Karunadu Studio

ಕರ್ನಾಟಕ

Harish Kera Column: ಮತ್ತೆ ಮಳೆ ಹೊಯ್ಯುತಿದೆ, ಎಲ್ಲ ನೆನಪಾಗುತಿದೆ – Kannada News | It’s raining again,


ಕಾಡುದಾರಿ

ಇಂಗ್ಲಿಷ್‌ನಲ್ಲಿ ‘ಪೆಟ್ರಿಕೋರ್’ ( petrichor ) ಎನ್ನುವ ಒಂದು ಪದವಿದೆ. ಕನ್ನಡದ ‘ಮಣ್ಣಿನ ವಾಸನೆ’ ಸಂಸ್ಕೃತದ ‘ಮೃದ್ಗಂಧ’ ಎಂಬ ಅರ್ಥ ಹೊರಡಿಸುವ ಪದ. ನಾವು ಮಣ್ಣಿಗೆ ನೀರು ಸುರಿದರೆ ಈ ಪರಿಮಳ ಬರುವುದಿಲ್ಲ. ಮೊದಲ ಮಳೆ ಮಣ್ಣಿಗೆ ಬೀಳುವ ಆ ಕ್ಷಣದಲ್ಲಿ ಈ ಸುಗಂಧ ಮೇಲೇಳುತ್ತದೆ. ಎದ್ದು ನಮ್ಮ ನಾಸಿಕವನ್ನು ಹೊಕ್ಕು ಮೈಯನ್ನು ವ್ಯಾಪಿಸುತ್ತದೆ. ಮನಸ್ಸನ್ನು ವ್ಯಾಕುಲ ಗೊಳಿಸುತ್ತದೆ. ಅದಕ್ಕೇ ಮೊದಲ ಮಳೆಗೂ ಮಣ್ಣಿನ ವಾಸನೆಗೂ ನೆನಪುಗಳಿಗೂ ಸಂಬಂಧ ಬೆಸೆದು ಕೊಂಡಿದೆ. ಬಾಲ್ಯದ ನೆನಪುಗಳು ರಂಜಕದ ಕಿಡಿ ತಾಕಿದ ಹೂಕುಂಡದಂತೆ ಧಗ್ಗನೆ ಏಳುತ್ತವೆ. ‘ಮತ್ತೆ ಮಳೆ ಹೊಯ್ಯುತಿದೆ, ಎಲ್ಲ ನೆನಪಾಗುತಿದೆ, ಸುಖ ದುಃಖ ಬಯಕೆ ಭಯ, ಒಂದೆ ಎರಡೆ’ ಎನ್ನುವುದು ಯು.ಆರ್ ಅನಂತಮೂರ್ತಿ ಅವರ ಕವಿತೆಯ ಸಾಲುಗಳು. ಇದು ಎಲ್ಲರ ಅನುಭವವೂ ಹೌದು.

ಮೃದ್ಗಂಧವೆಂಬ ಪದವೇನೋ ಭಾರತೀಯರಿಗೆ ಪರಿಚಿತ. ಆದರೆ ‘ಪೆಟ್ರಿಕೋರ್’ ಎಬ ಪದವೂ ಇದರ ಹಿಂದಿರುವ ವಿಜ್ಞಾನವೂ ತೀರ ಹಳತಲ್ಲ. ಮಳೆಗೆ ಯಾವುದೇ ವಾಸನೆ ಇಲ್ಲ ಎಂಬುದು ನಿಜ. ಆದರೆ ಮಳೆ ಬೀಳುವ ಕೆಲವೇ ಕ್ಷಣಗಳ ಮೊದಲು- ಬಿದ್ದ ಆ ಕ್ಷಣದಲ್ಲಿ, ಪೆಟ್ರಿಕೋರ್ ಎಂದು ಕರೆಯ ಲ್ಪಡುವ ಮಣ್ಣಿನ ವಾಸನೆ ಗಾಳಿಯಲ್ಲಿ ವ್ಯಾಪಿಸುತ್ತದೆ.

ಮಸ್ಕಿ, ತಾಜಾ, ಆಹ್ಲಾದಕರ ಪರಿಮಳವಿದು. ಆಸ್ಟ್ರೇಲಿಯಾದ ವಿಜ್ಞಾನಿಗಳು ಮೊದಲು 1964ರಲ್ಲಿ ಪೆಟ್ರಿಕೋರ್ ಉಂಟಾಗುವ ಬಗೆಯನ್ನು ದಾಖಲಿಸಿದರು. ಮೆಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯ ವಿಜ್ಞಾನಿಗಳು 2010ರ ದಶಕದಲ್ಲಿ ಈ ಪ್ರಕ್ರಿಯೆಯನ್ನು ಮತ್ತಷ್ಟು ಅಧ್ಯಯನ ಮಾಡಿದರು.

ಇದನ್ನೂ ಓದಿ: Harish Kera Column: ಬೆಂಗಳೂರಿನ ಮಳೆಗೊಂದು ಫಿಲಾಸಫಿ

ಪೆಟ್ರಿಕೋರ್ ಉಂಟಾಗುವುದು ಕೆಲವು ಪರಿಮಳಯುಕ್ತ ರಾಸಾಯನಿಕ ಸಂಯುಕ್ತಗಳ ಸಂಯೋಜನೆ ಯಿಂದ. ಕೆಲವು ಸಸ್ಯಗಳು ಉಂಟುಮಾಡಿ ಗಾಳಿಗೆ ಬಿಡುವ ತೈಲಾಂಶದಿಂದ. ಪೆಟ್ರಿಕೋರ್‌ಗೆ ಪ್ರಮುಖ ಕೊಡುಗೆ ನೀಡುವವರು ಆಕ್ಟಿನೊಬ್ಯಾಕ್ಟೀರಿಯಾ. ಈ ಸಣ್ಣ ಸೂಕ್ಷ್ಮ ಜೀವಿಗಳು ಹೆಚ್ಚಾಗಿ ಎಲ್ಲ ಕಡೆ ಕಂಡುಬರುತ್ತವೆ. ಇವು ಸತ್ತ ಅಥವಾ ಕೊಳೆಯುತ್ತಿರುವ ಸಾವಯವ ಪದಾರ್ಥಗಳನ್ನು ಸರಳ ರಾಸಾಯನಿಕ ಸಂಯುಕ್ತಗಳಾಗಿ ವಿಭಜಿಸುತ್ತವೆ. ನಂತರ ಸಸ್ಯಗಳು ಮತ್ತು ಇತರ ಜೀವಿಗಳಿಗೆ ಪೋಷಕಾಂಶಗಳಾಗುತ್ತವೆ.

ಇವುಗಳ ಚಟುವಟಿಕೆಯ ಉಪಉತ್ಪನ್ನವೆಂದರೆ ಜಿಯೋಸ್ಮಿನ್ ಎಂಬ ಸಾವಯವ ಸಂಯುಕ್ತ. ಜಿಯೋಸ್ಮಿನ್ ಒಂದು ರೀತಿಯ ಆಲ್ಕೋಹಾಲ. ಆಲ್ಕೋಹಾಲ್ ಅಣುಗಳು ಬಲವಾದ ಪರಿಮಳ ಹೊಂದಿರುವುದು ಎಣ್ಣೆಪ್ರಿಯರಿಗೆ ಗೊತ್ತಿರುವ ವಿಷಯ. ಈ ಜಿಯೋಸ್ಮಿನ್ ಎಷ್ಟೇ ಕನಿಷ್ಠ ಪ್ರಮಾಣ ದಲ್ಲಿದ್ದರೂ ಜನರ ಮೂಗಿಗೆ ತಲುಪುವಂತೆ ಮಾಡುವುದು ಇವುಗಳ ಸಂಕೀರ್ಣ ರಾಸಾಯನಿಕ ರಚನೆ. ಗಾಳಿಯ ಟ್ರಿಲಿಯನ್ ಅಣುಗಳ ನಡುವೆ ಎಲ್ಲಾ ಇರುವ ಜಿಯೋಸ್ಮಿನ್‌ ಗಳನ್ನು ನಮ್ಮ ಮೂಗು ಪತ್ತೆ ಮಾಡಬಹುದು.

ಈ ಜಿಯೋಸ್ಮಿನ್ ಉಂಟಾಗುವ ಬಗೆ ಹೇಗೆ? ಬೇಸಗೆಯ ಸುದೀರ್ಘ ಶುಷ್ಕ ಅವಧಿಯಲ್ಲಿ ಆಕ್ಟಿನೋ ಬ್ಯಾಕ್ಟೀರಿಯಾಗಳ ಕೊಳೆಯುವಿಕೆಯ ಪ್ರಮಾಣ ನಿಧಾನ. ಮಳೆ ಬೀಳುವ ಮೊದಲು ಗಾಳಿ ಹೆಚ್ಚು ಆರ್ದ್ರವಾಗುತ್ತದೆ. ನೆಲ ತೇವವಾಗಲು ಆರಂಭಿಸುತ್ತದೆ. ಇದು ಆಕ್ಟಿನೋಬ್ಯಾಕ್ಟೀರಿಯಾದ ಚಟು ವಟಿಕೆಯನ್ನು ವೇಗಗೊಳಿಸುತ್ತದೆ. ಆಗ ಹೆಚ್ಚಿನ ಜಿಯೋಸ್ಮಿನ್ ರೂಪುಗೊಳ್ಳುತ್ತದೆ.

ಮಳೆಹನಿಗಳು ನೆಲದ ಮೇಲೆ ಬಿದ್ದಾಗ, ವಿಶೇಷವಾಗಿ ಸಡಿಲವಾದ ಮಣ್ಣು, ರಂಧ್ರಗಳಿರುವ ಕಲ್ಲು ಗಳ ಮೇಲ್ಮೈಗೆ ಸುರಿದಾಗ, ಅವು ಏರೋಸಾಲ್ ಗಳು ಎಂಬ ಸಣ್ಣ ಕಣಗಳನ್ನು ಮೇಲಕ್ಕೆ ಸಿಡಿಸು ತ್ತವೆ. ನೆಲದಲ್ಲಿರುವ ಅಥವಾ ಮಳೆಹನಿಯೊಳಗೆ ಕರಗಿರುವ ಜಿಯೋಸ್ಮಿನ್ ಮತ್ತು ಇತರ ಪೆಟ್ರಿ ಕೋರ್ ಸಂಯುಕ್ತಗಳು ಏರೋಸಾಲ್ ರೂಪದಲ್ಲಿ ಬಿಡುಗಡೆಯಾಗುತ್ತವೆ. ಗಾಳಿಯಲ್ಲಿ ಚಿಮ್ಮುತ್ತ ಸಾಗುತ್ತವೆ. ಜೋರು ಮಳೆ ಸುರಿಯಲಿದ್ದಾಗ ಪೆಟ್ರಿಕೋರ್ ಪರಿಮಳ ಗಾಳಿಯಲ್ಲಿ ವೇಗ ವಾಗಿ ಚಲಿಸಿ ಮಳೆ ಶೀಘ್ರದ ಬರಲಿದೆ ಎಂದು ನಮ್ಮನ್ನು ಎಚ್ಚರಿಸುತ್ತದೆ.

ಪೆಟ್ರಿಕೋರ್ ಎಂಬ ಪದವನ್ನು ಸೃಷ್ಟಿಸಿದ್ದೂ ವಿಜ್ಞಾನಿಗಳೇ. ಇದು ಪೆಟ್ರಾ ಮತ್ತು ಕೋರ್ ಎಂಬ ಗ್ರೀಕ್ ಪದಗಳ ಸಂಯುಕ್ತ. ಪೆಟ್ರಾ ಎಂದರೆ ಕಲ್ಲು. ಕೋರ್ ಎಂದರೆ ದೇವತೆಗಳ ಜೀವದ್ರವ್ಯ ಅಥವಾ ರಕ್ತ. ಒಂದು ನೆಲದ್ದು- ಇನ್ನೊಂದು ಆಕಾಶದ್ದು. ಎರಡೂ ಸೇರಿ ನಮ್ಮ ಮೂಗಿಗೆ ಆಹ್ಲಾದಕರವಾದ ಪರಿಮಳದ ಸೃಷ್ಟಿ. ಆಕಾಶದಿಂದ ಸುರಿಯುವ ಮಳೆಯ ಮೋಡವೂ ಈ ಭೂಮಿ, ಸೂರ್ಯ, ತಾಪ, ಎಲ್ಲದರಿಂದ ಜನಿಸಿದ್ದು.

ನೆಲವನ್ನು ಮನುಷ್ಯನ ಮೂಲಗುಣಕ್ಕೂ ಆಕಾಶವನ್ನು ಜ್ಞಾನಕ್ಕೂ ನಾವು ಸಂಕೇತಿಸುವುದು ರೂಢಿಯಾಗಿ ಬಂದಿದೆ. ಮೊದಲ ಮಳೆ ಹೀಗೆ ಮನುಷ್ಯನ ಅನುಭವವನ್ನೂ ನೆನಪು ಅರಿವು ಗಳನ್ನೂ ಬೆಸೆಯುತ್ತದೆ ಎಂದು ಅರ್ಥ ಮಾಡಿಕೊಳ್ಳಬಹುದು. ಇದೆಲ್ಲ ವೈಜ್ಞಾನಿಕ ವಿವರಣೆಗಳು ಮೊದಲ ಮಳೆಯ ಪರಿಮಳದ ವಿಚಾರದಲ್ಲಿ ಸರಿ. ಆದರೆ ಮಣ್ಣಿನ ಗಂಧಕ್ಕೂ ನೆನಪುಗಳಿಗೂ ಇರುವ ಸಂಬಂಧವೇನು? ಈ ವಿಚಾರದಲ್ಲಿ ವಿಜ್ಞಾನ ಸ್ವಲ್ಪ ಹಿಂದೆ ನಿಂತು, ಮನೋವಿಜ್ಞಾನವೇ ಹೆಚ್ಚು ಪಾತ್ರ ವಹಿಸಬಹುದು. ಆದರೆ ಇದೂ ಹೊಸದಲ್ಲ.

ಯಾಕೆಂದರೆ ಪರಿಮಳಕ್ಕೂ ನೆನಪುಗಳಿಗೂ ಬೆಂಬಿಡದ ನಂಟು. ಹಾಗೆ ನೋಡಿದರೆ ನಮ್ಮ ಪಂಚೇಂದ್ರಿಯಗಳಿಗೂ ನೆನಪುಗಳಿಗೂ ಗಾಢ ಸಂಬಂಧವಿದೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ- ಇವು ಐದೂ ಕೂಡ ನೆನಪುಗಳನ್ನು ಉದ್ದೀಪಿಸಬಲ್ಲವು. ಇಂದು ತಿಂದ ಮೈಸೂರುಪಾಕು ಹತ್ತು ವರ್ಷಗಳ ಹಿಂದೆ ತಿಂದ ಮೈಸೂರುಪಾಕನ್ನು ನೆನಪಿಸಬಲ್ಲದು. ಆದರೆ ಪರಿಮಳಕ್ಕೂ ನೆನಪಿಗೂ ಇರುವ ನಂಟಿನ ಗಾಢತೆ ಬೇರೊಂದು ಅರಿವಿನಲ್ಲಿ ಇಲ್ಲವಂತೆ.

ವಾಸನೆಗೆ ಸಂಬಂಧಿಸಿದ ನೆನಪುಗಳು ದೃಶ್ಯ ನೆನಪುಗಳಿಗಿಂತ ಹೆಚ್ಚಿನ ಭಾವನೆಗಳನ್ನು ಹೊಂದಿರು ತ್ತವೆ ಎಂಬುದು ಈ ಬಗ್ಗೆ ಸಂಶೋಧನೆ ಮಾಡಿದವರ ಮಾತು. ನಿಮ್ಮ ಮೆದುಳು ನಿಮ್ಮ ಇತರ ಇಂದ್ರಿಯಗಳಿಂದ ಪಡೆಯುವ ಅರಿವನ್ನೂ ವಾಸನೆಯನ್ನೂ ಸ್ವೀಕರಿಸುವ ಬಗೆ ಭಿನ್ನ. ದೃಷ್ಟಿ, ಧ್ವನಿ ಮತ್ತು ಸ್ಪರ್ಶದ ಬಗ್ಗೆ ಮಾಹಿತಿಯನ್ನು ಪ್ರಸಾರ ಮಾಡುವ ನರ ಸಂಕೇತಗಳು ಸಾಮಾನ್ಯವಾಗಿ ನಿಮ್ಮ ಮೆದುಳಿನ ಭಾಗವಾದ ಥಾಲಮಸ್ ಮೂಲಕ ಹೋಗುತ್ತವೆ.

ಥಾಲಮಸ್ ಎಡೆಯಿಂದ ಸಂಕೇತಗಳನ್ನು ಸ್ವೀಕರಿಸುವ ಮತ್ತು ಆ ಸಂಕೇತಗಳು ಎಲ್ಲಿಗೆ ಹೋಗ ಬೇಕೆಂದು ನಿರ್ಧರಿಸುವ ರಿಲೇ ಸ್ಟೇಷನ್ ಇದ್ದಂತೆ. ವಾಸನೆಯ ಸಂಕೇತಗಳು ಥಾಲಮಸ್ ಅನ್ನು ಬೈಪಾಸ್ ಮಾಡಿ ನೇರವಾಗಿ ಮೆದುಳಿನ ಭಾಗಗಳಾದ ಅಮಿಗ್ಡಲಾ ಮತ್ತು ಹಿಪೊಕ್ಯಾಂಪಸ್‌ಗೆ ಹೋಗುತ್ತವಂತೆ. ಮೆದುಳಿನಲ್ಲಿರುವ ಈ ವಿಶಿಷ್ಟ ವಯರಿಂಗ್, ನಮ್ಮ ವಿಕಾಸದ ಫಲ.

ಪರಿಮಳ ಅಥವಾ ವಾಸನೆ ಮನುಷ್ಯನ ಅತ್ಯಂತ ಹಳೆಯ ಸಂಗಾತಿ. ಮನುಷ್ಯ ಬೇಟೆಯಾಡುತ್ತಿದ್ದ ಕಾಲದಲ್ಲಿ ಅವನಿಗೆ ಆಹಾರ ಗಳಿಸಲು, ಅಪಾಯ ಗುರುತಿಸಲು ಇದರದೇ ನೆರವು. ಹಾಗೇ ಅದು ವಿಕಸನಗೊಂಡಿದೆ. ಹಸಿ ಮಾಂಸವನ್ನು ತಿನ್ನುತ್ತಿದ್ದ ಮಾನವ ಬೆಂಕಿಯಲ್ಲಿ ಅದನ್ನು ಬೇಯಿಸಿ ಸೇವಿಸಲು ಆರಂಭಿಸಿದಾಗ ಅದರ ವಿಶಿಷ್ಟ ವಾಸನೆಯನ್ನೂ ರುಚಿಯನ್ನೂ ಅದು ಬದಲಾದು ದನ್ನೂ ಗುರುತಿಸಿದ.

ಮಾಂಸ ಪಕ್ವವಾಗಿದೆಯಾ ಎಂಬುದು ನೋಟದಗಲೀ ಸ್ಪರ್ಶದಲ್ಲಾಗಲೀ ಗೊತ್ತಾಗುವುದಕ್ಕಿಂತ ಪರಿಣಾಮಕಾರಿಯಾಗಿ ಅದರ ಪರಿಮಳ ತಿಳಿಸುತ್ತಿತ್ತು. ಭಾರಿ ಮಳೆ ಬರಲಿದೆ, ಗುಹೆ ಸೇರಿಕೋ ಎಂದು ಪೆಟ್ರಿಕೋರ್ ತಿಳಿಸುತ್ತಿತ್ತು. ನೂರಾರು ಚಿಂಪಾಂಜಿಗಳು ಗುಂಪಾಗಿ ಒಟ್ಟಿಗೆ ಬದುಕುತ್ತಿದ್ದಾಗ ಕತ್ತಲಿ ನಲ್ಲಿ ತನ್ನ ಸಂಗಾತಿ ಇದೇ ಎಂದು ತನುಗಂಧದಿಂದ ಗುರುತಿಸಲು ಇನ್ನೊಂದು ಚಿಂಪಾಂಜಿ ಕಲಿಯುತ್ತಾ ಕಲಿಯುತ್ತಾ ಹೋಮೋ ಸೇಪಿಯನ್ ಆಯಿತು.

ಅದು ಸರಿ, ಪೆಟ್ರಿಕೋರ್ ಜೊತೆಗೆ, ಜೋರಾಗಿ ಮಳೆ ಸುರಿಯುವಾಗ ಬಾಲ್ಯದ ನೆನಪುಗಳು ಉಕ್ಕುಕ್ಕಿ ಬರುತ್ತವಲ್ಲ ಯಾಕೆ? ಮತ್ತೆ ವಿಜ್ಞಾನದ ವಿಷಯ ಎತ್ತದೇ ಇರುವಂತಿಲ್ಲ. ಮನುಷ್ಯನ ಎಲ್ಲ ಜ್ಞಾನ ಹಾಗೂ ಅರಿವಿನ ಇಂದ್ರಿಯಗಳು ರೂಪು ಪಡೆಯವುದೇ ಬಾಲ್ಯದಲ್ಲಿ. ಅವನು ನೋಡಿದ ಮೊದಲ ಮಳೆ, ಆಘ್ರಾಣಿಸಿದ ಮಣ್ಣಿನ ಪರಿಮಳ, ನೋಡಿದ ಮಳೆಯ ರಿಂಗಣ, ಸಿಡಿಲಿನ ಸಪ್ಪಳ, ನೆಲದ ತೇವ ಎಲ್ಲವೂ ಅವನಲ್ಲಿ ಸೇರಿಕೊಂಡಿರುತ್ತದೆ.

ಮಗು ಮೈಯ ಪರಿಮಳದಿಂದಲೇ ತಾಯಿಯ ಇರವನ್ನು ಗೊತ್ತು ಹಚ್ಚುವುದು. ಆದರೆ, ವಾಸನೆ ಯಿಂದಲೇ ಮುಂದಿನ ಬದುಕಿಗೆ ಬೇಕಾದ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕಿದ್ದ ಆದಿಮಾನವನ ಗುಣ ಇನ್ನೂ ಮಗುವಿನಲ್ಲಿ ಪೂರ್ತಿ ಮಾಯವಾಗಿರುವುದಿಲ್ಲ. ಮುಂದೆ ಬೆಳೆದಂತೆಲ್ಲ ಆತ ಅನ ವಶ್ಯಕ ಅರಿವುಗಳನ್ನು ಆಚೆಗಿಡುವುದನ್ನೂ ಆಧುನಿಕ ಬದುಕಿಗೆ ಬೇಕಾದ್ದನ್ನು ಮಾತ್ರ ಗಟ್ಟಿಗೊಳಿಸಿ ಕೊಳ್ಳುವುದನ್ನೂ ಕಲಿಯುತ್ತಾನೆ.

ಆದರೆ ಬಾಲ್ಯದ ನೆನಪುಗಳು ಆ ಗುಹಾಂತರ ಬದುಕಿನ ಮನುಷ್ಯನ ಅರಿವು- ಅನುಭವದ ಜಾಲದ ನೇರ ಫಲ. ಪೆಟ್ರಿಕೋರ್‌ನ ನೆನಪುಗಳಿಗೆ ರೊಮ್ಯಾಂಟಿಕ್ ಆಯಾಮವೂ ಉಂಟು. ಇದು ಮಾತ್ರ ನಮ್ಮ ಸಿನಿಮಾ ಕಲ್ಚರ್‌ನ ಪ್ರಭಾವ ಇರಬಹುದು. ‘ಮಂಜಿಲ್’ ಫಿಲಂನಲ್ಲಿ ಅಮಿತಾಭ್ ಬಚ್ಚನ್ ಮತ್ತು ಮೌಸಮಿ ಚಟರ್ಜಿ ‘ರಿಮ್ ಜಿಮ್ ಗಿರೆ ಸಾವನ್, ಸುಲಗ್ ಸುಲಗ್ ಜಾಯೆ ಮನ್’ ಎಂದು ಹಾಡುತ್ತ ಮುಂಬಯಿಯ ಸಮುದ್ರ ದಡದಲ್ಲಿ ಮಳೆಯಲ್ಲಿ ನೆನೆಯುತ್ತ ಓಡಾಡುವುದನ್ನು ನೀವು ಮರೆತಿರಲಿಕ್ಕಿಲ್ಲ.

ಇಲ್ಲಿ ದೇವರಾಣೆಗೂ ನಾನು ವಿಜ್ಞಾನವನ್ನು ತರುವುದಿಲ್ಲ. ಇದು ಶುದ್ಧಾಂಗ ಮನಸ್ಸಿಗೇ ಸಂಬಂಧ ಪಟ್ಟ, ಅದಕ್ಕೆ ಮಾತ್ರ ಗೊತ್ತಿರಬಹುದಾದ ನಿಗೂಢ. ಮಳೆ ನಮ್ಮಲ್ಲಿ ಕೋಮಲ ರಾಗವನ್ನು ಉದ್ದೀಪಿ ಸುವುದು ಯಾಕೆ ಅಂತ ಹೇಳುವುದಾದರೂ ಹೇಗೆ. ಅಥವಾ ಹಾಗೊಂದು ವೇಳೆ ಅದನ್ನು ವಿವರಿಸಲು ಹೋಗುವ ವಿಜ್ಞಾನಿಯನ್ನು ಪಾಖಂಡಿಯೆಂದು ನೀವು ಕರೆದರೆ ನಾನು ಆಕ್ಷೇಪಿಸಲಾರೆ.

ಮಾತು ಎಲ್ಲಿಂದ ಎಲ್ಲಿಗೋ ಹೋಯಿತು. ಮಳೆಯ ಪರಿಮಳ, ಮಣ್ಣಿನ ಪರಿಮಳ ಇರುವುದೇ ಹಾಗೆ. ಅದು ಒಂದು ಕ್ಷಣ ನಮ್ಮ ಬಾಲ್ಯದ ತೊದಲು ಹೆಜ್ಜೆಗಳನ್ನೂ ತಾಯಿ ಪಡಸಾಲೆಯಲ್ಲಿ ಕೈಹಿಡಿದು ನಡೆಸುತ್ತಿದ್ದುದನ್ನೂ ನೆನಪಿಸುವುದು. ಇನ್ನೊಂದು ಕ್ಷಣದಲ್ಲಿ ಮತ್ತಷ್ಟು ಮಿದು ಕೈಯೊಂದು ನಿಮ್ಮ ಕೈಗೆ ಬೆಸೆದ ಹರೆಯದ ರೋಮಾಂಚನದ ಮಿಡಿತವನ್ನೂ ಉದ್ದೀಪಿಸುವುದು. ಎಂದೋ ಸವಿದ ರಾಗಿ ಅಂಬಲಿಯ ಸ್ಮರಣೆಯ ಜೊತೆಗೆ ಪಾಳು ಗುಡಿಯಲ್ಲಿ ಯಾರೂ ಕಾಣದಂತೆ ಕದ್ದು ಕೊಟ್ಟ ಮೊದಲ ಸಿಹಿಮುತ್ತನ್ನೂ ಸ್ಮೃತಿಗೆ ತಂದು ರೋಮಾಂಚನಗೊಳಿಸುವುದು.

ಮನೆಗೆ ನುಗ್ಗಿದ ನೆರೆ ನೀರಿನ ಭೀಷಣ ನೆನಪಿನ ಜೊತೆಗೆ, ಕಾಲೇಜಿನಿಂದ ಒಂದೇ ಕೊಡೆಯ ಅಡಿಯಲ್ಲಿ ಜೊತೆಗೇ ನಡೆದುಬಂದ ಎರಡು ಜೋಡಿ ಕಾಲುಗಳನ್ನೂ ನೆನಪಿಸುವುದು. ಇದೆಲ್ಲವೂ ನಮ್ಮ ಬದುಕನ್ನು ಇನ್ನಷ್ಟು ಸುಗಂಧಯುಕ್ತವಾಗಿಸಲು ಈ ಭೂಮಿ ಮತ್ತು ಬಾನು ಹೂಡಿದ ಒಳಸಂಚೇ ಇರಬೇಕು.



Source link

ADMIN

About Author

Leave a comment

Your email address will not be published. Required fields are marked *

You may also like

ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
ಕರ್ನಾಟಕ

ನಿಮ್ಮ ವೃತ್ತಿಜೀವನವನ್ನು ನಿರ್ಮಿಸಲು ಮತ್ತು ನಿಮ್ಮ ಭವಿಷ್ಯವನ್ನು ರೂಪಿಸುವಲ್ಲಿ ತಂತ್ರಜ್ಞಾನವನ್ನು ನಿಮ್ಮ ಮಾರ್ಗದರ್ಶಕ ಆಗಿ ಸ್ವೀಕರಿಸಿ

  • September 16, 2024
ಧಾರವಾಡ ಪ್ರಸ್ತುತ ಕಾಲದಲ್ಲಿ ತಂತ್ರಜ್ಞಾನದ ಬದಲಾಗುತ್ತಿರುವ ಮುಖ ಮತ್ತು ಇಂಜಿನಿಯರಗಳು, ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುವ ಅಗತ್ಯವಾಗಿದೆ ಎಂದು , ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ
Translate »