ಬೆಂಗಳೂರು: ನಗರದ ಡೈರಿ ಸರ್ಕಲ್ ಬಳಿ ಬಮುಲ್ ಚುನಾವಣೆ (Bamul Election) ವೇಳೆ ಭಾನುವಾರ ಭಾರಿ ಹೈಡ್ರಾಮಾ ನಡೆದಿದೆ. ಸ್ಥಳಕ್ಕೆ ಡಿ.ಕೆ.ಸುರೇಶ್ ಬಂದ ಹಿನ್ನೆಲೆಯಲ್ಲಿ ಕೈ ಕಾರ್ಯಕರ್ತರು ಜೈಕಾರ ಕೂಗಿದ್ದಾರೆ. ಇದರಿಂದ ಡಿ.ಕೆ.ಸುರೇಶ್ ಎದುರೇ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಮೋದಿ ಹಾಗೂ ಎಚ್.ಡಿ.ಕುಮಾರಸ್ವಾಮಿಗೆ ಜೈಕಾರ ಹಾಕಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತು.
ಬಮುಲ್‌ನ 14 ನಿರ್ದೇಶಕ ಸ್ಥಾನಗಳ ಪೈಕಿ ಮೂವರು ಅವಿರೋಧ ಆಯ್ಕೆಯಾಗಿದ್ದು, ಇನ್ನುಳಿದ 11 ನಿರ್ದೇಶಕ ಸ್ಥಾನಗಳಿಗೆ ಇಂದು ಚುನಾವಣೆ ನಡೆದಿದೆ. ಚುನಾವಣೆ ನಡೆಯುತ್ತಿದ್ದ ಸ್ಥಳಕ್ಕೆ ಡಿ.ಕೆ.ಸುರೇಶ್ ಬರುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೈಡ್ರಾಮಾ ನಡೆದಿದೆ. ಗಲಾಟೆ ಜೋರಾಗುತ್ತಿದ್ದಂತೆ ಡಿ.ಕೆ.ಸುರೇಶ್ ಸ್ಥಳದಿಂದ ನಿರ್ಗಮಿಸಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು, 14 ನಿರ್ದೇಶಕ ಸ್ಥಾನಗಳ ಪೈಕಿ 11 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬಹಳ ಉತ್ಸಾಹದಿಂದ ಬಮುಲ್ ಚುನಾವಣೆ ನಡೆಯುತ್ತಿದೆ. ಚುನಾವಣೆ ಎಂದಾಗ ಜೈಕಾರ, ಧಿಕ್ಕಾರ ಎರಡೂ ಕೇಳಿಬರುತ್ತದೆ. ಕೆಲವರು ಗಲಾಟೆ, ಗದ್ದಲ ಮಾಡುತ್ತಾರೆ. ಅದರೆ, ಒಕ್ಕೂಟ ವ್ಯಾಪ್ತಿಯ ಮತದಾರರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸುವ ವಿಶ್ವಾಸವಿದೆ. ಇಂದು ಫಲಿತಾಂಶ ಹೊರಬೀಳಲಿದ್ದು, ನಿರ್ದೇಶಕರು ನಮ್ಮ ಸರ್ಕಾರದ ನಿರ್ಧಾರಕ್ಕೆ ಒಪ್ಪಿಗೆ ನೀಡಲಿದ್ದಾರೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Vidhana Soudha Guided Tour: ವಿಧಾನಸೌಧ ಗೈಡೆಡ್ ಟೂರ್‌ಗೆ ಚಾಲನೆ; ಜೂನ್ 1 ರಿಂದ ಪ್ರವೇಶ, ಶುಲ್ಕ ಎಷ್ಟು?
ಕೆಎಂಎಫ್ ಅಧ್ಯಕ್ಷ ಸ್ಥಾನದ ಮೇಲೆ ಡಿ.ಕೆ.ಸುರೇಶ್ ಕಣ್ಣು?
ಡಿ.ಕೆ. ಸುರೇಶ್ ಕನಕಪುರ ತಾಲೂಕಿನಿಂದ ಬಮುಲ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಇತ್ತೀಚೆಗೆ ಆಯ್ಕೆಯಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಡಿ.ಕೆ. ಸುರೇಶ್ ಡೈರಿ ಕ್ಷೇತ್ರಕ್ಕೆ ಪ್ರವೇಶಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ಬಮುಲ್ ನಿರ್ದೇಶಕರಾಗಿ ಸುರೇಶ್ ಆಯ್ಕೆಯಾಗಿರುವುದರ ಹಿಂದೆ ಕರ್ನಾಟಕ ಹಾಲು ಸಹಕಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವುದು ಹಾಗೂ ಮುಂದೆ ಕೆಎಂಎಫ್‌ನ ಅಧ್ಯಕ್ಷರಾಗಬೇಕು ಎನ್ನುವ ಉದ್ದೇಶವಿದೆ ಎಂದು ಚರ್ಚೆಯಾಗುತ್ತಿದೆ.