ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಅವರಿಗೆ ನೀಡಲಾಗಿದ್ದ ರಾಜ್ಯ ಸಚಿವ ಸ್ಥಾನಮಾನ ಹಾಗೂ ರಾಜ್ಯ ಸಚಿವರ ದರ್ಜೆಗೆ ಅನ್ವಯಿಸುವ ಎಲ್ಲಾ ಸೌಲಭ್ಯಗಳನ್ನು ತಕ್ಷಣದಿಂದ ಜಾರಿಗೆ ರಾಜ್ಯ ಸರ್ಕಾರ ಹಿಂಪಡೆದಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ-2 ಬಾಣದರಂಗಯ್ಯ ಎನ್.ಆರ್. ಆದೇಶ ಹೊರಡಿಸಿದ್ದಾರೆ.
ಅಧಿಕಾರ ದುರುಪಯೋಗ, ಭ್ರಷ್ಟಾಚಾರ. ಬೈಲಾ ತಿದ್ದುಪಡಿಯಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ಮಹೇಶ್ ಜೋಶಿ ಅವರನ್ನು ವಜಾಗೊಳಿಸಿ, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಕನ್ನಡ ಸಾಹಿತ್ಯ ಪರಿಷತ್ ಪ್ರೇಮಿಗಳು ಹಾಗೂ ಜನಪರ ಸಂಘಟನೆಗಳ ವೇದಿಕೆ ಸದಸ್ಯರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಮಹೇಶ್ ಜೋಶಿ ಅವರಿಗೆ ನೀಡಲಾಗಿದ್ದ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ಹಿಂಪಡೆಯುವಂತೆ ಒತ್ತಾಯ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸರ್ಕಾರ ಈ ಕ್ರಮ ಕೈಗೊಂಡಿದೆ.