ಲಖನೌ: ಉತ್ತರ ಪ್ರದೇಶದ (Uttar Pradesh) ಗೋರಖ್‌ಪುರದ (Gorakhpur) ವಾರಾಣಸಿ-ಗೋರಖ್‌ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ (Four Youths Killed). ಬಡಹಲ್‌ಗಂಜ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರೊಂದು ಎದುರಿನಿಂದ ಬಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರು ಯುವಕರು ಸುಮಾರು 12 ಅಡಿ ಎತ್ತರಕ್ಕೆ ಎಗರಿದ್ದಾರೆ. ಬಾನೆಟ್‌ಗೆ ಸಿಲುಕಿ ಇನ್ನಿಬ್ಬರು ಯುವಕರನ್ನು ಕಾರು ಚಾಲಕ ಸುಮಾರು 100 ಮೀಟರ್ ಎಳೆದೊಯ್ದಿದ್ದಾನೆ.
ಕಾರು ಚಾಲಕ ಬ್ರೇಕ್ ಹಾಕಿದಾಗ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟರೆ, ನಾಲ್ಕನೇ ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.
ಮೃತರು ಗರ್ಥೌಲಿ ಗ್ರಾಮದ ನಿವಾಸಿಗಳಾಗಿದ್ದು, ಪ್ರದ್ಯುಮನ, ಸುನೀಲ್, ಅರವಿಂದ್ ಮತ್ತು ರಾಹುಲ್ ಎಂದು ಗುರುತಿಸಲಾಗಿದೆ. ಈ ನಾಲ್ವರೂ ಪೇಂಟಿಂಗ್ ಕೆಲಸ ಮಾಡುತ್ತಿದ್ದರು. ಪ್ರದ್ಯುಮನ, ಸುನೀಲ್ ಮತ್ತು ಅರವಿಂದ್ ಒಂದೇ ಕುಟುಂಬದ ಸದಸ್ಯರಾಗಿದ್ದು, ರಾಹುಲ್ ಅವರ ಸ್ನೇಹಿತನಾಗಿದ್ದ. ಸುನೀಲ್ ವಿವಾಹಿತನಾಗಿದ್ದು, ಆತನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ರಾಹುಲ್ ತನ್ನ ಪೋಷಕರ ಏಕೈಕ ಮಗನಾಗಿದ್ದು, ಜೂನ್ 1ರಂದು ಆತನ ನಿಶ್ಚಿತಾರ್ಥ ನಿಗದಿಯಾಗಿತ್ತು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮತ್ತು ಮೃತರ ಕುಟುಂಬದವರು ಸ್ಥಳಕ್ಕೆ ಧಾವಿಸಿದರು. ದಾರುಣ ದೃಶ್ಯವನ್ನು ಕಂಡು ಕಣ್ಣೀರಿಟ್ಟಿದ್ದಾರೆ.
“ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಕಾರಿನಲ್ಲಿದ್ದ ದಾಖಲೆಗಳು ಮತ್ತು ಸಿಸಿಟಿವಿ ದೃಶ್ಯಾವಳಿಯ ಆಧಾರದ ಮೇಲೆ ಚಾಲಕನ ಶೋಧ ಕಾರ್ಯ ನಡೆಯುತ್ತಿದೆ. ಆರೋಪಿ ಚಾಲಕನನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಸರ್ಕಲ್ ಆಫೀಸರ್ ಮನೋಜ್ ಕುಮಾರ್ ಪಾಂಡೆ ತಿಳಿಸಿದ್ದಾರೆ.