Karunadu Studio

ಕರ್ನಾಟಕ

Rangaswamy Mookanahalli Column: ಏನೂ ಮಾಡಲಿಕ್ಕಾಗದು, ಬೆಳಕಿನ ಕೆಳಗೆ ಸದಾ ಕತ್ತಲೆಯೇ..! – Kannada News | There’s nothing you can do, it’s always dark under the light..!


ವಿಶ್ವರಂಗ

ಯುರೋಪಿನ ಬಹುತೇಕ ದೇಶಗಳಲ್ಲಿ ಸರಕಾರಿ ಕೆಲಸಗಾರರಿಗೂ ಮತ್ತು ಖಾಸಗಿ ಸಂಸ್ಥೆಗಳಲ್ಲಿ ದುಡಿಯುವವರಿಗೂ ಅಂಥ ವ್ಯತ್ಯಾಸವೇನಿಲ್ಲ. ಇದಕ್ಕೆ ಮುಖ್ಯ ಕಾರಣ ಇಲ್ಲಿ ಎಲ್ಲರಿಗೂ ನಿವೃತ್ತಿ ಭತ್ಯೆಯಿದೆ. ಕೆಲಸ ಹೋದರೆ ಎರಡು ವರ್ಷದವರೆಗೆ ಅನ್-ಎಂಪ್ಲಾಯ್ಮೆಂಟ್ ಭತ್ಯೆ ಕೂಡ ಸಿಗುತ್ತೆ. ಎಲ್ಲಕ್ಕೂ ಮುಖ್ಯವಾಗಿ ಜುಲೈ ಮತ್ತು ಆಗ ತಿಂಗಳಲ್ಲಿ ಒಂದು ತಿಂಗಳು ಎಲ್ಲರಿಗೂ ಕಡ್ಡಾಯ ರಜಾ ಸಿಗುತ್ತೆ. ಇದಕ್ಕಿಂತ ಖುಷಿಯ ವಿಷಯವೆಂದರೆ ಆ ತಿಂಗಳಲ್ಲಿ ವೇತನ ಕೂಡ ದುಪ್ಪಟ್ಟು ಕೊಡುತ್ತಾರೆ. ಯುರೋಪಿನ ದೇಶಗಳಲ್ಲಿ ಜೀವನಮಟ್ಟ ಅತ್ಯುನ್ನತ. ಇದೇ ಮಾತನ್ನ ಇಂಗ್ಲೆಂಡ್ ಮತ್ತು ಅಮೆರಿಕ ದೇಶಕ್ಕೆ ಅನ್ವಯಿಸಲು ಬರುವುದಿಲ್ಲ. ತಿಂಗಳು ಪೂರ್ತಿ ಸಾಮಾನ್ಯರಿಗೂ ರಜಾ ಸಿಗುವುದು ಕಷ್ಟ , ಇರಲಿ.

ಎಲ್ಲವೂ ಬಹಳ ಚೆನ್ನಾಗಿ ಇರಲು ಹೇಗೆ ಸಾಧ್ಯ ಅಲ್ವಾ? ಯುರೋಪಿನಲ್ಲಿ ಸಾಮಾನ್ಯವಾಗಿ ಆರು ತಿಂಗಳು, ವರ್ಷ ಅಥವಾ ಎರಡು ವರ್ಷದ ವರ್ಕ್ ಕಾಂಟ್ರಾಕ್ಡ್ ಕೊಡುತ್ತಾರೆ. ಅವಧಿ ಮುಗಿದ ನಂತರ ಅದನ್ನು ಅವರು ನವೀಕರಿಸಬಹುದು ಅಥವಾ ನವೀಕರಿಸದೆ ಕೂಡ ಇರಬಹುದು. ಹೀಗಾಗಿ ಇಲ್ಲಿನ ಸಾಮಾನ್ಯ ಪ್ರಜೆ ಸದಾ ಹೊಸ ಕೆಲಸದ ಬೇಟೆಯಲ್ಲಿ ತೊಡಗಿರುತ್ತಾನೆ. ಪರ್ಮನೆಂಟ್ ವರ್ಕ್ ಅಥವಾ ಜಾಬ್ ಸೆಕ್ಯುರಿಟಿ ಎನ್ನುವುದು ಇಲ್ಲಿ ಅರ್ಥ ಪಡೆದುಕೊಳ್ಳುವುದಿಲ್ಲ. ಇನಿದ್ದರೂ ಸದಾ ಹುಡುಕಾಟ! ‌

ಭಾರತದಲ್ಲಿ ಕೆಲಸ ಮಾಡುವ ವಾತಾವರಣ, ನೀಡುವ ಹಣ, ರಜೆ ಇವೆಲ್ಲವೂ ಮಾಲೀಕರಿಗೆ ಅನುಕೂಲವಾಗುವಂತಿದೆ. ಇಲ್ಲಿ ಕೆಲಸಗಾರ ಹೆಚ್ಚಿನ ಮಾತನ್ನು ಆಡಲು ಸಾಧ್ಯವಿಲ್ಲ. ಎಲ್ಲವೂ ಮಾಲೀಕನಿಗೆ ಅನುಕೂಲಕರವಾಗಿದ್ದು ಕೂಡ ಇಲ್ಲಿ ಮಾಲೀಕನಿಗೆ ಬೆಲೆಯಿಲ್ಲ!

ಏಕೆಂದರೆ ಗ್ರೌಂಡ್ ಲೆವೆಲ್‌ನಲ್ಲಿ ಕೆಲಸ ಮಾಡುವ ವ್ಯಕ್ತಿ ಕೆಲಸ ಬಿಡುವುದಕ್ಕೆ ಹಿಂಜರಿಯುವುದಿಲ್ಲ. ಹೋಟೆಲ್ ಇರಬಹುದು, ಶಾಲೆ, ಕಾಲೇಜು, ಬಟ್ಟೆ ಅಂಗಡಿ, ಹೀಗೆ ವ್ಯಾಪಾರ ಯಾವುದೇ ಇರಲಿ ಅಲ್ಲಿನ ಮಾಲೀಕರನ್ನು ಒಮ್ಮೆ ಮಾತನಾಡಿಸಿ ನೋಡಿ, ಜನ ಕೆಲಸಕ್ಕೆ ಸಿಗುತ್ತಿಲ್ಲ ಎನ್ನುವುದು ಅವರ ಸಾಮಾನ್ಯ ಮಾತು. ಇನ್ನು ಅತ್ಯುನ್ನತ ಕೌಶಲ ಹೊಂದಿರುವ ವ್ಯಕ್ತಿಯನ್ನು ಕೂಡ ಉಳಿಸಿಕೊಳ್ಳಲು ಸಂಸ್ಥೆಗಳು ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತವೆ. 150 ಕೋಟಿ ಜನಸಂಖ್ಯೆಯ ಭಾರತದಲ್ಲಿ ಇದೊಂದು ವಿಚಿತ್ರ ಸನ್ನಿವೇಶ. ಒಂದು ವರ್ಗ ಕೆಲಸವಿಲ್ಲ ಎಂದು ಪರಿತಪಿಸುತ್ತದೆ.

ಕೆಲಸ ಸೃಷ್ಟಿಯಾಗುತ್ತಿಲ್ಲ ಎನ್ನುವ ತಲೆಬರಹವನ್ನು ಮಾಧ್ಯಮಗಳಲ್ಲಿ ನಾವು ನೋಡುತ್ತಲೇ ಇರುತ್ತೇವೆ. ವಿರೋಧ ಪಕ್ಷದಲ್ಲಿ ಯಾರೇ ಇರಲಿ, ‘ಆಡಳಿತ ಪಕ್ಷ ಕೆಲಸ ಸೃಷ್ಟಿ ಮಾಡುವಲ್ಲಿ ಸೋತಿದೆ’ ಎನ್ನುವ ಆರೋಪ ಅವರಿಂದ ಹೊಮ್ಮುವುದು ಕೂಡ ಸಾಮಾನ್ಯ. ಜಗತ್ತಿಗೆ ಮಾನವ ಸಂಪನ್ಮೂಲವನ್ನು ನೀಡುವ ಅತ್ಯದ್ಭುತ ಅವಕಾಶ ನಮ್ಮ ಮುಂದಿದೆ.

ಯುರೋಪು, ಜಪಾನ್ ಮತ್ತಿತರ ದೇಶಗಳಲ್ಲಿ ತೀವ್ರವಾಗಿ ಕುಸಿಯುತ್ತಿರುವ ಜನಸಂಖ್ಯೆ ನಮಗೆ ವರದಾನವಾಗಬಹುದು. ಆದರೆ ಮಲಗಿರುವ ನಮ್ಮ ಜನತೆಯನ್ನು ಎಬ್ಬಿಸುವುದು ಹೇಗೆ? ನಿಮಗೆ ಗೊತ್ತಿರುವಂತೆ ಜಗತ್ತಿನಾದ್ಯಂತ ಹಲವಾರು ಕ್ರೂಜ್ ಶಿಪ್‌ಗಳು ಜನರನ್ನು ಹೊತ್ತು ಓಡಾಡುತ್ತವೆ. ಅಲ್ಲಿ ಅತಿಥಿಗಳಿಗೆ ನೀಡುವ ಸತ್ಕಾರ ಬೆರಗುಗೊಳಿಸುತ್ತದೆ. ಆದರೆ ಅಲ್ಲಿ ಕೆಲಸ ಮಾಡುವವರ ಬಗ್ಗೆ ಯಾರೂ ಚಿಂತಿಸುವುದಿಲ್ಲ.

ನನ್ನಪ್ಪ ಬದುಕು ಪೂರ್ತಿ ಸಣ್ಣಪುಟ್ಟ ಕೆಲಸಗಳಿಗೆ ಎಡತಾಕುತ್ತ ಜೀವನ ಸವೆಸಿದ ಕಾರಣ, ಕೆಲಸ ಹೋಯ್ತು ಎಂದಾಗ ಮನೆಯಲ್ಲಿ ಉಂಟಾಗುತ್ತಿದ್ದ ವಾತಾವರಣ ಕಂಡು ಬೆಳೆದ ಕಾರಣ, ಎಲ್ಲಿಗೆ ಹೋದರೂ ನನ್ನ ದೃಷ್ಟಿ ಬೇರೆಯದಿರುತ್ತದೆ. ನಾವು ಆಯ್ಕೆ ಮಾಡಿದ್ದ ಕ್ರೂಜ್ ಅಂದಿಗೆ ವಿಶ್ವದ ಅತ್ಯಂತ ದೊಡ್ಡ ಕ್ರೂಜ್ ಎನ್ನುವ ಹಣೆಪಟ್ಟಿ ಹೊತ್ತಿತ್ತು. ಆ ಕ್ರೂಜ್ ಶಿಪ್ ಹನ್ನೆರಡು ಮಹಡಿಯ ಕಟ್ಟಡ! ಹೆಸರು ಲಿಬರ್ಟಿ ಆಫ್ ಸೀಸ್.

ಅದರಲ್ಲಿ 5200 ಜನ ಪ್ರಯಾಣಿಕರಿದ್ದೆವು. 3800 ಜನ ಗೆ‌ಸ್ಟ್‌ ಗಳು. ಉಳಿದ 1400 ಜನ ಆ ಶಿಪ್‌ನಲ್ಲಿ ಕೆಲಸ ಮಾಡುವ ಜನ. ನಿಜ ಅದೊಂದು ಪುಟ್ಟ ನಗರವಿದ್ದಂತೆ. ಗೆ‌ಸ್ಟ್‌ ಗಳ ಬೇಕು ಬೇಡವನ್ನ ನೋಡಿಕೊಳ್ಳಲು ಅಷ್ಟೊಂದು ಜನ ಸಿಬ್ಬಂದಿ. ಯಾವುದೇ ಕಾರಣಕ್ಕೂ ಗೆ‌ಸ್ಟ್‌ ಗೆ ಬೇಜಾರಾಗ ಬಾರದು ಎನ್ನುವುದು ಅವರ ಮೂಲಮಂತ್ರ. ಅದೊಂದು ಮಾಯಾನಗರಿ. ನಾವು ಪ್ರವೇಶ ಮಾಡು ತ್ತಿದಂತೆ ಕೈಗೆ ಒಂದು ಬ್ಯಾಂಡ್ ತೊಡಿಸುತ್ತಾರೆ. ಅದು ನಮ್ಮ ದರ್ಜೆ ತೋರಿಸುವ ಬ್ಯಾಂಡ್. ಇಲ್ಲಿ ರೂಮ್ ಕೂಡ ಕಾಸಿಗೆ ತಕ್ಕಂತೆ ಸಿಗುತ್ತವೆ. ಮಕ್ಕಳ ಕೈಗೂ ಬ್ಯಾಂಡ್ ಹಾಕುತ್ತಾರೆ.

ಆಕಸ್ಮಾತ್ ಅವುಗಳು ನಮ್ಮಿಂದ ತಪ್ಪಿಸಿಕೊಂಡರೆ ಹೆದರುವ ಅವಶ್ಯಕತೆ ಇಲ್ಲ! ಅವರನ್ನ ಸುಲಭ ವಾಗಿ ಟ್ರ್ಯಾಕ್ ಮಾಡಬಹುದು. ಬಾಲ್ಕನಿ ಇರುವ ರೂಮ್ ಅತ್ಯಂತ ಹೆಚ್ಚಿನ ಬೆಲೆ ಉಳ್ಳದ್ದು. ಕಿಟಕಿ, ಹೊರಗಿನ ಯಾವುದೇ ವ್ಯೂ ಇಲ್ಲದ ಕೊಠಡಿಗೆ ಬೆಲೆ ಕಡಿಮೆ. ಅವರವರ ಜೇಬಿಗೆ ತಕ್ಕಂತೆ ಬುಕ್ ಮಾಡಿಕೊಳ್ಳಬಹುದು. ನಾವು ಸಮುದ್ರದ ವ್ಯೂ ಇರುವ ಬಾಲ್ಕನಿ ರೂಮ್ ಬುಕ್ ಮಾಡಿದ್ದೆವು. ರಾತ್ರಿಯಲ್ಲಿ ಬಾಲ್ಕನಿಯಲ್ಲಿ ಕುಳಿತು ಸಮುದ್ರದ ಮೇಲೆ ಮಾಡುವ ಹನ್ನೆರಡು ದಿನದ ಪ್ರಯಾಣ ಜೀವನದ ಅತ್ಯಂತ ಅಮೂಲ್ಯ ನೆನಪುಗಳಲ್ಲಿ ಒಂದು.

ಕ್ರೂಜ್ ಬುಕ್ ಮಾಡುವವರು ಒಂದು ಅಂಶವನ್ನ ನೆನಪಿಡಬೇಕು. ಬುಕಿಂಗ್ ಮಾಡುವಾಗ ಟಿಪ್ಸ್ ಸೇರಿಸಿ ಬುಕ್ ಮಾಡುವುದು ಒಳ್ಳೆಯದು. ಇಲ್ಲಿ ಎಲ್ಲವೂ ಬಹಳ ದುಬಾರಿ. ಟಿಪ್ಸ್ ಸೇರಿಸಿ ಬುಕ್ ಮಾಡಿದ್ದರೂ ಅಲ್ಲಿನ ಕೆಲಸಗಾರರು ಟಿಪ್ಸ್ ಕೊಡುತ್ತೀರೇನೋ ಎನ್ನುವಂತೆ ನಿಮ್ಮನ್ನು ನೋಡು‌ ತ್ತಾರೆ. ನಾವಿದ್ದ ರೂಮಿಗೆ ಒಬ್ಬ ಆಫ್ರಿಕನ್ ಮಹಿಳೆಯನ್ನು ಪರ್ಮನೆಂಟ್ ಆಗಿ ನೇಮಿಸಿದ್ದರು. ನಮ್ಮೆ ಬೇಕು ಬೇಡಗಳಿಗೆ ಆಕೆ ತಕ್ಷಣ ಸ್ಪಂದಿಸುತ್ತಿದ್ದಳು. ಹೊರಡುವ ದಿನ ಆಕೆಗೆ ನೂರು ಯುರೋ ಕೊಟ್ಟೆ, ಆಕೆಯ ಹೊಳೆವ ಕಂಗಳ ಮರೆವುದೆಂತು?

ನಾವಿದ್ದ ಲಿಬರ್ಟಿ ಆಫ್ ಸೀಸ್ ಶಿಪ್‌ನಲ್ಲಿ ನಾಲ್ಕೈದು ಸಿನಿಮಾ ಥಿಯೇಟರ್ ಇದ್ದವು. ಅಲ್ಲಿ ದಿನಕ್ಕೊಂದು ಹಿಂದಿ ಸಿನಿಮಾ ಕೂಡ ಹಾಕುತ್ತಿದ್ದರು. ಮ್ಯಾಜಿಕ್ ಷೋ, ಡಾಲಿನ್ ಷೋ, ಟಾಕ್ ಷೋ, ಕಾಮಿಡಿ ಷೋ, ಡಾ ಷೋ, ಓಹ್ ಒಂದೇ ಎರಡೇ? ಗೆಗಳ ಮನರಂಜನೆಗೆ ಅವರು ಮಾಡುವ ಕಸರತ್ತು ಮೆಚ್ಚಲೇಬೇಕು. ಈ ಶಿಪ್ ಹನ್ನೆರಡು ಮಹಡಿಯದ್ದು, ಎಲ್ಲಕ್ಕೂ ಮೇಲಿನ ಮಹಡಿಯನ್ನ ಆಕಾಶಕ್ಕೆ ತೆರೆದು ಬಿಟ್ಟಿರುತ್ತಾರೆ. ಅಲ್ಲಿ ಜಾಗಿಂಗ್ ಟ್ರ್ಯಾಕ್ ಕೂಡ ಇತ್ತು. ಎರಡು ಸುತ್ತು ಹೊಡೆದರೆ ಒಂದು ಕಿಲೋಮೀಟರ್! ಅಲ್ಲಿನ ಜಾಗಿಂಗ್ ಅನುಭವ ಮರೆವುದಾದರೂ ಹೇಗೆ? ಸುಸಜ್ಜಿತ ಜಿಮ್ ಕೂಡ ಇದೆ. ಅ ಬಾರ್ ಕೂಡ ಇದೆ. ಕಾಫಿ, ಬಿಯರ್ ಅಥವಾ ನಿಮ್ಮಿಷ್ಟದ ಪೇಯ ಹಿಡಿದು ಕೂಡ ಕೂರಲು ಅವಕಾಶವಿದೆ.

ಮೊದಲ ನಾಲ್ಕು ಮಹಡಿಯಲ್ಲಿ ಕೆಲಸಗಾರರು ಮತ್ತು ಆಹಾರ ಪದಾರ್ಥ ಶೇಖರಣೆ ಜತೆಗೆ ಎಂಜಿನಿಯರಿಂಗ್ ಡಿಪಾರ್ಟ್ಮೆಂಟ್ ಮತ್ತು 25 ಬೆಡ್‌ನ ಪುಟ್ಟ ಸುಸಜ್ಜಿತ ಆಸ್ಪತ್ರೆ ಕೂಡ ಇರುತ್ತದೆ. ಇಲ್ಲಿಗೆ ಗೆಸ್ಟ್‌ ಗಳನ್ನ ಬಿಡುವುದಿಲ್ಲ. ನನಗೆ ಶಿಪ್‌ನ ಇಂಚಿಂಚೂ ನೋಡಬೇಕೆಂಬ ಹಂಬಲ. ರಾತ್ರಿಯ ಡಿನ್ನರ್ ಸಮಯದಲ್ಲಿ ಆಯ್ದ ಊಟದ ಹಾಲ್‌ಗೆ ಕ್ಯಾಪ್ಟನ್ ಭೇಟಿ ನೀಡುತ್ತಿದ್ದರು. ಹೀಗೆ ಒಂದು ರಾತ್ರಿ ನನಗೆ ಮಾತಿಗೆ ಸಿಕ್ಕರು. ಅವರ ಬಳಿ ನನ್ನಾಸೆ ಹೇಳಿಕೊಂಡೆ.

ಅವರು ಮೊದಲು ಸಾಧ್ಯವಿಲ್ಲವೆಂದರು. “ನಾನೊಬ್ಬ ಬರಹಗಾರ, ಈ ಅನುಭವಗಳು ನನಗೆ ಅತ್ಯಂತ ಅವಶ್ಯಕ” ಎಂದು ಮನವಿ ಮಾಡಿಕೊಂಡೆ. ಆತ “ಮರುದಿನ ಬೆಳಗ್ಗೆ ಏಳಕ್ಕೆ ಸಾಧ್ಯವೇ?” ಎಂದು ಕೇಳಿದರು? “ಗೆಸ್ಟ್‌ ಗಳು ಏಳುವುದಕ್ಕೆ ಮುಂಚೆ ವಿಸಿಟ್ ಮಾಡಿಬಿಡು. ಎಲ್ಲರೂ ಕೇಳಲು ಶುರುಮಾಡಿದರೆ ಕಷ್ಟ” ಎಂದರು. ಬಹಳ ಖುಷಿಯಿಂದ “ಸರಿ” ಎಂದೆ. ಮಾರನೆಯ ದಿನ ಎಂಜಿನಿ ಯರಿಂಗ್ ಡಿಪಾರ್ಟ್ಮೆಂಟ್ ಹೊಕ್ಕರೆ ಅಲ್ಲಿನ ದೃಶ್ಯ ಕಂಡು ಒಂದು ಕ್ಷಣ ಮಾತೇ ಹೊರಡಲಿಲ್ಲ.

ಪೀಣ್ಯ ಇಂಡಸ್ಟ್ರಿಯಲ್ ಏರಿಯಾದ ಯಾವುದೋ ಒಂದು ಕಾರ್ಖಾನೆಗೆ ಹೋದ ಅನುಭವವಾಯ್ತು. ‘ಬೆಳಕಿನ ಕೆಳಗೇ ಕತ್ತಲೆ’ ಎನ್ನುವ ಮಾತು ಎಷ್ಟು ಸತ್ಯ ಎನ್ನಿಸಿತು. ಮೇಲಿನ ಕೊಠಡಿಗಳಲ್ಲಿ ಕಾಣುವ ಐಷಾರಾಮದ ಜೀವನಕ್ಕೆ ಕೆಳಗಿನ ಕೊಠಡಿಗಳಲ್ಲಿ ಇವರು ಹಗಲು-ರಾತ್ರಿ ದುಡಿಯಬೇಕು. ಬದುಕೇ ಹೀಗೆ, ಜಗತ್ತಿನ ಒಂದು ಭಾಗ ಚೆನ್ನಾಗಿ ಬಾಳಬೇಕೆಂದರೆ ಉಳಿದರ್ಧ ಸಾಯಬೇಕು, ದುಡಿಯುತ್ತಲೇ ಇರಬೇಕು.

ಇಂಥ ಶಿಪ್‌ಗಳಲ್ಲಿ ಕೆಲಸ ಮಾಡುವವರಿಗೆ ಕೈ ತುಂಬಾ ಹಣವೇನೋ ಸಿಗುತ್ತದೆ. ಆದರೆ ಅವರು ಆರೆಂಟು ತಿಂಗಳು ಶಿಪ್ ಬಿಟ್ಟು ಹೊರಬರುವಂತಿಲ್ಲ. ಅದೊಂದು ಪಂಜರ. ನಾವು ಅತಿಥಿಗಳಾಗಿ ಹೋದವರು ಹತ್ತನ್ನೆರಡು ದಿನವಿದ್ದು ಹೊರಟುಬಿಡುತ್ತೇವೆ. ಅವರು? ನಮ್ಮ ಶಿಪ್ ನಲ್ಲಿ ಹೀಗೆ ಪರಿಚಯವಾದ ಪಾಂಡಿಚೇರಿ ಮೂಲದ ಒಬ್ಬ ತಮಿಳು ಹುಡುಗ ಬೇಸತ್ತು ಹೋಗಿದ್ದ.

ಅವನ ಸೀನಿಯರ್, “ಬೆರಳು ಕತ್ತರಿಸಿಕೊಂಡರೆ ಒಂದೆರಡು ದಿನ ರಜಾ ನೀಡುತ್ತಾರೆ, ಹೊರಗೆ ಸುತ್ತಾಡಲು ಕೂಡ ಹೋಗಬಹುದು” ಎನ್ನುವ ಸಲಹೆ ನೀಡಿದ್ದಾನೆ. “ಇನ್ನೇನು ಮಾಡುವುದು, ಹಾಗೇ ಮಾಡುತ್ತೇನೆ” ಎಂದವನು, ಹಾಗೇ ಮಾಡಿ ರಜಾ ಪಡೆದು ಹೊಸಗಾಳಿ ಸವಿದು ಬಂದೆ ಎನ್ನುವುದನ್ನ ಹೇಳಿದಾಗ ಒಂದು ಕ್ಷಣಕ್ಕೆ ಬೇಸರವೆನಿಸಿದರೂ ಅದರ ಇಂಟೆನ್ಸಿಟಿ ಅಷ್ಟೊಂದು ಗೊತ್ತಗಿರಲಿಲ್ಲ.

ಇಂಥವುಗಳಿಗೆ ಉತ್ತರ ಸಿಗಬೇಕಾದರೆ ನಾವು ಆ ಹಾದಿಯಲ್ಲಿ ನಡೆದಿರಬೇಕು. ಇಲ್ಲದಿದ್ದರೆ ನಮ್ಮ ಪಾಲಿಗೆ ಅದೊಂದು ಕಥೆಯಷ್ಟೇ! ಅಪ್ಪನ ಬವಣೆಯ ಜೀವನವನ್ನು ಕಂಡಿದ್ದು ಕೂಡ ನನಗೆ ಆ ಹುಡುಗನ ಮನಸ್ಥಿತಿ ಹೇಗಿರಬಹುದು ಎನ್ನುವುದರ ಬಗ್ಗೆ ಯೋಚನೆ ಬಂದಿರಲಿಲ್ಲ. ಅದಕ್ಕೆ ಕಾರಣ ನನ್ನಲ್ಲಿ ಆ ಹುಡುಗನ ಬಗ್ಗೆ ಇದ್ದದ್ದು ಕೇವಲ ‘ಸಿಂಪತಿ’. ತುಟಿಗಳ ನಡುವೆ ಹುಟ್ಟಿದ ‘ಅಯ್ಯೋ ಪಾಪ’ ಎನ್ನುವ ಪದ. ಆ ಜಾಗದಲ್ಲಿ ‘ಎಂಪತಿ’ ಇದ್ದಿದ್ದರೆ? ಆ ಹುಡುಗ ಇನ್ನಷ್ಟು ಹತ್ತಿರವಾಗುತ್ತಿದ್ದ, ಅರ್ಥವಾಗುತ್ತಿದ್ದ.

‘ಎಂಪತಿ’ ಎಂದರೆ ಅದು ನನಗೆ ಆಗಿದ್ದರೆ? ಆ ಜಾಗದಲ್ಲಿ ನಾನೇ ಇದ್ದಿದ್ದರೆ? ಎನ್ನುವ ಭಾವನೆ, ಅದು ನಿಜವಾದ ಮಮಕಾರ, ಕರುಣೆಯನ್ನು ಮನುಷ್ಯನಲ್ಲಿ ಹುಟ್ಟುಹಾಕುತ್ತದೆ. ಅದಿಲ್ಲದೆ ಮಿಕ್ಕದ್ದು ಕೇವಲ ಬಾಯಿಮಾತಿನ ಉಪಚಾರ. ಕೆಲಸವಿದೆ, ಕೆಲಸವಿಲ್ಲ ಎನ್ನುವ ಈ ಹಾವು ಏಣಿ ಆಟವನ್ನು ಬುದ್ಧಿ ತಿಳಿದ ದಿನದಿಂದ ಕೇಳುತ್ತಾ ಬಂದಿದ್ದೇನೆ. ಕಳೆದ ಮೂರ್ನಾಲ್ಕು ದಶಕದಲ್ಲಿದ್ದ ಸಮಸ್ಯೆ ನಮ್ಮ ಸಮಾಜದಲ್ಲಿ ಇಂದಿಗೂ ಜೀವಂತವಾಗಿದೆ. ಮುಂಬರುವ ದಿನಗಳಲ್ಲಿ ಈ ರೀತಿಯ ಅಸ್ಥಿರತೆ ಇನ್ನಷ್ಟು ಹೆಚ್ಚಾಗಲಿದೆ.

ಸಮಾಜದಲ್ಲಿ ಆಗಬಹುದಾದ ಸಂಭಾವ್ಯ ಬದಲಾವಣೆಯನ್ನು ಗ್ರಹಿಸುವುದು ಮತ್ತು ಅದಕ್ಕೆ ಸರಿಯಾಗಿ ನಮ್ಮನ್ನು ನಾವು ಬದಲಾಯಿಸಿಕೊಳ್ಳುತ್ತ ನಡೆಯುವುದೊಂದೇ ಸರಿಯಾದ ಮಾರ್ಗ. ನೆನಪಿರಲಿ ಕೇವಲ ಬಲಿಷ್ಠವಾದವುಗಳ ಉಳಿವು ಎನ್ನುವ ಸಿದ್ಧಾಂತ ಹಳತಾಗಿದೆ. ಇನ್ನು ಮುಂದೆ ಅಡಾಪ್ಟಬಿಲಿಟಿ, ಅಂದರೆ ಯಾವ ಜೀವಿ, ವ್ಯಕ್ತಿ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತ, ಹೊಂದಿ ಕೊಳ್ಳುತ್ತ ಹೋಗುತ್ತಾನೆ ಅಂಥ ಜೀವಿಗೆ, ವ್ಯಕ್ತಿಗೆ ಬದುಕು ಕೂಡ ತೆರೆದುಕೊಳ್ಳುತ್ತಾ ಹೋಗುತ್ತದೆ.



Source link

ADMIN

About Author

Leave a comment

Your email address will not be published. Required fields are marked *

You may also like

ಕರ್ನಾಟಕ

Microsoft: Empowering the Digital World

Microsoft is a global technology company known for shaping the modern digital experience. From its iconic Windows operating system to
ಉತ್ತರ ಕರ್ನಾಟಕ ಕರ್ನಾಟಕ

“ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ”

  • September 16, 2024
ಧಾರವಾಡ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆಯಲ್ಲಿ ವಿಭಿನ್ನ ಹಾಗೂ ವಿಶೇಷತೆಯಿಂದ ಆಚರಣೆ ಮಾಡುವ ಮೂಲಕ 95 ಸಾವಿರ ಜನರು ಪ್ರತ್ಯಕ್ಷವಾಗಿ ಭಾಗವಹಿಸಿ ರಾಜ್ಯದಲ್ಲಿಯೇ ನಂಬರ್ 1 ಸ್ಥಾನ ಪಡೆದ
Translate »