ನವದೆಹಲಿ: ಪ್ರಸಕ್ತ ಐಪಿಎಲ್ 2025ರಲ್ಲಿ ಒಂದು ಶತಕ ಸಹಿತ 539 ರನ್ ಬಾರಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರು ಮತ್ತೆ ಭಾರತ ಟಿ20 ಕ್ರಿಕೆಟ್ ತಂಡಕ್ಕೆ ಮರಳುವ(rahul t20 comeback) ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ಟಿ20 ಕ್ರಿಕೆಟ್ ವಿಶ್ವಕಪ್ ಆಡುವತ್ತ ನನ್ನ ಚಿತ್ತವಿದೆ ಎಂದು ರಾಹುಲ್ ಹೇಳಿದ್ದಾರೆ.
ಮುಂದಿನ ವರ್ಷ ಟಿ20 ವಿಶ್ವಕಪ್ ಟೂರ್ನಿಗೆ ಭಾರತವೇ ಆತಿಥ್ಯ ವಹಿಸಲಿದೆ. ರಾಹುಲ್ ಅವರು ಮೂರು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. ಆ ಟೂರ್ನಿಯಲ್ಲಿ ಭಾರತ ತಂಡವು ಸೆಮಿಫೈನಲ್‌ನಲ್ಲಿ ಸೋತಿತ್ತು. ಇದಾದ ಬಳಿಕ ಅವರು ಭಾರತ ಪರ ಟಿ20 ಪಂದ್ಯ ಆಡಿಲ್ಲ. ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಆಡುವ ಅವಕಾಶದ ನಿರೀಕ್ಷೆಯಲ್ಲಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ.
‘ಕಳೆದ ಕೆಲವು ವರ್ಷಗಳಿಂದ ನಾನು ಭಾರತ ಟಿ20 ತಂಡದಲ್ಲಿ ಆಡಿಲ್ಲ. ಈ ಅವಧಿಯಲ್ಲಿ ನಾನು ಯಾವ ಹಂತಗಳಲ್ಲಿ ಸುಧಾರಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಯೋಚಿಸಲು ಅವಕಾಶ ದೊರೆಯಿತು. ಸದ್ಯ ನಾನು ಈಗ ಆಡುವ ರೀತಿಯನ್ನು ಮುಂದುವರಿಸುತ್ತೇನೆ. ಅದನ್ನೇ ಆನಂದಿಸುತ್ತೇನೆ’ ಎಂದು ರಾಹುಲ್ ಹೇಳಿದರು.
ಇದನ್ನೂ ಓದಿ ಜೈಸ್ವಾಲ್-ರಾಹುಲ್ ಓಪನರ್ಸ್? ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್ XI ವಿವರ!
ಬಾಂಗ್ಲಾ ಸರಣಿಗೆ ಆಯ್ಕೆ?
ಮೂಲಗಳ ಪ್ರಕಾರ ಮುಂಬರುವ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ರಾಹುಲ್ ಆಯ್ಕೆಯಾಲಿದ್ದಾರೆ ಎಂದು ತಿಳಿದುಬಂದಿದೆ. ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಉಭಯ ಆಟಗಾರರ ದಿಢೀರ್ ನಿವೃತ್ತಿಯಿಂದ ಅನುಭವಿ ಆಟಗಾರರ ಕೊರತೆ ಕೂಡ ತಂಡದಲ್ಲಿದೆ. ಸದ್ಯ ಈ ಕೊರತೆಯನ್ನು ನೀಗಿಸುವ ಸಾಮರ್ಥ್ಯ ಇರುವುದೆಂದರೆ ಅದು ರಾಹುಲ್‌ಗೆ ಮಾತ್ರ. ಕೋಚ್ ಗಂಭೀರ್ ಒಲವು ಕೂಡ ರಾಹುಲ್ ಮೇಲಿದೆ ಎನ್ನಲಾಗಿದೆ.
ರಾಹುಲ್ ಇದುವರೆಗೆ ಭಾರತ ಪರ 72 ಟಿ20 ಪಂದ್ಯ ಆಡಿ 2265 ರನ್ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 22 ಅರ್ಧಶತಕ ಒಳಗೊಂಡಿದೆ.