ನವದೆಹಲಿ: ಇಂಗ್ಲೆಂಡ್ ವಿರುದ್ಧದ ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಗೆ (IND vs ENG) 18 ಸದಸ್ಯರ ಭಾರತ ತಂಡವನ್ನು (India’s Test Squad) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಶನಿವಾರ ಪ್ರಕಟಿಸಿದೆ. ನಿರೀಕ್ಷಯಂತೆ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್‌ಗೆ (Shubman Gill) ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ನೀಡಲಾಗಿದ್ದು, ಇವರಿಗೆ ಉಪ ನಾಯಕನನ್ನಾಗಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯವನ್ನು ಹೇಳಿದ್ದರು. ಇವರಿಂದ ತೆರವಾಗಿದ್ದ ನಾಯಕತ್ವದ ಸ್ಥಾನಕ್ಕೆ ಗಿಲ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.