ಸಿಕ್ಕಿಂ: ಕಳೆದ ಡಿಸೆಂಬರ್ ನಲ್ಲಿ ಸಿಕ್ಕಿಂಗೆ ನಿಯೋಜನೆಗೊಂಡ (Indian Army) ಸೈನಿಕನೊಬ್ಬ (Indian Army officer) ತನ್ನ ಸಹೋದ್ಯೋಗಿಯನ್ನು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ಘಟನೆ ಸಿಕ್ಕಿಂನಲ್ಲಿ (Sikkim) ನಡೆದಿದೆ. 23 ವರ್ಷದ ಸೇನಾ ಅಧಿಕಾರಿ ಲೆಫ್ಟಿನೆಂಟ್ ಶಶಾಂಕ್ ತಿವಾರಿ ಮೃತರು. ಅವರು ತಮ್ಮ ಸಹೋದ್ಯೋಗಿ ಸೈನಿಕ ಅಗ್ನಿವೀರ್ (Agniveer) ಸ್ಟೀಫನ್ ಸುಬ್ಬಾ ಅವರನ್ನು ರಕ್ಷಿಸಲು ಹೋಗಿ ಸಾವನ್ನಪ್ಪಿದ್ದಾರೆ. ಮರದ ಸೇತುವೆ ದಾಟುತ್ತಿದ್ದಾಗ ಸ್ಟೀಫನ್ ಸುಬ್ಬಾ ಕಾಲು ಜಾರಿ ನದಿಗೆ ಬಿದ್ದಿದ್ದು, ಅವರನ್ನು ರಕ್ಷಿಸಲು ಲೆಫ್ಟಿನೆಂಟ್ ಶಶಾಂಕ್ ತಿವಾರಿ ನದಿಗೆ ಹಾರಿದ್ದಾರೆ. ಈ ವೇಳೆ ಪ್ರವಾಹದಲ್ಲಿ ಸಿಲುಕಿದ ಅವರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಆರು ತಿಂಗಳ ಹಿಂದೆಯಷ್ಟೇ ಸ್ಟೀಫನ್ ಸುಬ್ಬಾ ಅವರು ಸೇನೆಗೆ ಸೇರಿದ್ದರು. ಇವರನ್ನು ರಕ್ಷಿಸಲು ಹೋಗಿ ಸೇನಾ ಅಧಿಕಾರಿ ಲೆಫ್ಟಿನೆಂಟ್ ಶಶಾಂಕ್ ತಿವಾರಿ ನಿಧನರಾಗಿದ್ದಾರೆ. ಆಕಸ್ಮಿಕವಾಗಿ ನದಿಗೆ ಬಿದ್ದ ಸ್ಟೀಫನ್ ಸುಬ್ಬಾ ಅವರನ್ನು ರಕ್ಷಿಸಲು ಧೈರ್ಯ ತೋರಿದ ಸೇನಾ ಅಧಿಕಾರಿ ಶಶಾಂಕ್ ಪ್ರವಾಹದಲ್ಲಿ ಕೊಚ್ಚಿ ಹೋಗಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದರು.
ಲೆಫ್ಟಿನೆಂಟ್ ಶಶಾಂಕ್ ತಿವಾರಿ ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಕ್ಕಿಂನಲ್ಲಿರುವ ಯುದ್ಧತಂತ್ರದ ಕಾರ್ಯಾಚರಣಾ ನೆಲೆಯ ಕಡೆಗೆ ಮಾರ್ಗ ತೆರೆಯುವ ಗಸ್ತು ತಂಡದ ನೇತೃತ್ವ ವಹಿಸಿದ್ದರು. ಭವಿಷ್ಯದ ನಿಯೋಜನೆಗಾಗಿ ಸಿದ್ಧಪಡಿಸಲಾಗುತ್ತಿರುವ ಪ್ರಮುಖ ಪೋಸ್ಟ್ ಕಡೆಗೆ ಶುಕ್ರವಾರ ಬೆಳಗೆ 11 ಗಂಟೆ ಸುಮಾರಿಗೆ ಸಂಚರಿಸುತ್ತಿದ್ದ ವೇಳೆ ಮರದ ಸೇತುವೆಯನ್ನು ದಾಟುತ್ತಿದ್ದ ಗಸ್ತು ತಂಡದ ಸದಸ್ಯರಲ್ಲಿ ಒಬ್ಬರಾದ ಅಗ್ನಿವೀರ್ ಸ್ಟೀಫನ್ ಸುಬ್ಬಾ ಕಾಲು ಜಾರಿ ನದಿಗೆ ಬಿದ್ದಿದ್ದಾರೆ.
ಅಗ್ನಿವೀರ್ ಸ್ಟೀಫನ್ ಸುಬ್ಬಾ ಅವರು ಸೇತುವೆಯಿಂದ ಕೆಳಗೆ ಬಿದ್ದು ಪರ್ವತದ ಹೊಳೆಯಲ್ಲಿ ಕೊಚ್ಚಿ ಹೋದರು. ತಕ್ಷಣ ಅವರನ್ನು ರಕ್ಷಿಸಲು ಧಾವಿಸಿದ ಲೆಫ್ಟಿನೆಂಟ್ ತಿವಾರಿ ನೀರಿಗೆ ಹಾರಿದರು. ಇವರನ್ನು ಹಿಂಬಾಲಿಸಿ ಮತ್ತೊಬ್ಬ ಸೈನಿಕ ನಾಯಕ್ ಪುಕಾರ್ ಕಟೀಲ್ ಕೂಡ ನದಿಗೆ ಹಾರಿದ್ದಾರೆ. ಇವರಿಬ್ಬರು ಸುಬ್ಬಾ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಅಷ್ಟರಲ್ಲಿ ಲೆಫ್ಟಿನೆಂಟ್ ತಿವಾರಿ ಅವರು ಬಲವಾದ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಅವರ ಮೃತ ದೇಹ ಸುಮಾರು 30 ನಿಮಿಷಗಳ ಅನಂತರ 800 ಮೀಟರ್ ಕೆಳಗೆ ಪತ್ತೆಯಾಗಿದೆ.
ಲೆಫ್ಟಿನೆಂಟ್ ಶಶಾಂಕ್ ತಿವಾರಿ ಅವರು ತಮ್ಮ ಪೋಷಕರು ಮತ್ತು ಸಹೋದರಿಯನ್ನು ಅಗಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಸೇನೆಯು, ಸಣ್ಣ ವಯಸ್ಸಿನಲ್ಲಿ ಅಲ್ಪಾವಧಿಯ ಸೇವೆಯ ಹೊರತಾಗಿ ಲೆಫ್ಟಿನೆಂಟ್ ತಿವಾರಿ ಅವರು ತಮ್ಮ ಮುಂದಿನ ಪೀಳಿಗೆಯ ಸೈನಿಕರಿಗೆ ಸ್ಫೂರ್ತಿ ನೀಡುವ ಧೈರ್ಯ ಮತ್ತು ಸೌಹಾರ್ದತೆಯನ್ನು ತೋರಿದ್ದಾರೆ ಎಂದು ಹೇಳಿದೆ.