ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ರಾತ್ರಿ 7.30 ಕ್ಕೆ ಆರಂಭವಾಗಬೇಕಿರುವ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(IPL 2025 Final) ಫೈನಲ್ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs PBKS) ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿದ್ದು, ರಣರೋಚಕ ಪೈಪೋಟಿ ನಿರೀಕ್ಷಿಸಲಾಗಿದೆ. ಆದರೆ ಪಂದ್ಯ ಆರಂಭಕ್ಕೂ ಮುನ್ನವೇ ಅಹಮದಾಬಾದ್ ಮಳೆ ಸುರಿಯಲಾರಂಭಿಸಿದ್ದು(Ahmedabad Weather Forecast Live) ಸಮಾರೋಪ ಸಮಾರಂಭ ಸೇರಿ ಸಂಪೂರ್ಣ ಪಂದ್ಯ ನಡೆಯುವುದೇ ಅನುಮಾನ ಎನ್ನುವಂತಹ ಸ್ಥಿತಿ ಎದುರಾಗಿದೆ.
ಮಂಗಳವಾರ ಬೆಳಗ್ಗಿನಿಂದಲೇ ಅಹಮದಾಬಾದ್‌ನಲ್ಲಿ ತುಂತುರು ಮಳೆಯಾಗುತ್ತಿತ್ತು. ಇದೀಗ ಮಳೆ ಜೋರಾಗಿದ್ದು ಮೈದಾನಕ್ಕೆ ಕವರ್‌ಗಳನ್ನು ಹೊದಿಸಲಾಗಿದೆ. ಸಮಾರೋಪ ಸಮಾರಂಭ ಕೂಡ ನಡೆಯುವುದು ಅನುಮಾನ ಎನ್ನುವಂತಿದೆ. ಸಮಾರೋಪ ಕಾರ್ಯಕ್ರಮ ಸಂಜೆ 6 ಗಂಟೆಗೆ ನಿಗದಿಯಾಗಿದೆ. ಇದೀಗ ಮಳೆ ಬಿಡುವ ಕೊಡುವ ಸಾಧ್ಯತೆ ಕಂಡುಬರುತ್ತಿಲ್ಲ. ಪಂದ್ಯಕ್ಕೂ ಅಡ್ಡಿಪಡಿಸುವ ಸಾಧ್ಯತೆ ಅಧಿಕವಾಗಿದೆ. ಫೈನಲ್‌ಗೆ 2 ಗಂಟೆ ಹೆಚ್ಚುವರಿ ಸಮಯ ನಿಗದಿಪಡಿಸಲಾಗಿದ್ದರೂ, ಮಳೆಯಿಂದ ಮಂಗಳವಾರ ಪಂದ್ಯ ನಡೆಯದಿದ್ದರೆ ಮೀಸಲು ದಿನವಾದ ಬುಧವಾರಕ್ಕೆ ಮುಂದೂಡಿಕೆಯಾಗಲಿದೆ. 2023ರಲ್ಲೂ ಮೀಸಲು ದಿನದಂದು ಫೈನಲ್ ನಡೆದಿತ್ತು.
ಮೀಸಲು ದಿನವೂ ಪಂದ್ಯ ರದ್ದಾದರೆ?
ನಿಗದಿತ ದಿನವಾದ ಮಂಗಳವಾರ ಪಂದ್ಯ ಮಳೆಯಿಂದ ಅರ್ಧಕ್ಕೆ ನಿಂತರೆ ಮೀಸಲು ದಿನದಂದು ಹಿಂದಿನ ದಿನದಂದು ಪಂದ್ಯ ಎಲ್ಲಿಗೆ ನಿಂತಿತ್ತೋ ಅಲ್ಲಿಂದ ಮುಂದುವರಿಯುತ್ತದೆ. ಒಂದೊಮ್ಮೆ ಮೀಸಲು ದಿನದಂದೂ ಫಲಿತಾಂಶ ಬರದೇ ಹೋದರೆ, ತಲಾ ಒಂದು ಓವರ್ ಗಳ ಸೂಪರ್ ಓವರ್ ಆಡಿಸಲಾಗುತ್ತದೆ. ಮಳೆಯ ತೀವ್ರತೆಯಿಂದ ಅದೂ ಸಾಧ್ಯವಾಗದಿದ್ದರೆ ಲೀಗ್ ಹಂತದಲ್ಲಿ ಅಗ್ರಸ್ಥಾನಿಯಾಗಿದ್ದ ತಂಡವನ್ನು ವಿಜೇತರೆಂದು ಘೋಷಿಸಲಾಗುತ್ತದೆ. ಆಗ ಪಂಜಾಬ್ ಚಾಂಪಿಯನ್ ಆಗಲಿದೆ. ಅದು ಲೀಗ್ ಹಂತದಲ್ಲಿ ಅಗ್ರಸ್ಥಾನಿಯಾಗಿತ್ತು.
ಆರ್‌ಸಿಬಿ ತಂಡ 9 ವರ್ಷಗಳ ಬಳಿಕ ಮತ್ತೊಮ್ಮೆ ಪ್ರಶಸ್ತಿ ಸುತ್ತಿನಲ್ಲಿ ಸೆಣಸಾಡಲಿದೆ. ಈ ಮೊದಲು 2009, 2011 ಹಾಗೂ 2016ರಲ್ಲಿ ಫೈನಲ್‌ಗೇರಿದ್ದರೂ ತಂಡ ಸೋಲು ಕಂಡಿತ್ತು. ಆದರೆ ಈ ಸಲದ ಟೂರ್ನಿಯಲ್ಲಿ ಆರ್‌ಸಿಬಿ ಒಂದು ತಂಡವಾಗಿ ಅಮೋಘ ಸಾಧನೆ ಮಾಡಿದೆ. ಆದ್ದರಿಂದ ಕಪ್ ಗೆಲ್ಲುವ ನಿರೀಕ್ಷೆಯೂ ಹೆಚ್ಚಿದೆ. ಈಗಾಗಲೇ ಆರ್‌ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಗೆದ್ದರೆ ಭಾರೀ ಸಂಭ್ರಮಾಚರಣೆ ಮಾಡಲು ಸಿದ್ಧತೆ ಆರಂಭಿಸಿದ್ದಾರೆ.
ಇದನ್ನೂ ಓದಿ IPL 2025 Final: ಆರ್‌ಸಿಬಿ-ಪಂಜಾಬ್ ಫೈನಲ್ ಪಂದ್ಯಕ್ಕೂ ಮುನ್ನ ನಿರ್ದೇಶಕ ರಾಜಮೌಳಿ ಭಾವನಾತ್ಮಕ ಪೋಸ್ಟ್
ಫೈನಲ್ ಪಂದ್ಯಕ್ಕೂ ಮುನ್ನವೇ ನಾಯಕ ರಜತ್ ಪಾಟೀದಾರ್, “ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಗೆಲುವಿಗಾಗಿ ಬಳಹ ವರ್ಷಗಳಿಂದ ಕೊಡುಗೆ ಸಲ್ಲಿಸುತ್ತಲೇ ಬಂದಿದ್ದಾರೆ. ಈ ಬಾರಿಯ ಫೈನಲ್ ಗೆಲುವು ಕೊಹ್ಲಿ ಮತ್ತು ಅಭಿಮಾನಿಗಳಿಗೆ ಬಹಳಷ್ಟು ಅರ್ಥಪೂರ್ಣವಾಗಿರುತ್ತದೆ. ಇದನ್ನೂ ಸಾಕಾರಗೊಳಿಸಲು ನಮ್ಮ ತಂಡ ಸಿದ್ಧವಾಗಿದೆ” ಎಂದು ಶಪಥವೊಂದನ್ನು ಮಾಡಿದ್ದಾರೆ. ಇದು ಅಭಿಮಾನಿಗಳಿ ಮತ್ತಷ್ಟು ಜೋಶ್ ನೀಡಿದೆ.