ನವದೆಹಲಿ: ಹರಿಯಾಣ (Haryana) ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ (YouTuber Jyoti Malhotra), ಪಾಕಿಸ್ತಾನಕ್ಕೆ (Pakistan) ಬೇಹುಗಾರಿಕೆ (Spying) ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾಳೆ. ಈಕೆಯ ಬಗ್ಗೆ ಆಘಾತಕಾರಿ ಸಂಗತಿಗಳು ದಿನಬೆಳಗಾದರೆ ಹೊರಬರುತ್ತಲೇ ಇದೆ. ಇದೀಗ ಸ್ಕಾಟಿಷ್ ಯೂಟ್ಯೂಬರ್‌ನ ವಿಡಿಯೊದಲ್ಲಿ ಮಹತ್ವದ ಸಂಗತಿಯೊಂದನ್ನು ಬಯಲಾಗಿದೆ. ಜ್ಯೋತಿಗೆ ಲಾಹೋರ್‌ನ (Lahore) ಅನಾರ್ಕಲಿ ಬಜಾರ್‌ನಲ್ಲಿ AK-47 ಹಿಡಿದ ಆರು ವ್ಯಕ್ತಿಗಳಿಂದ ಹೈ ಸೆಕ್ಯೂರಿಟಿ ವ್ಯವಸ್ಥೆ ಇತ್ತು. ಇದನ್ನು ಕಂಡು ಇಷ್ಟೊಂದು ಸೆಕ್ಯೂರಿಟಿ ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಸ್ಕಾಟಿಷ್ ಯೂಟ್ಯೂಬರ್ ಕ್ಯಾಲಮ್ ಮಿಲ್, ತಮ್ಮ ಕ್ಯಾಲಮ್ ಅಬ್ರಾಡ್ ಯೂಟ್ಯೂಬ್ ಚಾನೆಲ್‌ಗೆ ಕಂಟೆಂಟ್ ಕ್ರಿಯೇಟ್ ಮಾಡುವ ಸಲುವಾಗಿ, ಮಾರ್ಚ್ 2025ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಲಾಹೋರ್‌ನ ಅನಾರ್ಕಲಿ ಬಜಾರ್‌ನಲ್ಲಿ ಚಿತ್ರೀಕರಿಸಿದ ವೀಡಿಯೊದಲ್ಲಿ, “ನೋ ಫಿಯರ್” ಎಂದು ಬರೆದಿರುವ ಜಾಕೆಟ್ ಧರಿಸಿದ, ಗನ್ ಹಿಡಿದಿರುವ ಹಲವಾರು ವ್ಯಕ್ತಿಗಳು ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಜ್ಯೋತಿ ಮಲ್ಹೋತ್ರಾ ಕೂಡ ವೀಡಿಯೊ ಚಿತ್ರೀಕರಿಸುತ್ತಿದ್ದರು. ಕ್ಯಾಲಮ್ ತಾವು ಸ್ಕಾಟಿಷ್ ಯೂಟ್ಯೂಬರ್ ಎಂದು ಪರಿಚಯಿಸಿಕೊಂಡಾಗ, ಜ್ಯೋತಿ ಅವರಿಗೆ ಇದು ಪಾಕಿಸ್ತಾನಕ್ಕೆ ಮೊದಲ ಭೇಟಿಯೇ ಎಂದು ಕೇಳಿದ್ದಾರೆ. ಇದಕ್ಕೆ ಕ್ಯಾಲಮ್, “ಇಲ್ಲ, ಐದನೇ ಬಾರಿ” ಎಂದು ಉತ್ತರಿಸಿದ್ದಾರೆ. ಜ್ಯೋತಿ, ಕ್ಯಾಲಮ್‌ಗೆ ಭಾರತಕ್ಕೆ ಭೇಟಿ ನೀಡಿದ್ದೀರಾ ಎಂದು ಕೇಳಿ, ತಾನು ಭಾರತದಿಂದ ಬಂದಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಾರೆ. ಪಾಕಿಸ್ತಾನದ ಆತಿಥ್ಯದ ಬಗ್ಗೆ ಕೇಳಿದಾಗ, “ಇದು ಉತ್ತಮವಾಗಿದೆ” ಎಂದು ಜ್ಯೋತಿ ಉತ್ತರಿಸಿದ್ದಾರೆ.
ಜ್ಯೋತಿ ಮುಂದೆ ನಡೆದಾಗ, ಶಸ್ತ್ರಸಜ್ಜಿತ ವ್ಯಕ್ತಿಗಳು ಆಕೆಯೊಂದಿಗಿರುವುದನ್ನು ಕ್ಯಾಲಮ್ ಗಮನಿಸಿದ್ದಾರೆ. “ಆಕೆಯ ಜೊತೆಗೆ ಶಸ್ತ್ರಸಜ್ಜಿತ ವ್ಯಕ್ತಿಗಳಿದ್ದಾರೆ. ಇಷ್ಟೊಂದು ಭದ್ರತೆ ಏಕೆ? ಆಕೆಯ ಸುತ್ತ ಆರು ಗನ್‌ಮೆನ್‌ಗಳು ಇದ್ದಾರೆ” ಎಂದು ಅವರು ವಿಡಿಯೋದಲ್ಲಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಜ್ಯೋತಿಯೊಂದಿಗೆ ಇತರ ಕೆಲವು ಪ್ರವಾಸಿಗರಂತೆ ಕಾಣುವ ವ್ಯಕ್ತಿಗಳೂ ಕಾಣಿಸಿಕೊಂಡಿದ್ದಾರೆ.
ವಿಡಿಯೋದಿಂದ ಉದ್ಭವಿಸಿದ ಪ್ರಶ್ನೆಗಳು
ಸ್ಕಾಟಿಷ್ ಯೂಟ್ಯೂಬರ್ ಒಬ್ಬರೇ ತಿರುಗಾಡುವಾಗ, ಜ್ಯೋತಿ ಮಲ್ಹೋತ್ರಾ ಆರು AK-47 ಹಿಡಿದವರ ರಕ್ಷಣೆಯಲ್ಲಿ ಏಕೆ ಇದ್ದಾರೆ? ಆಕೆಯೊಂದಿಗೆ ಇರುವ ಇತರ ವ್ಯಕ್ತಿಗಳು ಯಾರು? ಶಸ್ತ್ರಸಜ್ಜಿತ ವ್ಯಕ್ತಿಗಳು ಸಮವಸ್ತ್ರದಲ್ಲಿರದಿದ್ದರೂ, ಅವರು ಸಾದಾ ಬಟ್ಟೆಯಲ್ಲಿ ಭದ್ರತಾ ಸಿಬ್ಬಂದಿಯಾಗಿರಬಹುದೇ ಎಂಬ ಪ್ರಶ್ನೆಗಳು ಮೂಡಿವೆ.
ಗೂಢಚಾರಿಕೆ ಆರೋಪ
ಸ್ಕಾಟಿಷ್ ಯೂಟ್ಯೂಬರ್‌ನ ವಿಡಿಯೋ, ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನದಲ್ಲಿ ಪಡೆದ ಸ್ವಾಗತ ಮತ್ತು ಪ್ರವೇಶದ ಬಗ್ಗೆ ಅನುಮಾನಗಳನ್ನು ಹೆಚ್ಚಿಸಿವೆ. ಆಕೆಯನ್ನು ಉನ್ನತ ಮಟ್ಟದ ಸಮಾರಂಭಗಳಿಗೆ ಆಹ್ವಾನಿಸಲಾಗಿತ್ತು, ಅಲ್ಲಿ ಆಕೆ ಪಾಕಿಸ್ತಾನದ ಭದ್ರತೆ ಮತ್ತು ಗುಪ್ತಚರ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಭಾರತಕ್ಕೆ ಮರಳಿದ ನಂತರವೂ ಆಕೆ ಅವರೊಂದಿಗೆ ಸಂಪರ್ಕದಲ್ಲಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಜ್ಯೋತಿಯ ಡಿಜಿಟಲ್ ಸಾಧನಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ, ಆಕೆ ಯಾವ ಮಾಹಿತಿಯನ್ನು ಪಾಕಿಸ್ತಾನದ ಅಧಿಕಾರಿಗಳಿಗೆ ರವಾನಿಸಿದ್ದಾರೆ ಎಂಬುದನ್ನು ತನಿಖೆ ಮಾಡುತ್ತಿದ್ದಾರೆ.
ಈ ಸುದ್ದಿಯನ್ನು ಓದಿ: YouTuber Jyoti Malhotra: ಪಾಕ್‌ನೊಂದಿಗೆ ನಂಟು, ದೇಶಕ್ಕೆ ದ್ರೋಹ….. ಡೈರಿಯಿಂದ ಬಯಲಾಯ್ತು ಜ್ಯೋತಿ ಮಲ್ಹೋತ್ರಾ ಗುಟ್ಟು!
ಜ್ಯೋತಿ ಮಲ್ಹೋತ್ರಾ ಅವರ ಆರ್ಥಿಕ ಸ್ಥಿತಿಯನ್ನೂ ಪೊಲೀಸರು ತನಿಖೆಗೊಳಪಡಿಸಿದ್ದಾರೆ. ಆಕೆಯ ಆದಾಯಕ್ಕೆ ಸರಿಹೊಂದದ ವೈಭವದ ಜೀವನಶೈಲಿಯನ್ನು ಆಕೆ ನಡೆಸುತ್ತಿದ್ದರು. ಆಕೆ ಯಾವಾಗಲೂ ವಿಮಾನದಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದರು, ಐಷಾರಾಮಿ ಹೊಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರು ಮತ್ತು ಉನ್ನತ ದರ್ಜೆಯ ರೆಸ್ಟೋರೆಂಟ್‌ಗಳಲ್ಲಿ ಊಟಮಾಡುತ್ತಿದ್ದರು. ಪಾಕಿಸ್ತಾನಕ್ಕೆ ಆಕೆಯ ಭೇಟಿಯು “ಪ್ರಾಯೋಜಿತ ಪ್ರವಾಸ”ವಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಪಾಕಿಸ್ತಾನದಿಂದ ವಿಐಪಿ ಆತಿಥ್ಯ ಪಡೆದು ಮರಳಿದ ಕೆಲವೇ ದಿನಗಳಲ್ಲಿ, ಜ್ಯೋತಿ ಚೀನಾಕ್ಕೆ ಪ್ರವಾಸ ಕೈಗೊಂಡಿದ್ದರು. ಚೀನಾದಲ್ಲಿಯೂ ಆಕೆ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸಿ, ದುಬಾರಿ ಆಭರಣದ ಅಂಗಡಿಗಳಿಗೆ ಭೇಟಿ ನೀಡಿದ್ದರು ಎಂದು ವರದಿಯಾಗಿದೆ.
ಜ್ಯೋತಿ ಮಲ್ಹೋತ್ರಾ ಅವರ ಚಟುವಟಿಕೆಗಳು ಮತ್ತು ಪಾಕಿಸ್ತಾನದೊಂದಿಗಿನ ಸಂಪರ್ಕದ ಬಗ್ಗೆ ಪೊಲೀಸರು ಗಂಭೀರ ತನಿಖೆ ನಡೆಸುತ್ತಿದ್ದಾರೆ. ಆಕೆಯ ಆರ್ಥಿಕ ವ್ಯವಹಾರಗಳು, ಸಂಪರ್ಕಗಳು ಮತ್ತು ಪಾಕಿಸ್ತಾನದಿಂದ ಪಡೆದ ಸೌಲಭ್ಯಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.