ಮುಲ್ಲಾನ್‌ಪುರ್ (ಚಂಡೀಗಢ): ಗುರುವಾರ ಚಂಡೀಗಢದ ಮುಲ್ಲಾನ್‌ಪುರ ಕ್ರೀಡಾಂಗಣದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್(RCB vs PBKS) ವಿರುದ್ಧದ ಮೊದಲ ಕ್ವಾಲಿಫೈಯರ್(IPL Qualifier 1) ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ 8 ವಿಕೆಟ್ ಭರ್ಜರಿಯಾಗಿ ಗೆಲುವು ಸಾಧಿಸಿ 9 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ನೂತನ ದಾಖಲೆಯೊಂದನ್ನು ನಿರ್ಮಿಸಿದೆ.
60 ಎಸೆತ ಬಾಕಿ ಇರುವಂತೆಯೇ ಗೆಲುವು ಸಾಧಿಸಿದ ಆರ್‌ಸಿಬಿ ಪ್ಲೇ ಆಫ್ ಅಥವಾ ನಾಕೌಟ್ ಪಂದ್ಯಗಳಲ್ಲಿ ಚೇಸಿಂಗ್ ವೇಳೆ ಅತಿ ದೊಡ್ಡ ಗೆಲುವು ಸಾಧಿಸಿದ ಮೊದಲ ತಂಡ ಎನಿಸಿತು. ಇದಕ್ಕೂ ಮುನ್ನ ಈ ದಾಖಲೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಹೆಸರಿನಲ್ಲಿತ್ತು. 2024ರ ಫೈನಲ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 57 ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತ್ತು.
ದಾಖಲೆ ಬರೆದ ಪಾಟೀದಾರ್
ಆರ್‌ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ನಾಯಕನಾಗಿ ಮೊದಲ ಆವೃತ್ತಿಯಲ್ಲೇ ಐಪಿಎಲ್ ಫೈನಲ್‌ಗೇರಿದ 10ನೇ ನಾಯಕ ಎನಿಸಿಕೊಂಡರು. ಶೇನ್ ವಾರ್ನ್, ಎಂ.ಸ್ ಧೋನಿ, ಅನಿಲ್ ಕುಂಬ್ಳೆ, ವೆಟ್ಟೋರಿ, ರೋಹಿತ್ ಶರ್ಮ, ಜಾರ್ಜ್ ಬೈಲಿ, ಕೇನ್ ವಿಲಿಯಮ್ಸನ್, ಹಾರ್ದಿಕ್ ಪಾಂಡ್ಯ, ಪ್ಯಾಟ್ ಕಮಿನ್ಸ್ ಹಿಂದಿನ ಸಾಧಕರು.
ಇದನ್ನೂ ಓದಿ IPL 2025: ʻದಿಗ್ವೇಶ್ ರಾಠಿಯನ್ನು ಬ್ಯಾನ್ ಮಾಡಬಾರದಿತ್ತುʼ-ಎಲ್‌ಎಸ್‌ಜಿ ಬೌಲರ್‌ಗೆ ಸೆಹ್ವಾಗ್ ಬೆಂಬಲ!
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್ ಶೋಚನೀಯ ಬ್ಯಾಟಿಂಗ್ ಪ್ರದರ್ಶನದ ಮೂಲಕ 14.1 ಓವರ್‌ನಲ್ಲಿ 101 ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ 10 ಓವರಲ್ಲಿ 2 ವಿಕೆಟ್ ನಷ್ಟಕ್ಕೆ 106 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಆರ್‌ಸಿಬಿ ವಿರುದ್ಧ ಸೋಲು ಕಂಡ ಪಂಜಾಬ್ ಕಿಂಗ್ಸ್ ತಂಡಕ್ಕೆ ಫೈನಲ್ ಪ್ರವೇಶಿಸಲು ಮತ್ತೊಂದು ಅವಕಾಶವಿದೆ. ಶುಕ್ರವಾರ ನಡೆಯುವ ಎಲಿಮಿನೇಟರ್ ಪಂದ್ಯದ ವಿಜೇತರನ್ನು ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಎದುರಿಸಲಿದೆ. ಇಲ್ಲಿ ಗೆದ್ದರೆ ಫೈನಲ್ ಪ್ರವೇಶಿಸಬಹುದು.