ಚಂಡೀಗಢ: ಇಲ್ಲಿನ ಮುಲ್ಲನ್‌ಪುರದ ಮಹಾರಾಜ ಯದವೀಂದ್ರ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು (RCB vs PBKS) ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ (Rajat Patidar) ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ.
ಗಾಯದ ಕಾರಣ ಕಳೆದ ಎರಡು ಪಂದ್ಯಗಳಲ್ಲಿ ಇಂಪ್ಯಾಕ್ಸ್ ಪ್ಲೇಯರ್ ಆಗಿ ಆಡಿದ್ದ ರಜತ್ ಪಾಟಿದಾರ್ ಇದೀಗ ನಾಯಕನಾಗಿ ಅಂಗಣಕ್ಕೆ ಮರಳಿದ್ದಾರೆ. ಈ ಪಂದ್ಯಕ್ಕೆ ಆರ್‌ಸಿಬಿ ತಂಡದ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆಯನ್ನು ತರಲಾಗಿದೆ ಎಂದು ಟಾಸ್ ವೇಳೆ ರಜತ್ ಪಾಟಿದಾರ್ ತಿಳಿಸಿದ್ದಾರೆ. ಕಳೆದ ಕೆಲ ಪಂದ್ಯಗಳಿಂದ ಅಲಭ್ಯರಾಗಿದ್ದ ಜಾಶ್ ಹೇಝಲ್‌ವುಡ್ ಮಹತ್ವದ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XIಗೆ ಮರಳಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ಪಂದ್ಯವನ್ನು ಆಡಿದ್ದ ನುವಾನ್ ತುಷಾರ ತಮ್ಮ ಸ್ಥಾನವನ್ನು ಕಳೆದುಕೊಂಡಿದ್ದಾರೆ.
ಇತ್ತಂಡಗಳ ಪ್ಲೇಯಿಂಗ್ XI
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟಿದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ(ವಿ.ಕೀ), ರೊಮ್ಯಾರಿಯೋ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜಾಶ್ ಹೇಝಲ್‌ವುಡ್, ಸುಯಶ್ ಶರ್ಮಾ
ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಪ್ರಭ್‌ಸಿಮ್ರನ್ ಸಿಂಗ್, ಜಾಶ್ ಇಂಗ್ಲಿಸ್ (ವಿ.ಕೀ), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯ್ನಿಸ್, ಅಝಮತ್‌ವುಲ್ಲಾ ಒಮರ್ಜಾಯ್, ಹರ್‌ಪ್ರೀತ್ ಬ್ರಾರ್, ಅರ್ಷದೀಪ್ ಸಿಂಗ್, ಕೈಲ್ ಜೇಮಿಸನ್