ನವದೆಹಲಿ: ಪ್ರತಿ ವರ್ಷ ಮೇ ಮತ್ತು ಜೂನ್ ತಿಂಗಳುಗಳಲ್ಲಿ, ಕರ್ನಲ್ ವೀರೇಂದ್ರ ಥಾಪರ್ ಎಂಬುವವರು ದೆಹಲಿಯಿಂದ ಕಾರ್ಗಿಲ್‌ನ ಡ್ರಾಸ್‌ಗೆ ಭೇಟಿ ನೀಡುತ್ತಾರೆ. ಕರ್ನಲ್ ವೀರೇಂದ್ರ ಥಾಪರ್ ಅವರ ಕಾರ್ಗಿಲ್ ಪ್ರಯಾಣದ ಹಿಂದೆ ಒಂದು ಮನಕಲುಕುವ ಕಥೆ ಇದೆ. ಕರ್ನಲ್ ವೀರೇಂದ್ರ ಥಾಪರ್ ವರ್ಷಗಳ ಹಿಂದೆ ತನ್ನ ಮಗನಿಗೆ ನೀಡಿದ ಮಾತನ್ನು ಉಳಿಸಿಕೊಳ್ಳಲು ಇಲ್ಲಿಗೆ ಭೇಟಿ ನೀಡುತ್ತಾರಂತೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.1999ರ ಮೇ ಮತ್ತು ಜುಲೈ ನಡುವೆ, ದೇಶದೊಳಗೆ ನುಸುಳಿ ಸೇನೆಯ ಕಾರ್ಯತಂತ್ರದ ಪ್ರದೇಶಗಳನ್ನು ಆಕ್ರಮಿಸಿಕೊಂಡಿದ್ದ ಪಾಕಿಸ್ತಾನದ ವಿರುದ್ಧ ಭಾರತ ಕಾರ್ಗಿಲ್ ಯುದ್ಧ(Kargil War)ವನ್ನು ನಡೆಸಿತ್ತು. ಈ ಪ್ರದೇಶದ ಮೇಲೆ ಹಿಡಿತ ಸಾಧಿಸಲು ಭಾರತೀಯ ಸೈನಿಕರು ಹೋರಾಡಿದ್ದಾರೆ. ಈ ಯುದ್ಧದಲ್ಲಿ ಕರ್ನಲ್ ವೀರೇಂದ್ರ ಥಾಪರ್ ಅವರ ಪುತ್ರ 22 ವರ್ಷದ ಲೆಫ್ಟಿನೆಂಟ್ ವಿಜಯಂತ್ ಥಾಪರ್(Vijyant Thapar)ಸೇರಿದಂತೆ 527 ಭಾರತೀಯ ಸೈನಿಕರು ಈ ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ.
ಲೆಫ್ಟಿನೆಂಟ್ ವಿಜಯಂತ್ ಥಾಪರ್ ತನ್ನ ಪೋಷಕರಿಗೆ ಬರೆದ ಕೊನೆಯ ಪತ್ರದಲ್ಲಿ, ಅವರು ತಮ್ಮ ತಂದೆಯ ಬಳಿ ತಾವು ಹುತಾತ್ಮರಾದ ಸ್ಥಳಕ್ಕೆ ಭೇಟಿ ನೀಡುವಂತೆ ಮತ್ತು ಧೈರ್ಯದಿಂದ ಆ ಸ್ಥಳದಲ್ಲಿ ನಿಲ್ಲುವಂತೆ ಬರೆದಿದ್ದಾರೆ. ಮಗನ ಆ ಮಾತನ್ನು ನೇರವೇರಿಸುವುದಕ್ಕಾಗಿ, ಕರ್ನಲ್ ಥಾಪರ್ ಪ್ರತಿ ವರ್ಷ ಡ್ರಾಸ್‌ಗೆ ಭೇಟಿ ನೀಡಿ ತನ್ನ ಮಗನ ಧೈರ್ಯ ಮತ್ತು ತ್ಯಾಗಕ್ಕೆ ಗೌರವ ಸಲ್ಲಿಸುತ್ತಾರೆ. ವರದಿ ಪ್ರಕಾರ, ಕ್ಯಾಪ್ಟನ್ ಥಾಪರ್ ತನ್ನ ಪೋಷಕರ ಬಳಿ ಅನಾಥಾಶ್ರಮಕ್ಕೆ ದೇಣಿಗೆ ನೀಡುವಂತೆ ಮತ್ತು ರುಕ್ಸಾನಾ ಎಂಬ ಚಿಕ್ಕ ಹುಡುಗಿಗೆ ನಿಯಮಿತವಾಗಿ 50 ರೂ.ಗಳನ್ನು ನೀಡುವುದನ್ನು ಮುಂದುವರಿಸುವಂತೆ ವಿನಂತಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಕರ್ನಲ್ ವೀರೇಂದ್ರ ಥಾಪರ್ ಐಜಿಐ ವಿಮಾನ ನಿಲ್ದಾಣದಲ್ಲಿ ನಿಂತಿರುವ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಲವಾರು ನೆಟ್ಟಿಗರು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಇದನ್ನು ಹೃದಯಸ್ಪರ್ಶಿ ಕ್ಷಣ ಎಂದು ಕರೆದಿದ್ದಾರೆ. “ಮಗನಿದ್ದ ಆ ಸ್ಥಳವನ್ನು ಸ್ಪರ್ಶಿಸುವುದು, ತಂದೆಗೆ ಬೆಚ್ಚಗಿನ ಅಪ್ಪುಗೆಯನ್ನು ನೀಡಿದಂತಾಗುತ್ತದೆ” ಎಂದು ಒಬ್ಬ ನೆಟ್ಟಿಗರು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಹೈಹೀಲ್ಸ್ ಧರಿಸಿ ಓಡಾಡಿದ ಗೋಲ್ಡನ್ ರಿಟ್ರೈವರ್; ಮಾಲೀಕರ ಮೇಲೆ ಕಿಡಿಕಾರಿದ ನೆಟ್ಟಿಗರು
ಕ್ಯಾಪ್ಟನ್ ವಿಜಯಂತ್ ಥಾಪರ್ ಡಿಸೆಂಬರ್ 29, 1976 ರಂದು ಪಂಜಾಬ್‌ನ ನಂಗಲ್‌ನಲ್ಲಿ ಜನಿಸಿದ್ದಾರೆ. ಅವರು ಡಿಸೆಂಬರ್ 1998ರಲ್ಲಿ ಭಾರತೀಯ ಮಿಲಿಟರಿ ಅಕಾಡೆಮಿಯಿಂದ ಪದವಿ ಪಡೆದಿದ್ದಾರೆ. “ವಿಜಯಂತ್ ಅಟ್ ಕಾರ್ಗಿಲ್: ದಿ ಬಯಾಗ್ರಫಿ ಆಫ್ ಎ ವಾರ್ ಹೀರೋ” ಎಂಬ ಅವರ ಜೀವನ ಚರಿತ್ರೆಯನ್ನು ನೇಹಾ ದ್ವಿವೇದಿ ಬರೆದಿದ್ದಾರೆ. ಈ ಪುಸ್ತಕವು ವಿಜಯಂತ್ ಅವರ ಬಾಲ್ಯದಿಂದ ಹಿಡಿದು ಭಾರತೀಯ ಮಿಲಿಟರಿ ಅಕಾಡೆಮಿಯವರೆಗಿನ ಜೀವನದಲ್ಲಿ ಅವರು ನಡೆದು ಬಂದ ದಾರಿಯನ್ನು ತಿಳಿಸಲಾಗಿದೆ.