾಮಕರಣದ ಹೆಚ್ಚಿನ ಅನುಕೂಲಗಳೇನು, ಇದಕ್ಕೆ ತಗುಲುವ ವೆಚ್ಚ ಎಷ್ಟು ಎಂದು ಕೇಳಿದಾಗ, ʼಈ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು. ಇದಕ್ಕಾಗಿ ಯಾವುದೇ ಆರ್ಥಿಕ ಸಮಸ್ಯೆ ಇರುವುದಿಲ್ಲ. ನಮ್ಮದು ಮೊದಲು ಬೆಂಗಳೂರು ಜಿಲ್ಲೆಯಾಗಿತ್ತು. ನಾನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಅಧ್ಯಕ್ಷನಾಗಿದ್ದೆ. ಹೊಸಕೋಟೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ರಾಮನಗರ, ಕನಕಪುರ, ಮಾಗಡಿ ಇವೆಲ್ಲವೂ ಬೆಂಗಳೂರಿನ ಭಾಗವಾಗಿತ್ತು. ಆ ಹೆಸರನ್ನು ಉಳಿಸಿಕೊಳ್ಳುವ ಕೆಲಸ ಮಾಡುತ್ತಿದ್ದೇವೆ. ಹೀಗಾಗಿ ಈ ಜಿಲ್ಲೆಯನ್ನು ಕಾನೂನು ಚೌಕಟ್ಟಿನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಇದಕ್ಕೆ ಕೇಂದ್ರ ಸರ್ಕಾರ ವಿರೋಧಿಸಿತ್ತು ಎಂದು ಕೇಳಿದಾಗ, ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ಅಧಿಕಾರ ಇರುವುದಿಲ್ಲ. ಅವರಿಗೆ ಮಾಹಿತಿ ನೀಡುವ ಉದ್ದೇಶದಿಂದ ಅವರಿಗೆ ಪ್ರಸ್ತಾವನೆ ಕಳುಹಿಸಿದ್ದೆವು. ಆದರೆ ಕೆಲವರು ರಾಜಕೀಯ ಮಾಡುವ ಪ್ರಯತ್ನ ಮಾಡಿದರು. ಇದು ರಾಜ್ಯಕ್ಕೆ ಸಂಬಂಧಿಸಿದ ವಿಚಾರ. ಇದು ನಮ್ಮ ಹಕ್ಕು. ಗದಗ, ಚಾಮರಾಜನಗರ ಜಿಲ್ಲೆ ಸೇರಿದಂತೆ ಬೇರೆ ಜಿಲ್ಲೆಗಳನ್ನು ಮಾಡಿದ್ದೇವೆ. ರಾಮನಗರ ಜಿಲ್ಲೆ ಎಂದು ಮಾಡಿದಾಗ ಕೇಂದ್ರವನ್ನು ಕೇಳಿರಲಿಲ್ಲ. ಇನ್ನುಮುಂದೆ ಎಲ್ಲಾ ದಾಖಲೆಗಳಲ್ಲೂ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಬದಲಾವಣೆಯಾಗಲಿದೆ. ನನ್ನನ್ನು ನೀವೆಲ್ಲರೂ ಬೆಂಗಳೂರು ದಕ್ಷಿಣ ಜಿಲ್ಲೆಯವನು ಎಂದು ಕರೆಯಬೇಕು ಎಂದು ಅವರು ಹೇಳಿದರು.

ಬಿಡಿಎ ನಿವೇಶನದಾರರ ತೆರಿಗೆ ಬಡ್ಡಿ ವಿನಾಯಿತಿಗೆ ಒಟಿಎಸ್

ಬೆಂಗಳೂರಿನಲ್ಲಿ ಅನೇಕ ಸಂಘ ಸಂಸ್ಥೆಗಳು, ದೇವಾಲಯಗಳು ಬಿಡಿಎ ವ್ಯಾಪ್ತಿಯಲ್ಲಿ ನಿವೇಶನ ತೆಗೆದುಕೊಂಡಿದ್ದು, ಅವರಿಗೆ ಒನ್ ಟೈಮ್ ಇನ್ಟ್ರೆಸ್ಟ್ ಬೆನಿಫಿಟ್ ನೀಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ. 120 ದಿನಗಳ ಒಳಗಾಗಿ ಅವರು ಬಾಕಿ ಇರುವ ತೆರಿಗೆ ಪಾವತಿಸಿದರೆ ಬಡ್ಡಿ ಮನ್ನಾ ಮಾಡಲಾಗುವುದು ಎಂದು ತಿಳಿಸಿದರು.

ಕಸ ವಿಲೇವಾರಿಗೆ 33 ಪ್ಯಾಕೇಜ್

ಈ ಹಿಂದೆ ಬಿಜೆಪಿ ಅವಧಿಯಲ್ಲಿ ಕಸ ವಿಲೇವಾರಿಗೆ 98 ಪ್ಯಾಕೇಜ್ ಟೆಂಡರ್ ಕರೆಯಲಾಗಿತ್ತು. ಈ ವಿಚಾರವಾಗಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿ, ಮುಂದಿನ ನಾಲ್ಕು ತಿಂಗಳಲ್ಲಿ ಈ ಟೆಂಡರ್ ಬಗ್ಗೆ ಅಂತಿಮ ತೀರ್ಮಾನ ಮಾಡುವಂತೆ ತೀರ್ಪು ನೀಡಿದೆ. ನಾವು ಪ್ರತಿ ಕ್ಷೇತ್ರದಲ್ಲೂ ಒಂದೊಂದು ಪ್ಯಾಕೇಜ್ ಮಾಡಲು ಮುಂದಾಗಿದ್ದು, ದೊಡ್ಡ ಕ್ಷೇತ್ರಗಳಲ್ಲಿ ಎರಡು ಪ್ಯಾಕೇಜ್ ಸೇರಿದಂತೆ 33 ಪ್ಯಾಕೇಜ್ ಮೂಲಕ ಕಸ ವಿಲೇವಾರಿ ಮಾಡಲಾಗುವುದು. ಈ ಕುರಿತ ಟೆಂಡರ್ ಶೀಘ್ರವೇ ಕರೆಯಲಾಗುವುದು. ಇದಕ್ಕಾಗಿ 7 ವರ್ಷಗಳ ಅವಧಿಗೆ ₹ 4,790 ಕೋಟಿ ವೆಚ್ಚದಲ್ಲಿ ಕಸ ವಿಲೇವಾರಿ ಯೋಜನೆ ಮಾಡಲಾಗುತ್ತಿದೆ. ಈಗಿರುವ ವ್ಯವಸ್ಥೆಗೂ, ಹೊಸ ವ್ಯವಸ್ಥೆಗೂ ಬೇಕಾದಷ್ಟು ವ್ಯತ್ಯಾಸಗಳಿವೆ. ಕಸ ವಿಂಗಡಣೆ, ವಾಹನಗಳ ಜವಾಬ್ದಾರಿ, ಕಟ್ಟಡ ತ್ಯಾಜ್ಯ ಪ್ರತ್ಯೇಕತೆ ಸೇರಿದಂತೆ ಅನೇಕ ಜವಾಬ್ದಾರಿ ನೀಡಲಾಗುವುದು ಎಂದು ವಿವರಿಸಿದರು.

ಪರಮೇಶ್ವರ್ ಅವರ ಮೇಲೆ ಇಡಿ ದಾಳಿ ಬಗ್ಗೆ ನಿಮ್ಮ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿದೆ ಎಂದು ಕೇಳಿದಾಗ, ʼನಾನು ವಿವಾದವಾಗುವಂತಹದ್ದು ಏನಿದೆ. ನಾನು ಪರಮೇಶ್ವರ್ ಅವರ ಬಳಿ ವಿಚಾರಿಸಿದೆ. ಅವರು ಯಾವುದೋ ಮದುವೆ ಸಂದರ್ಭದಲ್ಲಿ ನೀಡಿದ್ದಾರೆ ಎಂದು ಹೇಳಿದ್ದಾರೆ. ನಿನ್ನೆ ನೀವು ಈ ವಿಚಾರವಾಗಿ ಪ್ರಶ್ನೆ ಕೇಳಿದಾಗ, ನಾನು ಪರಮೇಶ್ವರ್ ಅವರಿಂದ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದೆ. ನಾನು ಪರಮೇಶ್ವರ್ ಅವರ ಬಳಿ ಚರ್ಚೆ ಮಾಡಿದಾಗ ನನಗೆ ತಿಳಿದ ವಿಚಾರ ಹೇಳಿದ್ದೇನೆ. ಇದರಲ್ಲಿ ವಿವಾದ ಮಾಡುವಂತಹದ್ದು ಏನಿದೆ?ʼ ಎಂದು ಪ್ರಶ್ನಿಸಿದರು.

ರನ್ಯಾ ರಾವ್ ಅವರು ಸ್ಮಗ್ಲಿಂಗ್ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ ಎಂದು ಕೇಳಿದಾಗ, ʼಆಕೆ ಸ್ಮಗ್ಲಿಂಗ್ ಪ್ರಕರಣದಲ್ಲಿ ಆರೋಪಿಯಾಗಿರಬಹುದು. ಅದು ಕೋಟ್ಯಂತರ ರೂಪಾಯಿ ಹಗರಣ. ನಾವು ಅದರಲ್ಲಿ ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ. ಅಥವಾ ಇಂತಹ ವಿಚಾರದಲ್ಲಿ ನಾನಾಗಲಿ, ಪರಮೇಶ್ವರ್ ಅವರಾಗಲಿ ಯಾರಿಗೂ ಬೆಂಬಲವನ್ನು ನೀಡುವುದಿಲ್ಲ. ಆಕೆ ಪರಮೇಶ್ವರ್ ಅವರ ಜತೆಗೆ ಕೆಲಸ ಮಾಡಿರುವ ಅಧಿಕಾರಿಯ ಪುತ್ರಿ. ಮದುವೆ ಸಂದರ್ಭದಲ್ಲಿ ಇವರು ಅವರಿಗೆ ಸಹಾಯ ಮಾಡಿರಬಹುದು. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಈ ವಿಚಾರವಾಗಿ ಅವರನ್ನು ಕೇಳಿ ಮಾಹಿತಿ ಪಡೆಯುವುದು ನನ್ನ ಕರ್ತವ್ಯ. ನಾವು ಅನೇಕ ಟ್ರಸ್ಟ್ ನಡೆಸುತ್ತಿದ್ದೇವೆ. ನಾವು ಅನೇಕರಿಗೆ ದೇಣಿಗೆ ನೀಡಿದ್ದೇವೆ. ಅವರು ಅದೇ ರೀತಿ ಅವರು ನೀಡಿರಬಹುದು ಎಂದರು.

ಈ ಸುದ್ದಿಯನ್ನೂ ಓದಿ | IOB Recruitment 2025: ಇಂಡಿಯನ್‌ ಓವರ್‌ಸಿಸ್‌ ಬ್ಯಾಂಕ್‌ನಲ್ಲಿದೆ 400 ಹುದ್ದೆ; ಹೀಗೆ ಅಪ್ಲೈ ಮಾಡಿ

ಇದು ತಪ್ಪೊಪ್ಪಿಗೆಯ ಹೇಳಿಕೆ ಎಂಬ ಬಿಜೆಪಿ ಹೇಳಿಕೆ ಬಗ್ಗೆ ಕೇಳಿದಾಗ, ಇಲ್ಲಿ ತಪ್ಪೊಪ್ಪಿಗೆ ಏನಿದೆ? 40 ಲಕ್ಷ ಹಣ ನೀಡಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಅವರು ನೀಡಿಲ್ಲ ಎಂದು ನಿರಾಕರಿಸಿಲ್ಲ. ಆದರೆ ಯಾವ ಉದ್ದೇಶಕ್ಕೆ ನೀಡಿದ್ದಾರೆ ಎಂಬುದು ಮುಖ್ಯವಲ್ಲವೇ? ಅವರ ಕುಟುಂಬದಲ್ಲಿ ಮದುವೆ ನಡೆದ ಸಮಯದಲ್ಲಿ ನೆರವು ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದರು.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »